ADVERTISEMENT

ಏತ ನೀರಾವರಿ ಯೋಜನೆ ತ್ವರಿತಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 5:10 IST
Last Updated 3 ಸೆಪ್ಟೆಂಬರ್ 2011, 5:10 IST

ತಾಳಿಕೋಟೆ: `ವಿಜಾಪುರ ಜಿಲ್ಲೆ ಬರಗಾಲದ ಬವಣೆಯಿಂದ ಹೊರಬಂದಿಲ್ಲ. ಪಂಚನದಿಗಳು ಹರಿದಿದ್ದರೂ, ಈ ಭೂಮಿತಾಯಿಯ ಹಸಿವು, ಅದನ್ನು ನಂಬಿದ ಬಡ ರೈತನ ತುತ್ತಿನ ಚೀಲ ತುಂಬಲಾಗಿಲ್ಲವೆಂದರೆ ವಿಪರ‌್ಯಾಸವಲ್ಲದೇ ಮತ್ತೇನು~ ಎಂದು ದೇವರಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ವಿಷಾದ ವ್ಯಕ್ತಪಡಿದರು.

ಅವರು ಸ್ಥಳೀಯ ಎಸ್.ಕೆ.ಕಾಲೇಜಿನಲ್ಲಿ ಮಂಗಳವಾರ ಮುದ್ದೇಬಿಹಾಳ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ `ಅಭಿವೃದ್ಧಿಯ ಮುನ್ನೋಟ~ ಎಂಬ ವಿಷಯದ ಕುರಿತು ನಡೆದ ಚಿಂತನಾಗೋಷ್ಠಿಯಲ್ಲಿ ಮಾತನಾಡಿದರು.|

ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿಗಳನ್ನು ಜಾರಿ ತಂದರೆ ಜಿಲ್ಲೆಯ ಹೆಚ್ಚಿನ ಭಾಗ ನೀರಾವರಿಗೆ ಒಳಪಡುತ್ತದೆ. ಇದರಿಂದ ಕಣ್ಣೀರಿಡುವ ರೈತನ ಜೀವನ ನೆಮ್ಮದಿ ತಾಳುವುದರೊಂದಿಗೆ ನಾಡಿನ ಆರ್ಥಿಕತೆಗೆ ಬಲ ನೀಡುತ್ತದೆ ಎಂದರು.

ಇಲ್ಲಿ ಪಕ್ಷ, ಜಾತಿ ತರಬೇಡಿ, ಜಿಲ್ಲೆಯ ಲಕ್ಷದಷ್ಟು ರೈತರು ಕೈಜೋಡಿಸಿ, ಅಣ್ಣಾ ಹಜಾರೆಯವರು ತಮ್ಮ ಗ್ರಾಮದಲ್ಲಿ ತಂದ ಕ್ರಾಂತಿಯನ್ನು ಇಲ್ಲಿ ತರಬಹುದಾಗಿದೆ ಎಂದರು.

ಎಸ್.ಕೆ. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಡಾ.ಗುರುಪಾದ ಘೀವಾರಿ ಮಾತನಾಡಿದರು.
ಪ್ರೊ. ಎ.ಎಲ್. ನಾಗೂರ ಮಕ್ಕಳ ಸಾಹಿತ್ಯಕ್ಕೆ ವಿಜಾಪುರ ಜಿಲ್ಲೆಯ ಕೊಡುಗೆ ಸ್ಮರಿಸಿದರು.

ಸಮ್ಮೇಳನಾಧ್ಯಕ್ಷ ಪ್ರೊ. ಬಿ.ಎಂ. ಹಿರೇಮಠ, ಜಿಲ್ಲಾ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ತಾಲ್ಲೂಕು ಕಸಾಪ ಅಧ್ಯಕ್ಷೆ ಶಾಂತಾಬಾಯಿ ನೂಲೀಕರ, ಉಪಸ್ಥಿತರಿದ್ದರು.

ಉಮಾ ಸಾಲಂಕಿ ಸ್ವಾಗತಿಸಿದರು.  ಶ್ರೀಕಾಂತ ಪತ್ತಾರ ನಿರೂಪಿಸಿದರು. ಕಾಶಿನಾಥ ಸಜ್ಜನ(ಬಿದರಕುಂದಿ) ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.