ADVERTISEMENT

ಕಬ್ಬು: ಬಂಪರ್ ಬೆಳೆ ನಿರೀಕ್ಷೆ

ತಾಲ್ಲೂಕಿನಲ್ಲಿ 5491 ಹೆಕ್ಟರ್ ಪ್ರದೇಶದಲ್ಲಿ ನಾಟಿ

​ಪ್ರಜಾವಾಣಿ ವಾರ್ತೆ
Published 25 ಮೇ 2018, 4:39 IST
Last Updated 25 ಮೇ 2018, 4:39 IST
ಇಂಡಿ ತಾಲ್ಲೂಕಿನ ಭೀಮಾ ತೀರದ ಜಮೀನುಗಳಲ್ಲಿರುವ ಕಬ್ಬಿನ ಬೆಳೆ
ಇಂಡಿ ತಾಲ್ಲೂಕಿನ ಭೀಮಾ ತೀರದ ಜಮೀನುಗಳಲ್ಲಿರುವ ಕಬ್ಬಿನ ಬೆಳೆ   

ಇಂಡಿ: ಪ್ರಸಕ್ತ ಬೇಸಿಗೆಯ ಹಂಗಾಮಿನಲ್ಲಿ 4,000 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ನಾಟಿ ಮಾಡುವ ಗುರಿ ಹೊಂದ
ಲಾಗಿತ್ತು. ಅದರ ಬದಲಿಗೆ 5,491 ಹೆಕ್ಟೇರ್‌ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ. ಹೀಗಾಗಿ ಈ ಬಾರಿ ಬಂಪರ್‌ ಬೆಳೆ ಬರುವ ನಿರೀಕ್ಷೆ ಇದೆ.

‘ನಾಟಿ ಮಾಡಿದ ಕಬ್ಬು ಉತ್ತಮವಾಗಿದ್ದು, ಮಾರ್ಚ್‌ನಲ್ಲಿ ಸುಳಿ ರೋಗ ತಗುಲಿತ್ತು. ಅದಕ್ಕೆ ರೈತರು ಕೋರೋಜಿನ್ ಔಷಧಿ ಸಿಂಪರಣೆ ಮಾಡಿದ್ದರಿಂದ ರೋಗ ನಾಶವಾಗಿದೆ. ಈಗ ಕಬ್ಬಿನ ಬೆಳೆ ಚೆನ್ನಾಗಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.

‘ಕಳೆದ ವರ್ಷ ಚೆನ್ನಾಗಿ ಮಳೆಯಾಗಿದ್ದರಿಂದ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಗೆ ದೀರ್ಘಕಾಲ ನೀರು ಹರಿಸಲಾಗಿತ್ತು. ಅಲ್ಲದೆ, ಭೀಮಾ ನದಿಗೆ ಮಹಾರಾಷ್ಟ್ರ ಸರ್ಕಾರ ಮಾರ್ಚ್‌ನಲ್ಲಿ ಉಜನಿ ಜಲಾಶಯದಿಂದ ನೀರು ಹರಿಬಿಟ್ಟ ಪರಿಣಾಮ ಪ್ರಸಕ್ತ ವರ್ಷದಲ್ಲಿ ಕಬ್ಬಿನ ಬೆಳೆಗೆ ನೀರಿನ ಕೊರತೆಯಾಗಿಲ್ಲ. ಕೆಲವು ಕಡೆ ವಿದ್ಯುತ್ ಕೊರತೆಯಾಗಿದೆ. ನೀರಿದ್ದೂ ಕಬ್ಬಿನ ಬೆಳೆಗೆ ನೀರು ಹರಿಸುವುದು ಸಾಧ್ಯವಾಗಿಲ್ಲ. ಆದರೆ ಬೆಳೆ ಒಣಗಿಸಬಾರದೆಂದು ಸಾಕಷ್ಟು ಖರ್ಚು ಮಾಡಿ ಡೀಸೆಲ್‌ ಪಂಪ್‌ ಬಳಸಿ ರೈತರು ನೀರುಣಿಸಿದ್ದಾರೆ. ಇದರಿಂದ ಪ್ರಸಕ್ತ ವರ್ಷ ನಿರೀಕ್ಷಿಸದಷ್ಟು ಕಬ್ಬಿನ ಆದಾಯ ಬರಬಹುದು’ ಎಂದು ರೈತರು ಭರವಸೆ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಬೇಸಿಗೆಯ ಹಂಗಾಮಿನಲ್ಲಿ ಒಟ್ಟು ಎಲ್ಲ ಬೆಳೆಗಳು ಸೇರಿ 17,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಅದರಲ್ಲಿ ಶೇಂಗಾ 10,500 ಹೆಕ್ಟೇರ್ ಪ್ರದೇಶ ಗುರಿ ಹೊಂದಲಾಗಿತ್ತು. ಅದರ ಬದಲಿಗೆ 9,829 ಹೆಕ್ಟೇರ್‌ ಪ್ರದೆಶದಲ್ಲಿ ಬಿತ್ತನೆ ಮಾಡಲಾಗಿತ್ತು. ಸೂರ್ಯಕಾಂತಿ 1,500 ಹೆಕ್ಟೇರ್‌ ಗುರಿಯ ಬದಲಿಗೆ 8 ಹೆಕ್ಟೇರ್‌ ಪ್ರದೇಶದಲ್ಲಿ ಮತ್ತು ಮೆಕ್ಕೆಜೋಳ 1,500 ಹೆಕ್ಟೇರ್‌ ಬದಲಿಗೆ 438 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು. ಈ ಎಲ್ಲ ಬೆಳೆಗಳು ಸೇರಿ ಒಟ್ಟು 15,766 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಈ ಎಲ್ಲವೂ ಕಟಾವಾಗಿದ್ದು, ಸರಾಸರಿ ಇಳುವರಿ ಬಂದಿವೆ’ ಎಂದು ಮಹಾದೇವಪ್ಪ ಅವರು ತಿಳಿಸಿದ್ದಾರೆ.

‘ಇದೀಗ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಜಮೀನು ಸಿದ್ಧಗೊಳಿಸುವಲ್ಲಿ ನಿರತರಾಗಿದ್ದಾರೆ. ಕಳೆದ ಬೇಸಿಗೆಯಲ್ಲಿ ಸರ್ಕಾರಕ್ಕೆ ನೀಡಿದ ತೊಗರಿ ಬೆಳೆ ಬಿಲ್ಲು ಬಾಕಿ ಉಳಿದಿದ್ದರಿಂದ ಕೆಲವು ರೈತರಿಗೆ ಜಮೀನು ಉಳಿಮೆ ಮಾಡಲು ಮತ್ತು ಬೀಜ ಗೊಬ್ಬರ ದಾಸ್ತಾನು ಮಾಡಿಕೊಳ್ಳಲು ಹಣಕಾಸಿನ ಕೊರತೆಯಾಗಿದೆ’ ಎಂದು ರೈತರು ತಿಳಿಸಿದ್ದಾರೆ.

ಟ್ಯಾಂಕರ್ ಮೂಲಕ ನೀರು

‘ತಾಲ್ಲೂಕಿನಲ್ಲಿ ಮಾರ್ಚ್‌ ಮತ್ತು ಏಪ್ರಿಲ್‌ನಿಂದ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆಯಾಗಿದೆ. ಬೇಡಿಕೆ ಬಂದಂತೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ’ ಎಂದು ತಹಶೀಲ್ದಾರ್‌ ಡಿ.ಎಂ.ಪಾಣಿ ತಿಳಿಸಿದ್ದಾರೆ.

‘ತಾಲ್ಲೂಕಿನಲ್ಲಿ ಇದುವರೆಗೆ ಒಟ್ಟು 14 ಗ್ರಾಮಗಳಲ್ಲಿ 43 ಟ್ಯಾಂಕರ್ ಮೂಲಕ 139 ಟ್ರಿಪ್ ಮೂಲಕ ನೀರು ಪೂರೈಸಲಾಗುತ್ತಿದೆ. ತಾಲ್ಲೂಕಿನ ಇಂಗಳಗಿ, ರೂಗಿ, ತಡವಲಗಾ, ನಿಂಬಾಳ, ಚವಡಿಹಾಳ, ಬಬಲಾದ, ಅಥರ್ಗಾ, ಹೊರ್ತಿ ಅಲ್ಲದೇ ಕೆಲವು ಮೆಟಿಗಿ ವಸ್ತಿಗಳಿಗೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಟ್ಯಾಂಕರ್ ನೀರು ಪೂರೈಸಲು ಹಣಕಾಸಿನ ಕೊರತೆಯಿಲ್ಲ. ನೀರಿನ ಸಮಸ್ಯೆ ಬಗ್ಗೆ ಬೇಡಿಕೆ ಬಂದರೆ ತಕ್ಷಣವೇ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಎ.ಸಿ.ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.