ADVERTISEMENT

ಕಾಲ ಮಿಂಚಿಲ್ಲ; ಈಗಲಾದ್ರೂ ಮಧ್ಯಸ್ಥಿಕೆ ವಹಿಸಿ

ಮಹದಾಯಿ ವಿವಾದ; ಪ್ರಧಾನಿ ಮೋದಿಗೆ ಸಚಿವ ಎಂ.ಬಿ.ಪಾಟೀಲ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಮೇ 2018, 14:04 IST
Last Updated 7 ಮೇ 2018, 14:04 IST

ವಿಜಯಪುರ: ‘ಚುನಾವಣೆ ಹೊತ್ತಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮಹದಾಯಿ ನೆನಪಾಗಿದೆ. ಈಗಲೂ ಕಾಲ ಮಿಂಚಿಲ್ಲ. ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸಿ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಆಗ್ರಹಿಸಿದರು.

‘ಮಹದಾಯಿ ವಿವಾದ ಪರಿ ಹರಿಸುವಂತೆ ಈ ಹಿಂದೆ ನವದೆಹಲಿಗೆ ಸರ್ವಪಕ್ಷದ ನಿಯೋಗ ಕೊಂಡೊಯ್ದು ಕೈ ಮುಗಿದು ಬೇಡಿದರೂ ಮಾತನಾಡದ ಮೋದಿ, ಇದೀಗ ರಾಜಕೀಯ ಗಿಮಿಕ್‌ಗಾಗಿ ಮಾತನಾಡುತ್ತಿದ್ದಾರೆ’ ಎಂದು ಭಾನುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ವಿನಾಃ ಕಾರಣ ಸೋನಿಯಾ ಗಾಂಧಿ ಅವರನ್ನು ಎಳೆದು ತರಲಾಗಿದೆ. ಇದು ಸರಿಯಲ್ಲ. ಸೋನಿಯಾ ಯಾವ ಅರ್ಥದಲ್ಲಿ ಮಾತನಾಡಿದ್ದರು ಎಂಬುದನ್ನು ತಿಳಿಯಲಿ. ಪರಿವರ್ತನಾ ಯಾತ್ರೆಯ ಸಮಯ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಗೋವಾ ಮುಖ್ಯಮಂತ್ರಿ ಮನೋಹರ ಪರ್ರೀಕ್ಕರ್‌ ಪತ್ರವಿಟ್ಟುಕೊಂಡು ನಾಟಕವಾಡಿದ್ದನ್ನು ರಾಜ್ಯದ ಜನತೆ ಇಂದಿಗೂ ಮರೆತಿಲ್ಲ’ ಎಂದು ಪಾಟೀಲ ಹೇಳಿದರು.

ADVERTISEMENT

‘ಬೇಟಿ ಬಚಾವೋ, ಬೇಟಿ ಪಡಾವೋ’ ಎಂಬ ಘೋಷಣೆಯನ್ನು ಬಿಜೆಪಿ ನಾಯಕರು ಮೊಳಗಿಸುತ್ತಾರೆ. ಆದರೆ ಅನೇಕ ಬಿಜೆಪಿ ನಾಯಕರು ಅತ್ಯಾಚಾರ, ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ, ಇದು ಬಿಜೆಪಿ ನಾಯಕರ ಬದ್ಧತೆ’ ಎಂದು ವ್ಯಂಗ್ಯವಾಡಿದರು.

ಬ್ರ್ಯಾಂಡ್ ಇಮೇಜ್‌ಗೆ ಬಳಸಿದ್ದು ಯಾರ ಹಣ?

‘ಕಾಂಗ್ರೆಸ್ ನಾಯಕರ ಆಸ್ತಿ ಬಗ್ಗೆ ಮೋದಿ ವಿನಾಃ ಕಾರಣ ಹೇಳಿಕೆ ನೀಡುತ್ತಿದ್ದಾರೆ. ಆಧಾರ ರಹಿತವಾದ ಆಪಾದನೆ ಮಾಡುತ್ತಿದ್ದಾರೆ. ಈ ಹಿಂದೆ ಪ್ರಧಾನಿ ಆಗುವ ಪೂರ್ವದಲ್ಲಿ ಅವರ ಬ್ರ್ಯಾಂಡ್ ಇಮೇಜ್ ಕ್ರಿಯೇಟ್ ಮಾಡಲು ವೆಚ್ಚ ಮಾಡಿದ ಹಣ ಎಲ್ಲಿಂದ ಬಂತು?

ಬಾಂಬೆ ಕ್ಲಬ್ ಉದ್ಯಮಪತಿಗಳ ಸಮೂಹವೇ ಮೋದಿ ಬೆನ್ನಿಗೆ ನಿಂತಿತು. ಈ ಹಣದ ಮೂಲ ಎಲ್ಲಿಯದು? ಆ ಹಣ ಎಲ್ಲಿಂದ ಬಂದಿತು? ಎಂಬುದನ್ನು ಮೋದಿ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆಯಿದೆ’ ಎಂದರು.

ಸೋನಿಯಾ ನಾಳೆ ಪ್ರಚಾರ: ಎಐಸಿಸಿ ನಿಕಟಪೂರ್ವ ಅಧ್ಯಕ್ಷೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮೇ 8ರ ಮಂಗಳವಾರ ವಿಜಯಪುರದ ಸೊಲ್ಲಾಪುರ ರಸ್ತೆಯಲ್ಲಿರುವ ಎಎಸ್‌ಪಿ ಮಹಾವಿದ್ಯಾಲಯದ ವಿಶಾಲ ಮೈದಾನದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಎಂ.ಬಿ.ಪಾಟೀಲ ಹೇಳಿದರು.

‘ರಾಜ್ಯದಲ್ಲಿ ವಿಜಯಪುರದಲ್ಲಿ ಮಾತ್ರ ಸೋನಿಯಾ ಗಾಂಧಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. 2.5 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಆಜಾದ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಹಲ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.