ADVERTISEMENT

ಕೃಷಿ ವಿ.ವಿ: ಆಹಾರ ತಂತ್ರಜ್ಞಾನ ಕೋರ್ಸ್‌

ಮನೋಜ ಕುಮಾರ್ ಗುದ್ದಿ
Published 1 ಜೂನ್ 2017, 9:18 IST
Last Updated 1 ಜೂನ್ 2017, 9:18 IST
ಕೃಷಿ ವಿ.ವಿ: ಆಹಾರ ತಂತ್ರಜ್ಞಾನ ಕೋರ್ಸ್‌
ಕೃಷಿ ವಿ.ವಿ: ಆಹಾರ ತಂತ್ರಜ್ಞಾನ ಕೋರ್ಸ್‌   

ಹುಬ್ಬಳ್ಳಿ: ದಿನೇ ದಿನೇ ಹೆಚ್ಚುತ್ತಿರುವ ನಗರೀಕರಣಕ್ಕೆ ಪೂರಕವಾಗಿ ಹೋಟೆಲ್‌ ಉದ್ಯಮ ಬೆಳೆಯುತ್ತಲೇ ಇದೆ. ಈ ಉದ್ಯಮಕ್ಕೆ ಬೇಕಾಗುವ ಆಹಾತ ತಂತ್ರಜ್ಞಾನ ಪರಿಣತರನ್ನು ನೀಡಲು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಗ್ರಾಮೀಣ ಗೃಹ ವಿಜ್ಞಾನ ಕಾಲೇಜಿನಲ್ಲಿ ಆಹಾರ ತಂತ್ರಜ್ಞಾನ ಕೋರ್ಸ್‌ ಆರಂಭಿಸಿದೆ.

2012–13ರಲ್ಲಿ ಆಹಾರ ತಂತ್ರಜ್ಞಾನ ವಿಭಾಗದ ಬಿ.ಟೆಕ್‌ ಪದವಿಯನ್ನು 30 ವಿದ್ಯಾರ್ಥಿಗಳ ಪ್ರವೇಶದೊಂದಿಗೆ ಪ್ರಾರಂಭಿಸಿತು. ಈಗಾಗಲೇ ಎರಡು ಬ್ಯಾಚ್‌ಗಳು ಹೊರಬಂದಿವೆ. ಇದೇ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆಯಲು ಅವಕಾಶವಿದೆ.

ಬಿ.ಟೆಕ್‌ ಅನ್ನು ವೃತ್ತಿಪರ ಪದವಿ ಎಂದು ಪರಿಗಣಿಸಲಾಗಿದ್ದು, ನಾಲ್ಕು ವರ್ಷ ಅಧ್ಯಯನ ಮಾಡಬೇಕು. ಸುಸಜ್ಜಿತ ಪ್ರಯೋಗಾಲಯ ಮತ್ತು ಬೋಧಕ ಸಿಬ್ಬಂದಿ ಇದೆ. ಈ ಕೋರ್ಸ್‌ಗೆ ಪ್ರವೇಶ ಬಯಸುವವರು ವಿಜ್ಞಾನ ವಿಷಯದಲ್ಲಿ ಪಿ.ಯು.ಸಿ. ಪೂರ್ಣಗೊಳಿಸಿರಬೇಕು. ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದ್ದು, ಆ ಮೂಲಕ ಪ್ರವೇಶ ಪಡೆಯಬೇಕು ಎನ್ನುತ್ತಾರೆ ಕಾಲೇಜಿನ ಡೀನ್ ಡಾ.ಛಾಯಾ ಬಡಿಗೇರ.

ಆಹಾರ ಸಂಸ್ಕರಣಾ ಮತ್ತು ತಂತ್ರಜ್ಞಾನ, ಆಹಾರ ಎಂಜಿನಿಯರಿಂಗ್‌, ಆಹಾರ ಸೂಕ್ಷ್ಮಾಣು ಜೀವಿ, ಆಹಾರ ವಿಜ್ಞಾನ ಮತ್ತು ಪೋಷಣೆ ಹಾಗೂ ಆಹಾರ ವ್ಯವಹಾರ ಮತ್ತು ವ್ಯಾಪಾರ ನಿರ್ವಹಣೆ ವಿಷಯಗಳ ಕುರಿತು ಕಲಿಸಿಕೊಡಲಾಗುತ್ತದೆ. 

ಕೃಷಿ ವಿಶ್ವವಿದ್ಯಾಲಯವು ವಿದೇಶದ ಹಲವು ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅಲ್ಲಿನ ಪರಿಣತ ಪ್ರಾಧ್ಯಾಪಕರು ಬಂದು ಪಾಠ ಮಾಡುತ್ತಾರೆ.

ವಿವಿಧ ಆಹಾರ ಸಂಸ್ಕರಣಕ್ಕೆ ಸಂಬಂಧಪಟ್ಟ ದೇಶದ ಸುಪ್ರಸಿದ್ಧ ಸಂಶೋಧನಾ ಸಂಸ್ಥೆಗಳಾದ ಸಿ.ಎಫ್.ಟಿ.ಆರ್.ಐ, ಡಿ.ಎಫ್.ಆರ್. ಎಲ್ ಹಾಗೂ ಕೈಗಾರಿಕಾ ಘಟಕಗಳಾದ ಐ.ಟಿ.ಸಿ. ಮಾಡರ್ನ್‌ ಫುಡ್ಸ್‌, ಕೆರ್ರಿ ಇನ್‌ಗ್ರೀಡಿಯಂಟ್ಸ್‌, ಯುನಿಬಿಕ್, ಮೈಯಾಸ್,  ಎಂ.ಟಿ.ಆರ್ ನಂತಹ ಆಹಾರ ತಯಾರಿಕಾ ಸಂಸ್ಥೆಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ.

ಉದ್ಯೋಗಾವಕಾಶಗಳು: ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕಂಪೆನಿಗಳಲ್ಲಿ ಬಿ.ಟೆಕ್. ವಿದ್ಯಾರ್ಥಿಗಳು, ಆಹಾರ ಉತ್ಪಾದಿಸುವ, ಗುಣಮಟ್ಟ ಪರೀಕ್ಷಿಸುವ, ಸುರಕ್ಷತಾ ಅಧಿಕಾರಿಗಳಾಗಿ ಉದ್ಯೋಗ ಮಾಡಬಹುದು.

ಅಗ್ರಿ ಬಿಸಿನೆಸ್ ಮತ್ತು ಅಗ್ರಿ ಬಿಸಿನೆಸ್ ಕ್ಲಿನಿಕ್‌ಗಳಲ್ಲಿ ತರಬೇತಿ ಪಡೆದು ಸ್ವಯಂ ಉದ್ಯೋಗ ಮಾಡಬಹುದು. ಮಾಹಿತಿಗೆ 0836–2448512 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.