ADVERTISEMENT

ಕೆರೆಯಂಗಳವೇ ಮಕ್ಕಳಿಗೆ ಆಟದ ಬಯಲು!

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 10:05 IST
Last Updated 16 ಜೂನ್ 2011, 10:05 IST
ಕೆರೆಯಂಗಳವೇ ಮಕ್ಕಳಿಗೆ ಆಟದ ಬಯಲು!
ಕೆರೆಯಂಗಳವೇ ಮಕ್ಕಳಿಗೆ ಆಟದ ಬಯಲು!   

ತಾಳಿಕೋಟೆ: ಒಂದೆಡೆ ಲಭ್ಯವಾಗದ ಶಾಲಾ ಮೈದಾನ, ಇನ್ನೊಂದೆಡೆ ತಲೆಯ ಮೇಲೆ ಅಪಾಯಕಾರಿ ವಿದ್ಯುತ್ ತಂತಿಗಳು. ಮಳೆ ಬಂದರೆ ಶಾಲೆಯವರೆಗೆ ನಿಲ್ಲುವ ನೀರು. ಇದು  ಸಮೀಪದ ಬಿಳೇಭಾವಿ ಗ್ರಾಮದ ಶಾಲಾ ಮಕ್ಕಳ ಸ್ಥಿತಿ.

ಕೆರೆ ಒತ್ತುವರಿಕಾರರನ್ನು ತೆರವುಗೊಳಿಸುವ ವಿಷಯ ಮೇಲುಗೈ ಸಾಧಿಸಿ, ಗ್ರಾಮವನ್ನು ಇಬ್ಭಾಗ ಮಾಡಿದ್ದರಿಂದ ಗ್ರಾಮದ ಕೆಲಸಗಳೆಲ್ಲ ಕುಂಠಿತಗೊಂಡಿವೆ.

ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳಿಗೆ ಆಟವಾಡಲು ಮೈದಾನವೇ ಇರಲಿಲ್ಲ. ಕನಿಷ್ಠ 400 ಮಕ್ಕಳು ಪ್ರತಿ ವರ್ಷ ದಾಖಲಾಗುವ ಈ ಶಾಲೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಅವಕಾಶವೇ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿಯವರು ಶಾಲೆಗೆ ಹೊಂದಿಕೊಂಡಂತೆ ಇದ್ದ  9 ಎಕರೆ 32 ಗುಂಟೆ ವಿಸ್ತಿರ್ಣದ ಹೂಳು ತುಂಬಿದ ಕೆರೆಯಲ್ಲಿ 15 ಗುಂಟೆ ಪಡೆಯಲು ನಿರ್ಧರಿಸಿದರು. ಗ್ರಾಮದ ಹಿರಿಯರೂ ಒಪ್ಪಿದರು. ಪಂಚಾಯಿತಿಯಲ್ಲಿ ನೋಂದಣಿ ಕೂಡ ನಡೆಯಿತು.

ಸರ್ಕಾರದ ಜಾಗವನ್ನು ಸರ್ಕಾರದ ಶಾಲೆಗೆ, ಗ್ರಾಮದ ಮಕ್ಕಳಿಗಾಗಿ ನೀಡಿದ್ದರಿಂದ ಯಾರೂ ತಕರಾರು ಮಾಡಲಿಲ್ಲ. ಬೇಸಿಗೆಯಲ್ಲಿ  ಕೆರೆ ಅಭಿವೃದ್ಧಿ ಯೋಜನೆಯಡಿ ಈ ಕೆರೆಯ ಹೂಳು ಎತ್ತಿ ಬಲವಾದ, ಭದ್ರವಾದ ಏರಿ(ಒಡ್ಡು) ನಿರ್ಮಾಣಕ್ಕೆ ರೂ. 9ಲಕ್ಷ ಬಿಡುಗಡೆಯಾಯಿತು. 

ಹೀಗಾಗಿ ಕೆರೆಯಿಂದ ಎತ್ತಿದ ಹೂಳನ್ನು ಶಾಲಾ ಮೈದಾನಕ್ಕೆ ಕೊಡಮಾಡಿದ್ದ ಸ್ಥಳಕ್ಕೆ ಹಾಕಿ ಮೈದಾನ ನಿರ್ಮಾಣದ ಕಾರ್ಯ ಕೈಗೊಳ್ಳಲಾಯಿತು.  ಕೆರೆಯ ಸ್ಥಳವನ್ನು ಅತಿಕ್ರಮಿಸಿಕೊಂಡಿದ್ದ ತಿಪ್ಪೆ, ಜಾಗಗಳನ್ನು ಎತ್ತಂಗಡಿ ಮಾಡಲಾಯಿತು.

ಇದೇ ಹಂತದಲ್ಲಿ ಅಕ್ರಮವಾಗಿ ಇಲ್ಲಿ ಮನೆ ಕಟ್ಟಿಕೊಂಡ ವ್ಯಕ್ತಿಯೊಬ್ಬ, ಅದನ್ನು ಬೇರೊಬ್ಬರಿಗೆ ಮಾರಿದ್ದರು. ಕೆರೆ ಒತ್ತುವರಿಕಾರರನ್ನು ಎತ್ತಂಗಡಿ ಮಾಡುವಾಗ ಜಾಗ ಖರೀದಿಸಿದವರು ತಗಾದೆ  ತೆಗೆದರು. ಇದು ತಹಸೀಲ್ದಾರ ಹಾಗೂ ಉಪವಿಭಾಗಾಧಿಕಾರಿಗಳಿಗೆ ತಲುಪಿ ಅವರು ಅತಿಕ್ರಮಣದಾರರನ್ನು ಎತ್ತಂಗಡಿ ಮಾಡಿಸಿ ಹೋದರು. ಇದು ಗ್ರಾಮ ಇಬ್ಭಾಗಕ್ಕೆ ಕಾರಣವಾಯಿತು. ಆಗ ಶಾಲೆಯ ಮಕ್ಕಳಿಗೆ ಮಂಜೂರಾದ ಆಟದ ಮೈದಾನಕ್ಕೂ ಕುತ್ತು ಬಂತು.

ಕೆರೆಯ ಹೂಳನ್ನು ಸಂಪೂರ್ಣ ತೆಗೆದು, ಆಳ ಮಾಡುವುದರಿಂದ ಗ್ರಾಮದ ಮಕ್ಕಳಿಗೆ ಆಟದ ಮೈದಾನ ಲಭ್ಯವಾಗುವುದಿಲ್ಲವೆನ್ನುವುದಕ್ಕಿಂತ, ಕೆರೆ ಹೂಳು ಎತ್ತಿ ನೀರು ನಿಲ್ಲುವಂತಾದಾಗ ನೀರು ಶಾಲೆಯ ಕಂಪೌಂಡವರೆಗೆ ಬರುವ ಅಪಾಯವಿದೆ.

ನಿತ್ಯ ಶಾಲೆಗೆ ಬರುವ ಮಕ್ಕಳು ಆತಂಕದಲ್ಲೇ ಓಡಾಡಬೇಕಾಗುತ್ತದೆ ಎಂಬುದು ಶಿಕ್ಷಕರ ಹಾಗೂ ಎಸ್‌ಡಿಎಂಸಿ ಸದಸ್ಯರ ಚಿಂತೆ.

ಗ್ರಾಮದಲ್ಲೆಗ ಶಾಲೆಯ ಪರ-ವಿರೋಧದ ಬಣಗಳು ಹುಟ್ಟಿಕೊಂಡು ಶಾಲಾ ಮೈದಾನ ಪರಿವರ್ತನೆ ಕಾರ್ಯ ಅರ್ಧಕ್ಕೆ ನಿಂತಿದೆ. ಅಲ್ಲಿ ಮಳೆಯ ನೀರು ನಿಂತು ಶಾಲಾ ಕಂಪೌಂಡ್ ನೆನೆಯುತ್ತಿದೆ. ಅದರಲ್ಲಿ ಮಕ್ಕಳು ಒಮ್ಮಮ್ಮೆ ಆಟಕ್ಕಿಳಿಯುತ್ತಾರೆ!

ಜೊತೆಗೆ ಶಾಲೆಯ ಮೇಲೆ ಬಲವಾದ ವಿದ್ಯುತ್ ತಂತಿಗಳು ಹಾಯ್ದು ಹೋಗಿದ್ದು, ಅವುಗಳನ್ನು  ದೂರ ಸಾಗಿಸಲು ಬಂದ ಹೆಸ್ಕಾಂ ಇಲಾಖೆಯವರಿಗೆ ಸಹಕಾರ ಸಿಗದ್ದರಿಂದ ತಂದ ಕಂಬಗಳನ್ನೂ ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

ಇಲ್ಲಿ ತಮ್ಮದೇ ಗ್ರಾಮದ ಮಕ್ಕಳು ಅಪಾಯಕ್ಕೆ ಸಿಲುಕುತ್ತಿವೆ ಎನ್ನುವ ವಿಚಾರ ಹಲವರಿಗೆ ಬಂದಂತಿಲ್ಲ.ಒಡೆದು ಹೋಗಿರುವ ಗ್ರಾಮದ ಮನಸ್ಸುಗಳಿಗೆ ತಿಳಿ ಹೇಳಲು, ಆತಂಕ ದೂರಮಾಡಲು  ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು  ಮಧ್ಯಪ್ರವೇಶ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.