ADVERTISEMENT

ಕೃಷ್ಣಾ ಯೋಜನೆ ಅರಿತು ಹೋರಾಟ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 9:40 IST
Last Updated 9 ಅಕ್ಟೋಬರ್ 2012, 9:40 IST

ವಿಜಾಪುರ: `ಕೃಷ್ಣಾ ಕಣಿವೆಯ ನೀರಾವರಿ ಯೋಜನೆಗಳ ಬಗ್ಗೆ ಹೋರಾಟ ಮಾಡದಿರುವುದು ನಮ್ಮ ತಪ್ಪು. ನ್ಯಾಯಮಂಡಳಿಯ ತೀರ್ಪು, ಆಗಿರುವ ಮತ್ತು ಆಗಬೇಕಿರುವ ಕೆಲಸ ಕಾರ್ಯಗಳ ಬಗ್ಗೆ ತಿಳಿದುಕೊಂಡು ಹೋರಾಟ ರೂಪಿಸುತ್ತೇವೆ~ ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ಪ್ರದೇಶ ಘಟಕದ ಅಧ್ಯಕ್ಷ ಯಳಂದೂರು ರಂಗನಾಥ ಹೇಳಿದರು.

ಸಂಘದ ಉತ್ತರ ಪ್ರಾಂತ ಸಮ್ಮೇಳನ ಕುರಿತು ಮಾಹಿತಿ ನೀಡಲು ಸೋಮವಾರ ಇಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಪ್ರಶ್ನೆ ಎದುರಾದಾಗ, `ಕೃಷ್ಣಾ ಕಣಿವೆ ಕುರಿತು ಮಾಹಿತಿ ಕಲೆ ಹಾಕುವಂತೆ ಈಗಲೇ ನಮ್ಮ ಕಾರ್ಯಕರ್ತರಿಗೆ ಸೂಚನೆ ನೀಡುತ್ತೇನೆ~ ಎಂದರು.

ಪ್ರಶ್ನೆಗಳ ಕಾವು ಹೆಚ್ಚುತ್ತಿದ್ದಂತೆ, `ಕ್ಷಮಿಸಿ, ಕೃಷ್ಣೆಯ ವಿಷಯವನ್ನು ನಾವು ತಿಳಿದುಕೊಂಡಿಲ್ಲ. ನಮ್ಮಿಂದ ತಪ್ಪಾಗಿದೆ. ಮುಂದೆ ಅದನ್ನು ಸರಿಪಡಿಸಿಕೊಂಡು ಈ ಭಾಗದ ರೈತರ ಹಿತಾಸಕ್ತಿ ಕಾಪಾಡಲು ಶ್ರಮಿಸುತ್ತೇವೆ. ವಿಜಾಪುರದಲ್ಲಿ ನಡೆಯುವ ಸಮಾವೇಶದಲ್ಲಿ ಈ ವಿಷಯವನ್ನೇ ಪ್ರಮುಖವಾಗಿ ಚರ್ಚಿಸುತ್ತೇವೆ~ ಎಂದು ಹೇಳಿದರು.

ಭಾರತೀಯ ಕಿಸಾನ ಸಂಘವು ಅಖಿಲ ಭಾರತ ಮಟ್ಟದ ಸಂಘಟನೆ. ರಾಜಕೀಯ ರಹಿತವಾಗಿ ಕಾರ್ಯ ನಿರ್ವಹಿ ಸುತ್ತಿದೆ. ರೈತರ ಸಂಘಟನೆ ಹಾಗೂ ಅವರ ಸ್ವಾವಲಂಬನೆ ಸಂಘದ ಮೂಲ ಉದ್ದೇಶ ಎಂದರು.

`ರೈತರ ಭೂಮಿಯನ್ನು ಕಸಿದುಕೊಂಡು ಕೈಗಾರಿಕೆಗಳಿಗೆ ಕೊಡುತ್ತಿದ್ದಾರೆ. ಕೃಷಿ ಇಲಾಖೆ ವ್ಯಾಪಾರಕ್ಕೆ ನಿಂತಿದೆ. ಹಿರಿಯ ಅಧಿಕಾರಿಗಳು ಕಚೇರಿ ಬಿಟ್ಟು ಕದಲುತ್ತಿಲ್ಲ. ಕೃಷಿ ಪದವೀಧರರನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಕೂಡ್ರಿಸಿ ರಿಯಾಯಿತಿ ದರದಲ್ಲಿ ಬೀಜ-ಗೊಬ್ಬರ ವಿತರಿಸುವ ಕೆಲಸಕ್ಕೆ ಹಚ್ಚಿದ್ದಾರೆ. ಹೀಗಾಗಿ ಕ್ಷೇತ್ರ ಮಟ್ಟದಲ್ಲಿ ರೈತರಿಗೆ ಮಾಹಿತಿ ನೀಡುವ ತಜ್ಞರೇ ಇಲ್ಲವಾಗಿದ್ದಾರೆ~ ಎಂದು ಆರೋಪಿಸಿದರು.

`ಮಹಾತ್ಮ ಗಾಂಧೀಜಿ ಅವರು ಗ್ರಾಮಗಳ ಅಭಿವೃದ್ಧಿಯ ಮೂಲಕ ರಾಮರಾಜ್ಯ ಸ್ಥಾಪನೆ ಕನಸು ಕಂಡಿದ್ದರು. ಆದರೆ, ಅಂದಿನ ಪ್ರಧಾನಿ ನೆಹರು ಅವರು ಕೃಷಿಗಿಂತ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು ನೀಡಿದರು. 40 ವರ್ಷಗಳಿಂದೀಚೆ ರಸಾಯನಿಕದ ಬಳಕೆಯಿಂದ ಉತ್ಪಾದನೆ ಹೆಚ್ಚಿತು. ಆದರೆ, ಸೂಕ್ತ ಬೆಲೆ ನೀಡಲು ಸರ್ಕಾರಗಳು ಶ್ರಮಿಸಲಿಲ್ಲ. ಪರಿಣಾಮ ರೈತ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳ ಲಾರಂಭಿದ್ದಾರೆ.

ಈಗ ಅತಿಯಾದ ರಸಾಯನಿಕಗಳ ಬಳಕೆಯಿಂದ ಭೂಮಿ ಬಂಜರಾಗಿ ಆಹಾರ ಉತ್ಪಾದನೆ ಕುಂಠಿತಗೊಂಡಿದೆ. ಬೀಜ- ಗೊಬ್ಬರಕ್ಕೆ ರೈತ ಪರಾವಲಂಬಿಯಾಗಿದ್ದಾನೆ. ಸಾವಯವ ಕೃಷಿಯೇ ಈ ಸಮಸ್ಯೆಗೆ ಪರಿಹಾರ. ಸಾವಯವ ಕೃಷಿಯಿಂದ ದೇಶದ 120 ಕೋಟಿ ಜನರಿಗೆ ಅನ್ನ ಕೊಡಲು ಸಾಧ್ಯ~ ಎಂದು ರಂಗನಾಥ ಹೇಳಿದರು.

ಸಂಘದ ಉತ್ತರ ಕರ್ನಾಟಕ ಅಧ್ಯಕ್ಷ ಸೋಮಣ್ಣ ಹರ್ಲಾಪೂರ, ಕಾರ್ಯದರ್ಶಿ ಗುರುನಾಥ ಬಗಲಿ, ಸಂಘಟನಾ ಕಾರ್ಯದರ್ಶಿ ಜಯರಾಮ ಬೊಳ್ಳಾಜೆ, ಸಮ್ಮೇಳನ ಸ್ವಾಗತ ಸಮಿತಿಯ ಭೀಮನಗೌಡ ಪಾಟೀಲ ಕೋಟ್ಯಾಳ, ಮಲ್ಲನಗೌಡ ಮ.ಪಾಟೀಲ, ಬಿ.ಎಂ. ಕೋಕರೆ, ಮೋಹನ ಏಳಗಿ, ಡಾ.ಮಿರಗಿ, ಅವಜಿ  ಪತ್ರಿಕಾಗೋಷ್ಠಿಯಲ್ಲಿದ್ದರು.

25ರಿಂದ ಪ್ರಾಂತ ಸಮ್ಮೇಳನ
ವಿಜಾಪುರ: ಭಾರತೀಯ ಕಿಸಾನ್ ಸಂಘದ ಉತ್ತರ ಕರ್ನಾಟಕದ 13 ಜಿಲ್ಲೆಗಳ ಕಾರ್ಯಕರ್ತರ ಪ್ರಾಂತ ಸಮ್ಮೇಳನವನ್ನು ನವೆಂಬರ್ 25 ಮತ್ತು 26ರಂದು ನಗರದ ವನಶ್ರೀ ಸಂಸ್ಥಾನ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು  ರಂಗನಾಥ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.