ADVERTISEMENT

ಗಾಂಧಿ-ಶಾಸ್ತ್ರಿ ಜಯಂತಿ ಇಂದು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 4:40 IST
Last Updated 2 ಅಕ್ಟೋಬರ್ 2012, 4:40 IST

ವಿಜಾಪುರ: ಜಿಲ್ಲಾ ಆಡಳಿತ, ವಾರ್ತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕರ್ನಾಟಕ ಖಾದಿ ಗ್ರಾಮೋದ್ಯೊಗ ಸಂಘ, ಎಣ್ಣೆ ಉತ್ಪಾದಕರ ಕೈಗಾರಿಕಾ ಸಹಕಾರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಸಂಘಗಳ ಸಹಯೋಗದಲ್ಲಿ ಇದೇ 2ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ಬಹದ್ದೂರ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 9ಕ್ಕೆ ನಗರದ ಗಾಂಧಿ ಚೌಕ್‌ನಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಪೂಜೆ, ಲಾಲ್‌ಬಹದ್ದೂರ ಶಾಸ್ತ್ರಿ ಮಾರುಕಟ್ಟೆ ಪ್ರಾಂಗಣದಲ್ಲಿ ಸರ್ವಧರ್ಮ ಪ್ರಾರ್ಥನೆ. 9.30ರಿಂದ 10 ಗಂಟೆವರೆಗೆ ಸದ್ಭಾವನಾ ಜಾಥಾ, ನಗರದ ಹರಿಣಶಿಕಾರಿ ಗಲ್ಲಿಯಲ್ಲಿ ಪಾನಮುಕ್ತ ಸಮಾಜದ ಬಗ್ಗೆ ಹಾಗೂ ಅಸ್ಪೃಶ್ಯತಾ ನಿವಾರಣೆ ಕುರಿತು ಮಾಹಿತಿ, ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

10ಕ್ಕೆ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಉಭಯ ನಾಯಕರ ಜಯಂತಿಯ ಉದ್ಘಾಟನೆ. ವಾರ್ತಾ ಇಲಾಖೆಯಿಂದ ಗಾಂಧಿಯ ಜೀವನ ಚರಿತ್ರೆ ಕುರಿತು  ಕಿರುಚಿತ್ರ ಪ್ರದರ್ಶನ, ಭಾರತ ಸೇವಾದಳ ಹಾಗೂ ವಿದ್ಯಾರ್ಥಿಗಳಿಂದ ಗಾಯನ, ರೂಪಕ. ಲತಾ ಜಹಗೀರ ದಾರ ಸಂಗಡಿಗರಿಂದ ಭಕ್ತಿ ಸಂಗೀತ, ಹ.ಮ. ಪೂಜಾರ ಅವರಿಂದ ಉಪನ್ಯಾಸ ಕಾರ್ಯಕ್ರಮ ಗಳು ಜರುಗಲಿವೆ ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು ಕಡ್ಡಾಯವಾಗಿ ಭಾಗವಹಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ದಪ್ಪ ಮನವಿ ಮಾಡಿಕೊಂಡಿದ್ದಾರೆ.

ಮಾಂಸ ಮಾರಾಟ ನಿಷೇಧ ಇಂದು
ವಿಜಾಪುರ: ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಇದೇ 2ರಂದು ಜಿಲ್ಲೆಯಾದ್ಯಂತ ಮಾಂಸ ಮಾರಾಟ  ನಿಷೇಧಿಸಿ ಆದೇಶಿಸಿ ಜಿಲ್ಲಾ ದಂಡಾ ಧಿಕಾರಿ ಶಿವಯೋಗಿ ಕಳಸದ ಆದೇಶ ಹೊರಡಿಸಿದ್ದಾರೆ.  ಇದೇ 2ರ ಬೆಳಿಗ್ಗೆ 6 ರಿಂದ 3ರ ಬೆಳಿಗ್ಗೆ 6 ಗಂಟೆವರೆಗೆ ಮಾಂಸ ಮಾರಾಟ ನಿಷೇಧಿಸಲಾಗಿದೆ.

ಪಡಿತರ ಚೀಟಿ: ಅವಧಿ ವಿಸ್ತರಣೆ
ವಿಜಾಪುರ: ಪಡಿತರ ಚೀಟಿಗಾಗಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿದವರು ಹಾಗೂ ತಾತ್ಕಾಲಿಕ ಪಡಿತರ ಚೀಟಿ ಹೊಂದಿದವರಿಗೆ ಕಾಯಂ ಪಡಿತರ ಚೀಟಿ ನೀಡುವ ಸಲುವಾಗಿ ಅರ್ಜಿದಾರರ ಫೋಟೊ ಹಾಗೂ ಬಯೋಮೆಟ್ರಿಕ್ ಸೆರೆ ಹಿಡಿದುಕೊಳ್ಳುವ ಅವಧಿಯನ್ನು ಇದೇ 7ರವರೆಗೆ ವಿಸ್ತರಿಸಲಾಗಿದೆ. 

ಸಚಿವ ಬೆಳ್ಳುಬ್ಬಿ ಪ್ರವಾಸ 
ವಿಜಾಪುರ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಇದೇ 2 ರಿಂದ 6 ರವರೆಗೆ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮ ಗಳಲ್ಲಿ ಭಾಗವಹಿಸಲಿದ್ದಾರೆ. 2ರಂದು ಬೆಳಿಗ್ಗೆ 9ಕ್ಕೆ ವಿಜಾಪುರದಲ್ಲಿ ನಡೆಯುವ ಮಹಾತ್ಮ ಗಾಂಧೀಜಿ ಹಾಗೂ  ಶಾಸ್ತ್ರೀಜಿ ಅವರ ಜಯಂತಿ ಯಲ್ಲಿ ಭಾಗವಹಿಸಲಿದ್ದಾರೆ.

ಬಸ್ ಸೌಲಭ್ಯಕ್ಕೆ ಆಗ್ರಹ

ಕೊಲ್ಹಾರ: ಕೊಲ್ಹಾರ ಪುನರ್ವಸತಿ ಕೇಂದ್ರಕ್ಕೆ ಬರುವ ಒಂದು ವಾರ ದೊಳಗೆ ಸೂಕ್ತ ಬಸ್ ಸೌಲಭ್ಯ ಒದಗಿಸಬೇಕು. ಇಲ್ಲದಿದ್ದರೆ ಇಲ್ಲಿನ ರಾ.ಹೆ.218ನ್ನು ತಡೆದು ಹೋರಾಟ ಮಾಡಲಾಗುವುದು ಎಂದು   ಡಿಎಸ್‌ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಕರೆಕಲ್ಲ, ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ನಂದಿ, ಕೊಲ್ಹಾರ ಹೋಬಳಿ ಘಟಕದ ಅಧ್ಯಕ್ಷ ಅಯ್ಯುಬ ದಿಂದಾರ, ತಾ.ಉಪಾಧ್ಯಕ್ಷ ಎಲ್.ಎನ್. ಬಳಿಗಾರ  ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.