ADVERTISEMENT

ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 8:50 IST
Last Updated 6 ಏಪ್ರಿಲ್ 2012, 8:50 IST

ಮರಿಯಮ್ಮನಹಳ್ಳಿ: ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದರೊಂದಿಗೆ ಅವು ಪ್ರದರ್ಶನಗೊಳ್ಳಲು ಸೂಕ್ತ ವೇದಿಕೆಗಳನ್ನು ನಿರ್ಮಿಸಬೇಕಾಗಿದೆ ಎಂದು  ಲಕ್ಷಿನಾರಾಯಣಸ್ವಾಮಿ ಮತ್ತು ಆಂಜನೇಯಸ್ವಾಮಿ ದೇವಳದ ಧರ್ಮದರ್ಶಿ ಎನ್.ಸತ್ಯನಾರಾಯಣ ಇಲ್ಲಿ ಅಭಿಪ್ರಾಯಪಟ್ಟರು.

ಇಲ್ಲಿನ ವಿನಾಯಕ ಪ್ರೌಢಶಾಲಾ ಮೈದಾನದಲ್ಲಿ ಈಚೆಗೆ ಮಧ್ಯಾಹ್ನ  ಜೋಡಿ ರಥೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಬಯಲು ಕುಸ್ತಿಗೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಗ್ರಾಮೀಣ ಕ್ರೀಡೆಗಳಲ್ಲಿ ಒಂದಾದ ಹಾಗೂ ಗಂಡುಕಲೆಯಾದ ಕುಸ್ತಿಕಲೆ ಇನ್ನೂ ಅದರ ಗಟ್ಟಿತನವನ್ನು ಕಳೆದುಕೊಂಡಿಲ್ಲ. ಅಲ್ಲದೆ ಇತರೆ ಕ್ರೀಡೆಗಳೊಂದಿಗೆ ಈ ಕಲೆಗೂ ಮಹತ್ವ ನೀಡಬೇಕಿದೆ ಎಂದು ಹೇಳಿದ ಅವರು, ಈ ಕಲೆಯನ್ನು ಹಬ್ಬ, ಜಾತ್ರೆ ಸಮಯದಲ್ಲಿ ಪ್ರತಿ ವರ್ಷ ನಡೆಸಿಕೊಂಡು ಹೋಗುತ್ತಿರುವುದು ಸ್ವಾಗತಾರ್ಹ ಎಂದರು.
ಕೆಪಿಸಿಸಿ ಸದಸ್ಯ ಎಸ್. ಕೃಷ್ಣಾನಾಯ್ಕ  ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಡೆಯುವ ಹಬ್ಬ, ಜಾತ್ರೆಗಳಿಂದಾಗಿ ನಮ್ಮ  ಹಲವು ಗ್ರಾಮೀಣ ಕ್ರೀಡೆ, ಸಂಸ್ಕೃತಿ, ಜನಪದ ಸಂಸ್ಕೃತಿಗಳು ಇನ್ನೂ ಉಳಿದುಕೊಂಡಿವೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಕುಸ್ತಿಕಲೆ ಉಳಿಸಿಕೊಂಡು ಬೆಳಸಬೇಕಿದೆ ಎಂದರು.

20 ಜೋಡಿ ಕುಸ್ತಿ ಪಟುಗಳು: ಬಯಲು ಕುಸ್ತಿ ಪಂದ್ಯಾವಳಿಯಲ್ಲಿ ಮರಿಯಮ್ಮನಹಳ್ಳಿ, ಕೊಟ್ಟೂರು, ಜಗಳೂರು, ಹರಪನಹಳ್ಳಿ, ಉಜ್ಜಯಿನಿ, ಹೊಸೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 20 ಜೋಡಿ ಕುಸ್ತಿ ಪಟುಗಳು ಭಾಗವಹಿಸಿದ್ದರು. ಪೈಲ್ವಾನರಾದ ಎಲ್.ವೆಂಕಟೇಶ್, ಬಿಸರಹಳ್ಳಿ ಆನಂದ, ಎಲ್.ಸಣ್ಣ ದುರುಗಪ್ಪ, ರೆಡ್ಡಿ ಮಕ್ಬಲ್‌ಸಾಬ್, ಮಾಬುಸಾಬ್, ಕೆ.ಹುಲುಗಪ್ಪ,  ಲಾಲಬಂದಿ ಇಮಾಂ ಸಾಬ್, ಟಿ.ವೆಂಕಟೇಶ್ ಇತರರು ಕುಸ್ತಿಪಂದ್ಯಾಟದ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ರೋಗಾಣಿ ಹುಲುಗಪ್ಪ, ಮಾಜಿ ಸದಸ್ಯ ಎಲ್.ಮಂಜುನಾಥ, ಎಲ್.ಜಗನ್ನಾಥ, ವಿಎಸ್‌ಎಸ್‌ಎನ್ ಅಧ್ಯಕ್ಷ ಎಲ್.ಕೃಷ್ಣಾ, ಮಾಜಿ ಅಧ್ಯಕ್ಷ ಟಿ.ಹುಲುಗಪ್ಪ, ಈ. ನಾಗರಾಜ್, ಎಲ್.ಚಂದ್ರಶೇಖರ್, ಎನ್. ಬುಡೇನ್‌ಸಾಬ್, ಬಿ.ಎಂ.ಎಸ್. ಚಂದ್ರಶೇಖರಯ್ಯ, ಎನ್.ಅಂಬಣ್ಣ, ಬೋಸಪ್ಪ,  ಕೆ.ಸೂರ್ಯನಾರಾಯಣ, ರೆಡ್ಡಿ ಹನುಮಂತಪ್ಪ. ಕುಮಾರ, ಎಲ್. ಉಮೇಶ್, ದುರುಗೇಶ್, ಎಲ್. ಶ್ರೀನಿವಾಸ, ಸುರೇಶ್, ಸುಭಾನಿ, ವಿಶ್ವನಾಥ, ಹನುಮಂತ, ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.