ADVERTISEMENT

ಕೃಷ್ಣಾ- ಕಾವೇರಿ ಕನ್ನಡ ನಾಡಿನ ಕಣ್ಣು: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 5:28 IST
Last Updated 5 ಆಗಸ್ಟ್ 2013, 5:28 IST

ಕೊಲ್ಹಾರ: ಕೃಷ್ಣೆ ಹಾಗೂ ಕಾವೇರಿ ಕನ್ನಡ ನಾಡಿನ ಎರಡು ಕಣ್ಣುಗಳು. ಅವುಗಳಲ್ಲಿ ಒಂದು ಹೆಚ್ಚು, ಒಂದು ಕಡಿಮೆ ಎಂದು ಭೇದ ಎಣಿಸುವುದು ಸಣ್ಣತನವಾದೀತು. ಎರಡೂ ನದಿಗಳು ಗಂಗೆಯಷ್ಟೇ ಪವಿತ್ರ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಭಾನುವಾರ ಕೊಲ್ಹಾರದ ಸಮೀಪ ರಾಷ್ಟ್ರೀಯ ಹೆದ್ದಾರಿ 218ರ ಸೇತುವೆ ಕೆಳಗೆ ಮೈದುಂಬಿ ಹರಿಯುವ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ಪಕ್ಷದ ಕಾರ್ಯಕ್ರಮ ನಿಮಿತ್ತ ವಿಜಾಪುರದ ಸಮೀಪದ ಲೋಣಿ ಬಿ.ಕೆ. ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಕೊಲ್ಹಾರದ ಬಳಿ ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯನ್ನು ನೋಡಿ ಖುಷಿಗೊಂಡ ಬಿಎಸ್‌ವೈ, ನಾಡಿನ ಹಿತಕ್ಕಾಗಿ ಪ್ರಾರ್ಥಿಸಿ, ಬಾಗಿನ ಅರ್ಪಿಸಿದರು. ಕಳೆದ ಎರಡು ವರ್ಷಗಳಿಂದ ನಾಡಿನ ರೈತರು ತೀವ್ರ ಬರಗಾಲದಿಂದ ತತ್ತರಿಸಿದ್ದಾರೆ. ಕುಡಿಯುವ ನೀರಿಗೂ ತತ್ವಾರ ಎದುರಾಗಿತ್ತು. ಈ ಬಾರಿ ನದಿಗೆ ನೀರು ಬಂದು ಜಲಾಶಯಗಳು ಭರ್ತಿಯಾಗಿವೆ. ನೀರಿನ ಸಮಸ್ಯೆಗೆ ರಪಿಹಾರ ಸಿಕ್ಕಿದೆ ಎಂದರು.

ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳಿಗೆ ಬೇಕಾದ ಅನುದಾನವನ್ನು ನೀಡಿ ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಲು ಕ್ರಮ ಕೈಗೊಂಡಿದ್ದೆ ಕಾಂಗ್ರೆಸ್ ಸರಕಾರ ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಿದ್ದರು. ಕೆಜೆಪಿ ಯುವ ಘಟಕದ ಅಧ್ಯಕ್ಷ ಹುಚ್ಚೇಶ ಕುಂಬಾರ, ಯುವ ಧುರೀಣ ಸಂಗರಾಜ ದೇಸಾಯಿ, ಟಿ.ಟಿ. ಹಗೇದಾಳ, ಶ್ರಿಶೈಲ ಪತಂಗಿ, ಬ್ಲಾಕ್ ಘಟಕದ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಕಲ್ಲಿನಾಥ ದೇವರು, ಚನಮಲ್ಲಪ್ಪ ಗಿಡ್ಡಪ್ಪಗೋಳ, ಚನ್ನಪ್ಪ ಸೌದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.