ADVERTISEMENT

ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತರಿಂದ ಹೆದ್ದಾರಿ ತಡೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2012, 5:10 IST
Last Updated 7 ನವೆಂಬರ್ 2012, 5:10 IST

ಸಿಂದಗಿ: ರೈತರ ಪ್ರತಿ ಟನ್ ಕಬ್ಬಿಗೆ 3ಸಾವಿರ ರೂಪಾಯಿ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ಚಿಕ್ಕಸಿಂದಗಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದರು. 

 ಕಳೆದ ಶುಕ್ರವಾರ(ನ.2ರಂದು) ವಷ್ಟೇ ಇದೇ ರೈತ ಸಂಘದ ಕಾರ್ಯಕರ್ತರೇ ತಾಲ್ಲೂಕಿನ ಎಲ್ಲ ರಸ್ತೆಗಳಲ್ಲೂ ನಾಲ್ಕೂವರೇ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ್ದರು. ನಾಲ್ಕು ದಿನಗಳ ನಂತರ ಮತ್ತೇ ಈಗ ಪುನ: ರಸ್ತೆ ತಡೆ ನಡೆಸಿದ್ದರಿಂದ ಪ್ರಯಾಣಿಕರು ಪರದಾಡುವ ದೃಶ್ಯ ಸಾಮಾನ್ಯವಾಗಿತ್ತು.

ವಾಹನಗಳ ಸಂಚಾರ ಒಂದೂವರೇ ಗಂಟೆ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಮಹಿಳೆಯರು ಮಕ್ಕಳಾದಿಯಾಗಿ ದೂರದ ಮೂರು ಕಿ.ಮಿ ವರೆಗೆ ಕಾಲ್ನಡಿಗೆಯಿಂದ ನಡೆಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದೇ ಸಂದರ್ಭದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ವಿಜಾಪುರಕ್ಕೆ ತೆಗೆದುಕೊಂಡು ಹೊರಟಿದ್ದ ಅಂಬುಲೆನ್ಸ್ ಹಾಗೂ ಶವದ ವಾಹನವೊಂದಕ್ಕೆ ಪ್ರತಿಭಟನಕಾರರು ದಾರಿ ತೆರುವು ಮಾಡಿಕೊಟ್ಟಿದ್ದು ಕಂಡು ಬಂದಿತು.

ಕೇವಲ ಒಂದೂವರೆ ಗಂಟೆಯಲ್ಲಿಯೇ ಹೆದ್ದಾರಿಯಲ್ಲಿ ಗುಲ್ಬರ್ಗ-ವಿಜಾಪುರಕ್ಕೆ ಹೊರಟಿದ್ದ ನೂರಾರು ವಾಹನಗಳು ನಿಂತುಕೊಂಡಿದ್ದವು. ಪದೇ, ಪದೇ ಹೆದ್ದಾರಿ ತಡೆ ನಡೆಸುತ್ತಿರುವ ಬಗ್ಗೆ ರಸ್ತೆಯಲ್ಲಿ ನಿಂತಿದ್ದ ಪ್ರಯಾಣಿಕರು ಆಕ್ಷೇಪ ಎತ್ತಿ ತಮ್ಮ, ತಮ್ಮಲ್ಲಿಯೇ ಚರ್ಚಿಸುತ್ತಿರುವುದು ಕೇಳಿ ಬಂದಿತು.

ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಣ್ಣಾರಾಯ ಈಳಗೇರ ಹೋರಾಟಕ್ಕೆ ಬೆಂಬಲಿಸಿ ರಸ್ತೆ ತಡೆಯಲ್ಲಿ ಪಾಲ್ಗೊಂಡಿದ್ದರು.ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಅತ್ಯಂತ ದಪ್ಪ ಚರ್ಮ ಹೊಂದಿದ ಈ ಮೂರು ರಾಜಕೀಯ ಪಕ್ಷಗಳು ತಮ್ಮ ಅಧಿಕಾರಾವಧಿಯಲ್ಲಿ ರೈತರನ್ನು ವಂಚಿಸುತ್ತಲೇ ಬಂದಿವೆ ಎಂದು ವಾಗ್ದಾಳಿ ನಡೆಸಿದರು.

ಪ್ರಸ್ತುತ ರಾಜ್ಯದ ಬಿಜೆಪಿ ಸರ್ಕಾರ ಮತ್ತು ಕೇಂದ್ರದ ಕಾಂಗ್ರೆಸ್ ಸರ್ಕಾರದ ಶಾಸಕರು, ಸಚಿವರು ರೈತ ವಿರೋಧಿಗಳಾಗಿದ್ದಾರೆ. ರೈತರ ಗೋರಿಗಳ ಮೇಲೆ ಮಹಾಸೌಧ ಕಟ್ಟಲು ಹೊರಟಿದ್ದಾರೆ. ಹೀಗಾಗಿ ಇಂಥ ಜನಪ್ರತಿನಿಧಿಗಳು ಎಲ್ಲಿ ಸಿಗುತ್ತಾರೋ ಅಲ್ಲಲ್ಲಿ ರೈತರು ತಮ್ಮ ಬಾರಕೋಲಿನ ರುಚಿ ತೋರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ ಮೂರುಸಾವಿರ ರೂಪಾಯಿ ಘೋಷಣೆ ಮಾಡದೇ ಇದ್ದಲ್ಲಿ ಇದೇ ನವೆಂಬರ್ 9 ರಂದು ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕುವ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ ಡಾ.ಶಂಕ್ರಣ್ಣ ವಣಕ್ಯಾಳ ಚಳವಳಿಕಾರರಿಂದ ಮನವಿ ಪತ್ರ ಸ್ವೀಕರಿಸಿದರು. ಸರ್ಕಲ್ ಇನ್ಸ್‌ಪೆಕ್ಟರ್ ಚಿದಂಬರ ವಿ.ಎಂ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಿದ್ದರು.

ಪ್ರತಿಭಟನೆಯ ನೇತೃತ್ವವನ್ನು ಹಿರಿಯ ರೈತ ಮುಖಂಡ ಬಿ.ಎಸ್.ಜೋಗೂರ, ಕುಳೇಕುಮಟಗಿ ರೈತ ಮುಖಂಡ ಗುರುಲಿಂಗಯ್ಯ ಹಿರೇಮಠ, ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ರಂಜಣಗಿ, ತಾಲ್ಲೂಕು ಅಧ್ಯಕ್ಷ ಶಿವಶರಣಪ್ಪಗೌಡ ಬಿರಾದಾರ, ಪದಾಧಿಕಾರಿಗಳಾದ ಚನ್ನಪ್ಪಗೌಡ ಪಾಟೀಲ, ಪರುಶರಾಮ ಹುಡೇದ, ಗೊಲ್ಲಾಳಪ್ಪ ಚೌಧರಿ, ಬಾಬು ಕೂಡಿ, ಬೂತಾಳಿ ಪೂಜಾರಿ, ಬಸನಗೌಡ ಧರ್ಮಗೊಂಡ, ಕುಮಾರಸ್ವಾಮಿ ಬಂದಾಳ, ಸಿದ್ರಾಮ ಮೂಡಗಿ, ಮಲ್ಲಿಕಾರ್ಜುನ ಅಲ್ಲಾಪೂರ, ರಮೇಶ ಜೋಗೂರ, ವಿವೇಕಾನಂದ ಅಳಗುಂಡಗಿ, ಶರಣು ಸುಣಗಾರ, ರಾಜು ನರಬೊಳ್ಳಿ, ಚನ್ನೂ ಕೂಡಿ, ಶಾಂತಯ್ಯ ವಸ್ತ್ರದ, ಬಸವರಾಜ ರೆಬಿನಾಳ, ಮಲಕನಗೌಡ ಪಾಟೀಲ, ಬಸವರಾಜ ಹೊಸಮನಿ  ವಹಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.