ADVERTISEMENT

ಗಾಳಿ ಅಬ್ಬರಕ್ಕೆ ಒಣಗುತ್ತಿದೆ ಭೂಮಿಯ ತೇವ

ಡಿ.ಬಿ, ನಾಗರಾಜ
Published 4 ಜುಲೈ 2017, 5:15 IST
Last Updated 4 ಜುಲೈ 2017, 5:15 IST
ವಿಜಯಪುರ ಹೊರ ವಲಯದ ಭೂತನಾಳ ತಾಂಡಾ ಬಳಿಯ ಹೊಲವೊಂದರ ಮೆಕ್ಕೆ ಜೋಳದ ಬೆಳೆ
ವಿಜಯಪುರ ಹೊರ ವಲಯದ ಭೂತನಾಳ ತಾಂಡಾ ಬಳಿಯ ಹೊಲವೊಂದರ ಮೆಕ್ಕೆ ಜೋಳದ ಬೆಳೆ   

ವಿಜಯಪುರ: ‘ಆಷಾಢ ಮಾಸ ಆರಂಭ ಗೊಂಡ ಬೆನ್ನಿಗೆ ಗಾಳಿಯ ವೇಗವೂ ಹೆಚ್ಚಿದೆ. ಬರೋಬ್ಬರಿ ಎಂಟ್‌ ದಿನ ಕಳೀತು. ಆಗಸದಲ್ಲಿ ಮೋಡಗಳು ದಟ್ಟೈ ಸಿದರೂ ಗಾಳಿಯ ಅಬ್ಬರಕ್ಕೆ ಒಂದ್‌ ಹನಿ ಮಳೆ ಸುರಿದಿಲ್ಲ. ಕ್ಷಣಾರ್ಧದಲ್ಲಿ ಚೆದುರಿ ಹೋಗ್ತೀವೆ.

ಆಗಸದತ್ತ ಮುಖ ಮಾಡಿ ಕುತ್ಗೆ ನೋಯ್ತೇ ವಿನಾಃ, ಗಾಳಿ ಅಬ್ಬರ ತಗ್ಗ ಲಿಲ್ಲ. ಮಳೆ ಸುರಿಲಿಲ್ಲ. ಭೂಮಿಗೆ ಬಿತ್ತಿದ ಬೀಜ ಮೊಳಕೆಯೊಡೆದಿವೆ. ಇದರ ಬೆನ್ನಿಗೆ ಭೂಮ್ತಾಯಿಯೊಳಗಿನ ಹಸಿಯ ಪಸೆ ಆರಿದೆ. ಮೊಳಕೆ ಚಿಗುರೊಡೆದು ಗಿಡವಾಗುವ ಮುನ್ನವೇ ತೇವಾಂಶ ಕೊರತೆ, ಗಾಳಿಯ ಆರ್ಭಟಕ್ಕೆ ಸಿಲುಕಿ ನಲಗುತ್ತಿದೆ.

ವಾರದಿಂದಲೂ ಇದೇ ಹಣೆ ಬರಹ. ಇಂದು ಗಾಳಿ ನಿಲ್ಲಬೌದು ಎಂಬ ನಿರೀ ಕ್ಷೆಯಲ್ಲೇ ದಿನ ದೂಡ್ತಿದ್ದೀವಿ. ಎಂಟತ್ತ್‌ ದಿನ ಕಳೆದರೂ ಕೊಂಚವೂ ಗಾಳಿ ಅಬ್ಬರ ಕಡಿಮೆಯಾಗ್ತಿಲ್ಲ. ಏನ್‌ ಮಾಡ್ಬೇಕು ಎಂಬೋದೇ ತೋಚದಂತಾ ಗಿದೆ’ ಎಂದು ನಗರ ಹೊರ ವಲಯದ ಭೂತನಾಳ ತಾಂಡಾದ ಹೊಲದಲ್ಲಿ ಸೋಮವಾರ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಅರಕೇರಿಯ ಯುವ ರೈತ ದಿಲೀಪ ಮೊಹಿತೆ ‘ಪ್ರಜಾ ವಾಣಿ’ ಬಳಿ ಅಸಹಾಯಕತೆ ವ್ಯಕ್ತಪಡಿಸಿದರು.

ADVERTISEMENT

‘ಬಿತ್ತಿ ಎಂಟತ್ತ್‌ ದಿನ ಕಳೆದ್ವು. ಭೂಮಿಗೆ ಬೀಜ ಚೆಲ್ಲಿದ್ದೇ ಕೊನೆ. ಅಲ್ಲಿಂದ ಇಲ್ಲಿವರೆಗೂ ಒಂದ್‌ ಹನಿ ಮಳೆ ಬಿದ್ದಿಲ್ಲ. ಬಿರುಗಾಳಿಗೆ ಪಸೆಯೆಲ್ಲ ಆರಿದೆ. ಬೀಜ–ಗೊಬ್ಬರಕ್ಕಾಗಿ ಸಾಕಷ್ಟ್‌ ಹಣ ಖರ್ಚ್‌ ಮಾಡೀವ್ನೀ. ಇನ್ನೂ ಬಿತ್ತಬೇಕು ಎಂಬ ಆಲೋಚ್ನೇಯಲ್ಲೀವ್ನೀ.

ಆದ್ರೆ ಸಂಜಿ ಮುಂದ, ರಾತ್ರಿಯಿಡಿ ಗಾಳಿ ಭೋರ್ಗರೆಯುತ್ತೆ. ಭೂಮಿಯ ಪಸೆ ಆರಿಸೈತಿ. ಮುಗಿಲಲ್ಲಿ ಮಳೆ ಛಾಯೆ ಕಾಣ್ತಿಲ್ಲ. ಇಂಥ ಹೊತ್ನಲ್ಲಿ ಏನ್‌ ಮಾಡ ಬೇಕು ಎಂಬುದೇ ತೋಚದಂಗಾಗೈತಿ. ಗಾಳಿ ಅಬ್ಬರ ತಗ್ಗಿ, ನಾಲ್ಕೈದು ದಿನಗಳಲ್ಲಿ ಮಳೆ ಸುರಿಯದಿದ್ರೇ ಭಾರಿ ತ್ರಾಸಾಗಲಿದೆ’ ಎಂದು ವಿಜಯಪುರ ತಾಲ್ಲೂಕು ಬುರಾ ಣಾಪುರ ಗ್ರಾಮದ ರೈತ ಬಸವರಾಜ ಬಸರಗಿ ತಿಳಿಸಿದರು.

ಸರಾಸರಿ 20ರಿಂದ 25 ಕಿ.ಮೀ. ವೇಗ: ‘ಒಂದು ವಾರದ ಅವಧಿಯಿಂದ ಜಿಲ್ಲೆ ಸೇರಿದಂತೆ ಉಳಿದೆಡೆಯೂ ಗಾಳಿಯ ವೇಗ ಹೆಚ್ಚಿದೆ. ಮಾನ್ಸೂನ್‌ ಬಲಹೀನ ವಾಗಿರುವುದರಿಂದ 8–10 ದಿನಗಳಿಂದ ಉತ್ತರ ಒಳನಾಡಿನಲ್ಲಿ ಮಳೆ ಸುರಿದಿಲ್ಲ. ಆದರೆ ಗಾಳಿಯ ತೀವ್ರತೆ ಹೆಚ್ಚಿದೆ.

ಮುಸ್ಸಂಜೆ, ರಾತ್ರಿ ವೇಳೆ ಕೆಲವೊಮ್ಮೆ ಗಾಳಿ ಗಂಟೆಗೆ 30ರಿಂದ 50 ಕಿ.ಮೀ. ವೇಗದಲ್ಲಿ ಬೀಸಿದರೆ, ಉಳಿದಂತೆ 20 ರಿಂದ 25 ಕಿ.ಮೀ. ವೇಗದಲ್ಲಿ ಬೀಸು ತ್ತಿದೆ. ದಿನದ ಒಟ್ಟಾರೆ ಸರಾಸರಿ ಪರಿ ಗಣಿಸಿದರೆ ಗಾಳಿಯ ವೇಗ 20ರಿಂದ 25 ಕಿ.ಮೀ.ನಷ್ಟಿದೆ’ ಎಂದು ಹಿಟ್ನಳ್ಳಿಯ ಕೃಷಿ ಕಾಲೇಜಿನ ಹವಾಮಾನ ವಿಭಾಗದ ತಜ್ಞರೊಬ್ಬರು ಮಾಹಿತಿ ನೀಡಿದರು.

‘ಕರಾವಳಿ, ಮಲೆನಾಡಿನಲ್ಲಿ ಈ ವೇಳೆಗೆ ಧಾರಾಕಾರವಾಗಿ ಮಳೆ ಸುರಿಯಬೇಕಿತ್ತು. ಅರೆ ಮಲೆನಾಡಿನ ವ್ಯಾಪ್ತಿಗೆ ಬರುವ ಹಾವೇರಿ, ಧಾರವಾಡ, ಬೆಳ ಗಾವಿ ಜಿಲ್ಲೆಯ ಕೆಲ ಭಾಗದಲ್ಲಿ ಈ ಬಾರಿ ಇನ್ನೂ ಮಳೆ ಸುರಿದಿಲ್ಲ. ಉತ್ತರ ಒಳ ನಾಡಿನಲ್ಲಿ ಜೂನ್‌ನಲ್ಲಿ ವಾಡಿಕೆ ಮಳೆ ಗಿಂತ ಹೆಚ್ಚಿನ ವರ್ಷಧಾರೆಯಾಗಿದೆ. ಪ್ರಸ್ತುತ ಹವಾಮಾನ ವಿಶ್ಲೇಷಿಸಿದರೆ ಇನ್ನೂ ಒಂದು ವಾರದ ಅವಧಿ ಮಳೆಯ ಸಾಧ್ಯತೆ ಕ್ಷೀಣಿಸಿದೆ. ಒಂದೆರೆಡು ದಿನಗ ಳಲ್ಲಿ ಗಾಳಿ ತೀವ್ರತೆ ತಗ್ಗಲಿದೆ’ ಎಂದರು.

* * 

ವಾರದಿಂದಲೂ ಗಾಳಿ ವೇಗ ಹೆಚ್ಚಿದೆ. ಇದು ಬೆಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇದರಿಂದ ಶೀಘ್ರವಾಗಿ ತೇವಾಂಶ ಒಣಗಿ ಬೆಳೆ ಬಾಡುವ ಸಾಧ್ಯತೆ ಹೆಚ್ಚಿದೆ
ಡಾ.ಬಿ.ಮಂಜುನಾಥ್‌
ಜಿಲ್ಲಾ ಜಂಟಿ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.