ADVERTISEMENT

ಈ ಎತ್ತಿನ ಜೋಡಿಯ ಬೆಲೆ ₹ 9 ಲಕ್ಷ!

ಸಿದ್ಧೇಶ್ವರ ಜಾನುವಾರು ಜಾತ್ರೆಯಲ್ಲಿ ಸಿದ್ದಾಪುರದ ಎತ್ತುಗಳದ್ದೇ ಮಾತು...

​ಪ್ರಜಾವಾಣಿ ವಾರ್ತೆ
Published 18 ಜನವರಿ 2016, 5:46 IST
Last Updated 18 ಜನವರಿ 2016, 5:46 IST
ವಿಜಯಪುರದ ಸಿದ್ಧೇಶ್ವರ ಜಾನುವಾರು ಜಾತ್ರೆಯಲ್ಲಿ ಎಲ್ಲರ ಗಮನ ಸೆಳೆದ ಆಂಧ್ರಪ್ರದೇಶ ಮೂಲದ ‘ಉಂಗೋಲು’ ತಳಿಯ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕು ಸಿದ್ದಾಪುರದ ಎತ್ತುಗಳು
ವಿಜಯಪುರದ ಸಿದ್ಧೇಶ್ವರ ಜಾನುವಾರು ಜಾತ್ರೆಯಲ್ಲಿ ಎಲ್ಲರ ಗಮನ ಸೆಳೆದ ಆಂಧ್ರಪ್ರದೇಶ ಮೂಲದ ‘ಉಂಗೋಲು’ ತಳಿಯ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕು ಸಿದ್ದಾಪುರದ ಎತ್ತುಗಳು   

ವಿಜಯಪುರ: ಈ ಎತ್ತಿನ ಜೋಡಿಯ ಬೆಲೆ ಬರೋಬ್ಬರಿ ₹ ಒಂಬತ್ತು ಲಕ್ಷ. ‘ಉಂಗೋಲು’ ತಳಿಯ ಇವುಗಳ ಮೂಲ ಆಂಧ್ರಪ್ರದೇಶ. ಇದೀಗ ಐದರ ಹರೆಯ. ವರ್ಷದ ಕರುಗಳಿದ್ದಾಗ ಹೈದರಾಬಾದ್‌ನಲ್ಲಿ ₹ 1.5 ಲಕ್ಷಕ್ಕೆ ಖರೀದಿಸಿದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಸಿದ್ದಾಪುರದ ನಾಗೇಶರಾವ್ ಈ ಜೋಡಿಯ ಮಾಲೀಕ.

ನಾಲ್ಕು ವರ್ಷದಿಂದ ಈ ಆನೆ ಮರಿ ಯಂತಹ ಎತ್ತುಗಳನ್ನು ಸಾಕುತ್ತಿ ರುವ ಮಾಲೀಕನಿಗೆ ಇದು ಹೆಮ್ಮೆ. ತಮ್ಮೂರಿನ ಸುತ್ತಮುತ್ತಲ ಜಾತ್ರೆ, ವಸ್ತು ಪ್ರದರ್ಶನ, ಕೃಷಿ ಮೇಳಗಳಲ್ಲಿ ಈ ಜೋಡಿ ಪ್ರದರ್ಶಿಸಿ ಚಾಂಪಿಯನ್‌ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಖುಷಿ.

ಇದೀಗ ಮಾರಾಟಕ್ಕಾಗಿ ಸಿದ್ಧೇಶ್ವರ ಜಾನುವಾರು ಜಾತ್ರೆಗೆ ಬುಧವಾರವೇ ಬಂದಿದ್ದಾರೆ. ₹ ಆರು ಲಕ್ಷದಿಂದ ₹ ಏಳು ಲಕ್ಷದವರೆಗೂ ಖರೀದಿಗೆ ಕೇಳಿದ್ದಾರೆ. ಇನ್ನೇನು ಜಾತ್ರೆ ಮುಗಿಯುತ್ತಾ ಬಂತು. ಏಳರಿಂದ ಎಂಟು ಲಕ್ಷದ ಆಸುಪಾಸು ಯಾರಾದರೂ ಖರೀದಿಸಲು ಮುಂದೆ ಬಂದರೆ ಮಾರುವೆ ಎಂದು ನಾಗೇಶರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

ಜಾನುವಾರು ಜಾತ್ರೆಯಲ್ಲಿ ಈ ಎತ್ತುಗಳದ್ದೇ ಮಾತು. ಬಂದವರೆಲ್ಲ ಒಮ್ಮೆ ನೋಡಲು ಎತ್ತುಗಳ ಬಳಿ ಹೋಗುವರೇ. ಸೆಲ್ಫಿ ತೆಗೆದುಕೊಳ್ಳುವವರು, ತಮ್ಮ ಮೊಬೈಲ್‌ಗಳಲ್ಲಿ ಎತ್ತಿನ ಛಾಯಾಚಿತ್ರ ಸೆರೆ ಹಿಡಿಯಲು ಮುಂದಾಗುವವರೇ ಹೆಚ್ಚು ಎನ್ನುತ್ತಾರೆ ಸಮೀಪದಲ್ಲೇ ಜಾನುವಾರುಗಳನ್ನು ಕಟ್ಟಿಕೊಂಡಿರುವ ರೈತರು.

ರೈತರ ಬಾಯಲ್ಲಿ ಆನೆ ಮರಿಯಂತಹ ಎತ್ತುಗಳು. ನಮ್ಮ ಎತ್ತುಗಳನ್ನು 2–3 ಹಾಕಿದರೆ ಇಂತಹ ಒಂದು ಎತ್ತಾಗು ತ್ತದೆ... ಎಂಬ ಉದ್ಗಾರ ಕೇಳಿ ಬರುತ್ತಿದೆ.

ವಿಶೇಷ: ಐದರ ಹರೆಯದ ಎತ್ತುಗಳಾಗಿದ್ದರೂ 5–6 ಟನ್‌ ಭಾರ ಎಳೆಯುವ ಸಾಮರ್ಥ್ಯ. ಮುಂಜಾನೆಯಿಂದ–ಸಂಜೆವರೆಗೂ ದಣಿವರಿಯದೆ ದುಡಿಯುವ ಶಕ್ತಿ. ಎತ್ತರದ ಭುಜ. ಸಣ್ಣ ಕೊಂಬು, ಬೃಹತ್ ದೇಹ ಹೊಂದಿರುವ ಈ ಜೋಡಿ ದೇಗುಲದ ಮುಂದೆ ಪ್ರತಿಷ್ಠಾಪನೆಗೊಂಡಿರುವ ನಂದಿಯಂತೆ ಕಾಣುತ್ತವೆ. ಈ ಮೈಕಟ್ಟು ‘ಉಂಗೋಲು’ ತಳಿಯ ಜಾನುವಾರುಗಳ ವಿಶೇಷ.

ಯೂಟ್ಯೂಬ್‌ನಲ್ಲಿ ಎತ್ತುಗಳ ಚಿತ್ರ, ವಿಡಿಯೋ ಕ್ಲಿಪ್ಪಿಂಗ್ ಹಾಕಿದ್ದು, ಡಾ.ರಾಜ್‌ಕುಮಾರ್‌ ಚಲನಚಿತ್ರ ಗೀತೆ ಅಳವಡಿಸಲಾಗಿದೆ. ಇದನ್ನು ಸಾಕಷ್ಟು ಮಂದಿ ಇಷ್ಟಪಟ್ಟಿದ್ದಾರೆ ಎನ್ನುತ್ತಾರೆ ನಾಗೇಶರಾವ್.

ನಿರ್ವಹಣೆ: ಎತ್ತುಗಳ ನಿರ್ವಹಣೆಗಾಗಿ ಒಬ್ಬರನ್ನು ನೇಮಿಸಲಾಗಿದೆ. ನಿತ್ಯ ₹ 200 ಕೂಲಿ. ತಿಂಗಳ ಖರ್ಚು ₹ 20 ಸಾವಿರ ದಾಟಲಿದೆ. ಸಜ್ಜೆ, ಹುರುಳಿ, ಮೆಕ್ಕೆಜೋಳ, ಅಕ್ಕಿ ನುಚ್ಚಿನ ಮಿಶ್ರಣ ತಲಾ ಐದು ಕೆ.ಜಿ. ಮುಂಜಾನೆ–ಮುಸ್ಸಂಜೆ ತಪ್ಪದೆ ನೀಡುವ ಪೌಷ್ಟಿಕ ಆಹಾರ. ಒಟ್ಟು ದಿನಕ್ಕೆ 20 ಕೆ.ಜಿ. ಪೌಷ್ಟಿಕ ಆಹಾರ ಎರಡಕ್ಕೂ ನೀಡಲಾಗುತ್ತದೆ. ಇದರ ಜತೆಗೆ ತಲಾ ಎರಡು ಬಾಳೆಹಣ್ಣು.

ಭತ್ತದ ಹುಲ್ಲು, ಹಸಿ ಮೇವು ತಿನ್ನಲು. ಕುಡಿಯಲು ಬೇಕಾದಷ್ಟು ನೀರು. ನಿತ್ಯವೂ ಕೆಲಸಕ್ಕೆ ತೆರಳುವ ಮುನ್ನ, ಇಲ್ಲವೇ ಕೆಲಸ ಮುಗಿದ ಬಳಿಕ ಶಾಂಪು ಬಳಸಿ ತಪ್ಪದೇ ಸ್ನಾನ ಮಾಡಿ ಸುತ್ತೇವೆ ಎಂದು ಮಾಲೀಕ ನಾಗೇಶರಾವ್  ಮಾಹಿತಿ ನೀಡಿದರು.

***
ತಿಂಗಳಿಗೆ ₹ 20 ಸಾವಿರ ವೆಚ್ಚ ಮಾಡಿ ಎತ್ತುಗಳನ್ನು ಸಾಕುತ್ತಿರುವುದು ಎಂದು ಭಾರ ಎನಿಸಿಲ್ಲ. ಮನಸ್ಸಿಗೆ ಖುಷಿ ನೀಡಿದೆ.
-ನಾಗೇಶರಾವ್,
ಎತ್ತಿನ ಜೋಡಿ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.