ADVERTISEMENT

ಕಾಲುವೆಗೆ ನೀರು ಹರಿಸಲು ಆಗ್ರಹ: ಇಂದು ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 5:10 IST
Last Updated 6 ಫೆಬ್ರುವರಿ 2012, 5:10 IST

ಮುದ್ದೇಬಿಹಾಳ: ಆಲಮಟ್ಟಿ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನೀರು ಹರಿಸುವುದನ್ನು ಇದೇ 25ರಿಂದ ಬಂದ್ ಮಾಡುವ ನಿರ್ಣಯ ಕೈಕೊಂಡಿರುವ ನೀರಾವರಿ ಸಲಹಾ ಸಮಿತಿಯ ನಿಲುವನ್ನು ವಿರೋಧಿಸಿ ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಇದೇ 6ರಂದು ರೈತರು ಆಲಮಟ್ಟಿಯಲ್ಲಿರುವ ಕೃಷ್ಣಾ ಜಲಭಾಗ್ಯ ನಿಗಮದ ಕಚೇರಿಗೆ ಮುತ್ತಿಗೆ ಹಾಕಲು ರೈತರು ನಿರ್ಧರಿಸಿದ್ದಾರೆ.

  ಸಮಿತಿಯ ಅಧ್ಯಕ್ಷ ಬಸವರಾಜ ಕುಂಬಾರ ಪ್ರಕಟಣೆ ನೀಡಿ,  ಕಾಲುವೆಗಳಿಗೆ ನೀರು ಹರಿಸುವುದನ್ನು ಬಂದ್ ಮಾಡಿದರೆ ರೈತರು ಈಗಾಗಲೇ ಬಿತ್ತನೆ ಮಾಡಿರುವ ಯಾವ ಫಸಲೂ ಬಾರದೇ ಕೋಟ್ಯಂತರ ರೂಪಾಯಿ ಹಾನಿ ಸಂಭವಿಸಲಿದೆ. ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಅವರಿಂದ ಯಾವುದೇ ಸಕಾರಾತ್ಮಕ ಉತ್ತರ ಬಂದಿಲ್ಲ ಎಂದು ಆರೋಪಿಸಿದ್ದಾರೆ.

 ಭೀಕರ ಬರಗಾಲ ಇರುವುದರಿಂದ ಬೆಳೆಗಳಿಗೆ ಹಾಗೂ ರೈತರ ಜಾನುವಾರುಗಳಿಗೆ ನೀರಿನ ಅವಶ್ಯಕತೆ ಇದೆ. ಬಹಳಷ್ಟು ನಾಗರಿಕರು ಕಾಲುವೆಯ ನೀರನ್ನೇ ಕುಡಿಯಲು ಸಹ ಬಳಸುತ್ತಿದ್ದಾರೆ. ಕಾರಣ ಣೇಪ್ರಿಲ್‌ವರೆಗೆ ಕಾಲುವೆಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಲು ರೈತರೆಲ್ಲರೂ ಕೂಡಿ ಕಚೇರಿಗೆ ಮನವಿ ಸಲ್ಲಿಸಲು ಆಲಮಟ್ಟಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಬೆ.10 ಗಂಟೆಗೆ ಸೇರುವಂತೆ ಅಲ್ಲಿಂದ ಪಾದಯಾತ್ರೆ ಮೂಲಕ ಕಚೇರಿಗೆ ಹೋಗುವ ನಿರ್ಧಾರ ಕೈಕೊಳ್ಳಲಾಗಿದೆ. 

ಹೋರಾಟಕ್ಕೆ ತಾಲ್ಲೂಕಿನ ಎಲ್ಲ ರೈತರು ಪಾಲ್ಗೊಳ್ಳುವ ಮೂಲಕ ಬೆಂಬಲಿಸುವಂತೆ ಬಸವರಾಜ ಕುಂಬಾರ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.