ADVERTISEMENT

ಇನ್ನೂ ಬಿಡುಗಡೆ ಭಾಗ್ಯ ಕಾಣದ ಆಹ್ವಾನ ಪತ್ರಿಕೆ

ಡಿ.ಬಿ.ನಾಗರಾಜ
Published 24 ಫೆಬ್ರುವರಿ 2015, 9:23 IST
Last Updated 24 ಫೆಬ್ರುವರಿ 2015, 9:23 IST

ವಿಜಯಪುರ: ನವರಸಪುರ ರಾಷ್ಟ್ರೀಯ ಉತ್ಸವಕ್ಕೆ ನಾಲ್ಕೇ ದಿನ ಬಾಕಿ. ವೇದಿಕೆ, ನಗರದ ಅಲಂಕಾರ, ಸ್ವಚ್ಛತೆ ಸೇರಿದಂತೆ ಎಲ್ಲವೂ ಭರದಿಂದ ಸಿದ್ಧಗೊಳ್ಳುತ್ತಿವೆ. ಈಗಾಗಲೇ ಕೆಲ ಸ್ಪರ್ಧೆಗಳಿಗೂ ಚಾಲನೆ ಸಿಕ್ಕಿದೆ. ಆದರೆ ಇದುವರೆಗೂ ಉತ್ಸವದ ಆಮಂತ್ರಣ ಪತ್ರಿಕೆ ಮಾತ್ರ ಬಿಡುಗಡೆಗೊಂಡಿಲ್ಲ!

ಇದುವರೆಗೂ ನಡೆದ ಈ ಹಿಂದಿನ ಎಲ್ಲ ಉತ್ಸವ­ಗಳಲ್ಲೂ 15 ದಿನ ಮೊದಲು ಆಮಂ­ತ್ರಣ ಪತ್ರಿಕೆ ಬಿಡುಗಡೆಯಾಗಿ ಜಿಲ್ಲೆ ಸೇರಿದಂತೆ ರಾಜ್ಯದ ಮೂಲೆ ಮೂಲೆ ತಲುಪುತ್ತಿತ್ತು. ಈ ಬಾರಿ ಉತ್ಸವಕ್ಕೆ ಬೆರಳೆಣಿಕೆ ದಿನ ಬಾಕಿ ಉಳಿದಿದ್ದರೂ, ಆಮಂತ್ರಣ ಪತ್ರಿಕೆ ಸಿದ್ಧಗೊಂಡಿಲ್ಲ.
ಇದರಿಂದ ಇದೇ 27, 28, ಮಾರ್ಚ್‌1 ರಂದು ನಡೆಯುವ ನವರಸಪುರ ರಾಷ್ಟ್ರೀಯ ಉತ್ಸವದ ಉದ್ಘಾಟನಾ, ಸಮಾರೋಪ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ಕಲಾವಿದರನ್ನು ಹೊರತುಪಡಿಸಿ ಯಾವ್ಯಾವ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂಬ ಅಧಿಕೃತ ಮಾಹಿತಿ ಉತ್ಸವ ಆಯೋಜಕರನ್ನು ಹೊರತು ಪಡಿಸಿದರೆ ಉಳಿದ ಯಾರಿಗೂ ಇಲ್ಲವಾಗಿದೆ.

ಉತ್ಸವಕ್ಕೆ ಕ್ಷಣ ಗಣನೆ ಆರಂಭವಾಗುವ ಮುನ್ನವಾದರೂ ಅಧಿಕೃತ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡು, ಜಿಲ್ಲೆಯ ಮೂಲೆ ಮೂಲೆ ತಲುಪುವುದೇ ಎಂಬುದು ಜಿಲ್ಲೆಯ ಬಹುತೇಕ ಜನರನ್ನು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.

ನವರಸಪುರ ಉತ್ಸವದ ಅಂತಿಮ ದಿನ ಗೋಳಗುಮ್ಮಟದ ಎದುರು ರಾತ್ರಿಯಿಡಿ (ಮಾರ್ಚ್‌ 1) ನಡೆಯುವ ಕವ್ವಾಲಿ ಕಾರ್ಯಕ್ರಮಕ್ಕೆ ಕಲಾವಿದರನ್ನು ಆಯ್ಕೆ ಮಾಡುವಲ್ಲಿ ಕವ್ವಾಲಿ ಆಯ್ಕೆ ಸಮಿತಿ ವಿಳಂಬ ನೀತಿ ಅನುಸರಿಸಿದ್ದೇ ಆಮಂತ್ರಣ ಪತ್ರಿಕೆ ಮುದ್ರಣ ವಿಳಂಬವಾಗಲು ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಸಮಿತಿಯಲ್ಲಿದ್ದ ಸದಸ್ಯರೊಬ್ಬರು.

ಇದರ ಜತೆಗೆ ಮೂರು ದಿನದ ಸಮಾರಂಭ­ದಲ್ಲಿ ಯಾವ್ಯಾವ ಪ್ರಮುಖರು ಪಾಲ್ಗೊಳ್ಳು­ತ್ತಾರೆ ಎಂಬುದು ಅಧಿಕೃತಗೊಳ್ಳುವುದು ತಡವಾಗಿದ್ದರಿಂದ ಸಕಾಲಕ್ಕೆ ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ ಅವರು.

ಕವ್ವಾಲಿ ಸಂಭ್ರಮ ಹೆಚ್ಚಲಿ: ನವರಸಪುರ ರಾಷ್ಟ್ರೀಯ ಉತ್ಸವದಲ್ಲಿ ಕವ್ವಾಲಿಯದ್ದೇ ವೈಶಿಷ್ಟ್ಯ. ಈ ಹಿಂದೆ ನಡೆದ ಬಹುತೇಕ ಉತ್ಸವಗಳಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಶ್ವಪ್ರಸಿದ್ಧಿ ಪಡೆದ ಕವ್ವಾಲಿ ಗಾಯಕರು ರಾತ್ರಿಯಿಡಿ ಗೋಳಗುಮ್ಮಟದ ಎದುರು ಹಾಡಿದ್ದಾರೆ.

ಜಿಲ್ಲೆ ಸೇರಿದಂತೆ ನೆರೆಹೊರೆ ಜಿಲ್ಲೆಯ ಜನರು ಈ ಸಂಭ್ರಮದಲ್ಲಿ ಪಾಲ್ಗೊಂಡು ರಾತ್ರಿಯಿಡಿ ಕವ್ವಾಲಿ ಆಲಿಸಿದ್ದಾರೆ. 2005–06–07ರಲ್ಲಿ ನಡೆದ ಉತ್ಸವದಲ್ಲಿ ವಿಶ್ವ ಪ್ರಸಿದ್ಧ ಕಲಾವಿದರು ಕವ್ವಾಲಿ ಮೂಲಕ ಸಹಸ್ರ, ಸಹಸ್ರ ಜನರನ್ನು ಆಕರ್ಷಿಸಿದ್ದರು. ಮೂರು ವರ್ಷಗಳ ತರುವಾಯ ನಡೆಯುತ್ತಿ­ರುವ ಉತ್ಸವದಲ್ಲೂ ಖ್ಯಾತನಾ­ಮರು ಪಾಲ್ಗೊಳ್ಳುತ್ತಿದ್ದರೂ, ಸೂಫಿ ಕವ್ವಾಲಿ ಖ್ಯಾತಿಯ ಹನ್ಸರಾಜ್‌ ಹನ್ಸ್‌ ಅವರನ್ನು ಆಹ್ವಾನಿ­ಸಿದ್ದರೆ ಚಲೋ ಇರುತ್ತಿತ್ತು ಎನ್ನುತ್ತಾರೆ ಈ ಹಿಂದೆ ವಿವಿಧ ಸಮಿತಿಗಳಲ್ಲಿ ಕೆಲಸ ನಿರ್ವಹಿಸಿದ್ದ ನಗರದ ಯುವ ಮುಖಂಡರೊಬ್ಬರು.

ಶಾಸ್ತ್ರೀಯ ಸಂಗೀತ ಕಲಾವಿದರಿಗೆ ಬೇಡಿಕೆಯಿದ್ದಂತೆ ಕವ್ವಾಲಿ ಕಲಾವಿದರಿಗೂ ವಿಶ್ವದಲ್ಲೆಡೆ ಬೇಡಿಕೆಯಿದೆ. ಖ್ಯಾತನಾಮರನ್ನು ಉತ್ಸವಕ್ಕೆ ಆಹ್ವಾನಿಸಬೇಕು ಎಂದರೇ ಆರು ತಿಂಗಳು–ವರ್ಷ ಮೊದಲೇ ಆಹ್ವಾನಿಸಬೇಕು. ಈ ಹಿಂದೆ ಉತ್ಸವ ನಡೆದಾಗ ಖ್ಯಾತನಾಮರು ಬಂದಿದ್ದರು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನ ಸಂಭ್ರಮದಿಂದ ಕವ್ವಾಲಿ ಆಲಿಸಿದ್ದರು.

ಆದರೆ ಈ ಬಾರಿ ಸಮಯದ ಕೊರತೆಯಿದೆ. ಮುಂದಿನ ಉತ್ಸವದಲ್ಲಾದರೂ ಆದಿಲ್‌­ಶಾಹಿಯ ವೈಭವ ನೆನಪಿಸುವ ಶ್ರೇಷ್ಠ ಕಲಾವಿದರನ್ನು ಜಿಲ್ಲಾಡಳಿತ ಆಹ್ವಾನಿಸಬೇಕು ಎನ್ನುತ್ತಾರೆ ನಗರದ ಹಿರಿಯ ಎಸ್‌.ನಾಯಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.