ADVERTISEMENT

ಇನ್ನೂ ನನಸಾಗದ ಅಖಂಡತೆ ಕನಸು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2011, 8:35 IST
Last Updated 27 ಸೆಪ್ಟೆಂಬರ್ 2011, 8:35 IST

ಬಸವನಬಾಗೇವಾಡಿ: ಹೊತ್ತ ನೆಲ, ಹೆತ್ತ ತಾಯಿಯ ಋಣ ತಿರಿಸಲಾಗದು.  ಕನ್ನಡ ನೆಲದ ಮತ್ತು ಭಾಷೆಯ ಚಿಂತನೆ ನಮ್ಮ ಮನೆಯ ಚಿಂತನೆ ಎಂಬುದನ್ನು ಪ್ರತಿ ಯೊಬ್ಬರೂ ಅರಿಯಬೇಕು ಎಂದು ಸಾಹಿತಿ ಮಲ್ಲಿಕಾ ರ್ಜುನ ಮೇತ್ರಿ ಹೇಳಿದರು.

ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ಹಮ್ಮಿಕೊಂಡಿದ್ದ `ಅಖಂಡ ಕರ್ನಾಟಕದ ಕನಸು ನನಸು~ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೊಮ್ಮೆ ಕರ್ನಾಟಕ ಕಾವೇರಿಯಿಂದ ನರ್ಮದಾ ನದಿಯವರೆಗೆ ಹರಡಿತ್ತು ಈಗಿನ ಮಹಾರಾಷ್ಟ್ರ, ಆಂಧ್ರ, ತಮೀಳುನಾಡು, ಕೇರಳ, ಗೋವಾ ರಾಜ್ಯಗಳ ಕೆಲವು ಭಾಗಗಳನ್ನು ಒಳಗೊಂಡಿತ್ತು ಎಂಬುದು ಇತಿಹಾಸ ದಿಂದ ತಿಳಿದು ಬರುತ್ತದೆ. ವಿಜಯನಗರ ಸಾಮ್ರಾಜ್ಯ ಅವನತಿ ನಂತರ ಆದಿಲ್‌ಷಾಹಿ ಮತ್ತು ಪೇಶ್ವೆಗಳ ಪ್ರಭಾವಕ್ಕೆ ಒಳಗಾಗಿ ಕನ್ನಡದಲ್ಲಿ ಅನ್ಯ ಭಾಷೆಗಳ ಪದಗಳು ಸೇರಿಕೊಂಡವು. ಮುಂದೆ ಬ್ರಿಟಿಷರ ಒಡೆದು ಆಳುವ ನೀತಿಯಿಂದ ಒಟ್ಟಾಗಿದ್ದ ಕನ್ನಡಿಗರನ್ನು ವಿಭಜಿಸಿ ದಂತಾಯಿತು ಎಂದರು.

ಆಲೂರು ವೆಂಕಟರಾಯರು, ಡೆಪ್ಯೂಟಿ ಚನ್ನಬಸಪ್ಪ, ಹರ್ಡೆಕರ ಮಂಜಪ್ಪ ಮುಂತಾದ ಮಹನೀಯರು ಹಾಗೂ ಸಂಘ ಸಂಸ್ಥೆಗಳ ಪರಿಶ್ರಮದಿಂದ ಕನ್ನಡ ಬೆಳೆಸುವ ಮತ್ತು ಪ್ರದೇಶಗಳನ್ನು ಒಂದುಗೂಡಿಸುವ ಪ್ರಯತ್ನ ನಡೆಯಿತು. ಬ್ರಿಟಿಷ್ ಅಧಿಕಾರಿ ಫ್ಲೀಟ್ ಅವರು ಅಖಂಡ ಕರ್ನಾಟಕದ ಬೀಜ ಬಿತ್ತಿದವರಲ್ಲಿ ಒಬ್ಬರು. ಅವರು ಕನ್ನಡಿಗರಿಗೆ ಶಾಸನ ಓದುವ ಮತ್ತು ಜನಪದ ಗೀತೆಗಳನ್ನು ಕಲೆಹಾಕುವುದನ್ನು ಕಲಿಸಿ ಕೊಟ್ಟರು ಎಂದು ಹೇಳಿದರು.
 
ಭಾಷಾವಾರು ಪ್ರಾಂತ ರಚನೆಯಾದ ನಂತರ ಶೇಷಾದ್ರಿ ವರದಿಯಿಂದಾಗಿ ಮೈಸೂರು ರಾಜ್ಯ ಎಂಬ ಹೆಸರು ಪಡೆಯಿತು. ಮುಂದೆ ಕರ್ನಾಟಕ ಎಂದು ನಾಮಕರಣವಾದರೂ ಕನ್ನಡಿಗರ ಹಲವು ಪ್ರದೇಶಗಳು ಕರ್ನಾಟಕಕ್ಕೆ ಹೊಂದಿಕೊಂಡ ಅನ್ಯ ರಾಜ್ಯಗಳಲ್ಲಿ ಉಳಿದುಕೊಂಡಿವೆ. ಇದರಿಂದಾಗಿ ನಮ್ಮ ಕನಸು ನನಸಾಗಿಲ್ಲ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ,  ಮೊದಲು ತಾಯಿ ಭಾಷೆಯನ್ನು ಇಷ್ಟಪಡಬೇಕು. ಅದನ್ನು ಉಳಿಸಿಬೆಳೆಸಲು ಪ್ರಯತ್ನಿಸಬೇಕು ಎಂದರು. ಪ್ರಾಚಾರ್ಯ ವಿ.ವಿ.ದೊಡಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಬಸವ ಯುವ ಪ್ರತಿಷ್ಠಾನದ ಅಧ್ಯಕ್ಷ ಅಶೋಕ ಕಲ್ಲೂರ ಭಾಗವಹಿಸಿದ್ದರು.

ಉಪ ಪ್ರಾಚಾರ್ಯ ಎಸ್.ಎಸ್.ಕುದ ರಕರ, ಆರ್. ಜೆ.ಜಾಗಿರದಾರ, ಜಿ.ವೈ.ಚವ್ಹಾಣ, ಎಸ್. ಎಸ್. ಝಳಕಿ, ಎಸ್.ಎಸ್.ಬಿರಾದಾರ, ಎಫ್.ಡಿ. ಮೇಟಿ, ಪಿ.ಎಲ್.ಹಿರೇಮಠ, ಗಬ್ಬೂರ, ಎಸ್.ಎಸ್. ಕೊಟ್ಲಿ, ಬಿ.ಎಲ್.ಹೊಸಮನಿ,  ಎಸ್.ಎಂ.ಹದಿಮೂರ, ರಮೇಶ ಪೂಜಾರಿ, ಎಂ.ಎಂ.ಗುಡ್ಡೆವಾಡ, ಎಸ್.ಎಸ್.ಮಡಿವಾಳರ, ಮಹಾಂತೇಶ ಝಳಕಿ, ಬಿ.ಎ ಹೂಗಾರ ಮುಂತಾ ದವರು ಉಪಸ್ಥಿತರಿದ್ದರು.

ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಮಹಾಂತೇಶ ಸಂಗಮ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾ ಡಿದರು, ಗಿರೀಜಾ ಪಾಟೀಲ ನಿರೂಪಿಸಿದರು, ಈರಣ್ಣ ಗೊಳಸಂಗಿ ವಂದಿಸಿದರು.

ಬಹುಮಾನ ವಿತರಣೆ:
ಸಾಹಿತ್ಯ ಪರಿಷತ್ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾ ಯಿತು. ವಿಜೇತ ವಿದ್ಯಾರ್ಥಿಗಳಾದ ದೀಪಾ ದೇಶಪಾಂಡ (ಪ್ರಥಮ), ಅರುಣಕುಮಾರ ಎಸ್.ಪಾಟೀಲ (ದ್ವಿತೀಯ), ಆನಂದಯ್ಯ.ಬಿ. ಹಿರೇಮಠ (ತೃತೀಯ), ಅರುಣಾ ಎಸ್. ಹಿಟ್ನಳ್ಳಿ (ಸಮಾಧಾನಕರ) ಬಹುಮಾನ ವಿತರಿಸಲಾಯಿತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.