ADVERTISEMENT

ಚೀನಾ ಮಾದರಿ ನೀರಾವರಿ ಕಾಮಗಾರಿ: ಸಲಹೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 5:40 IST
Last Updated 2 ಜನವರಿ 2012, 5:40 IST

ವಿಜಾಪುರ: `ಕೃಷ್ಣಾ ಹಂತ-3ರ ಎಲ್ಲ ನೀರಾವರಿ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಚೀನಾ ಮಾದರಿಯನ್ನು ಅನುಸರಿಸಬೇಕು. ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಮಗಾರಿಗೆ ವಿಶೇಷ ಅಧಿಕಾರಿಯನ್ನು ನೇಮಿಸಬೇಕು~ ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಆಗ್ರಹಿಸಿದರು.

`ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕಾಗಿ ವಿಶೇಷ ಅಧಿಕಾರಿಯನ್ನು ನೇಮಿಸಿ ಅವರಿಗೆ ಸಂಪೂರ್ಣ ಅಧಿಕಾರ ನೀಡಬೇಕು~ ಎಂದು ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

`ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸಬೇಕಾದರೆ ಒಂದು ಲಕ್ಷ ಎಕರೆ ಜಮೀನು, 22 ಗ್ರಾಮಗಳು ಮುಳುಗಡೆಯಾಗಲಿವೆ. ರೈತರ ಬೇಡಿಕೆಗಿಂತ 1-2 ಲಕ್ಷ ರೂಪಾಯಿ ಹೆಚ್ಚುವರಿ ದರ ನೀಡಿ ರೈತರ ಒಪ್ಪಿಗೆ ಪಡೆದು ಭೂಮಿ ಖರೀದಿಸಬೇಕು. ಸಂತ್ರಸ್ತರಿಗೆ ಕೆಐಎಡಿಬಿ ಮಾದರಿಯಲ್ಲಿ ಸೌಲಭ್ಯ ಕಲ್ಪಿಸಿಕೊಡಬೇಕು~ ಎಂದರು.

`ಈ ಎಲ್ಲ ಕಾಮಗಾರಿಗಳಿಗೆ 25 ಸಾವಿರ ಕೋಟಿ ರೂಪಾಯಿ ಹಣ ಬೇಕಾಗಲಿದೆ. ಚೀನಾ ಮಾದರಿಯಲ್ಲಿ ಎಲ್ಲ ಕಾಮಗಾರಿಯನ್ನು ಜಾಗತಿಕ ಮಟ್ಟದ ಬೃಹತ್ ಕಂಪನಿಗೆ ವಹಿಸಿಕೊಡಬೇಕು. ಇದರಿಂದ ವಿಳಂಬ ಹಾಗೂ ಭ್ರಷ್ಟಾಚಾರ ತಡೆಯಲು ಸಾಧ್ಯ~ ಎಂದು ಸಲಹೆ ನೀಡಿದರು.

ಚಿಮ್ಮಲಗಿ, ಗುತ್ತಿ ಬಸವಣ್ಣ ಯೋಜನೆಗಳನ್ನು ಒಂದು ವರ್ಷಗಳಲ್ಲಿ ಪೂರ್ಣಗೊಳಿಸಬೇಕು. ಇನ್ನುಳಿದ ಕಾಮಗಾರಿಗಳನ್ನು ಐದು ವರ್ಷಗಳ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು. ಈ ಬಜೆಟ್‌ನಲ್ಲಿ ಕನಿಷ್ಠ 5 ಸಾವಿರ ಕೋಟಿ ರೂಪಾಯಿಗಳನ್ನು ಯೋಜನಾವಾರು ಮೀಸಲಿಡಬೇಕು ಎಂದು ಆಗ್ರಹಿಸಿದರು.

ಒಂದು ವರ್ಷದಿಂದ ಇಲ್ಲಿಯವರೆಗೆ ನಡೆದ ನಿರಂತರ ಪ್ರಯತ್ನದ ಫಲವಾಗಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ವಿಧಾನ ಮಂಡಳ ಅಧಿವೇಶನದಲ್ಲಿಯೂ ಪಕ್ಷಬೇಧ ಮರೆತು ಅವಳಿ ಜಿಲ್ಲೆಗಳ ಜನಪ್ರತಿನಿಧಿಗಳೆಲ್ಲರೂ ಸರ್ಕಾರದ ಗಮನ ಸೆಳೆದಿದ್ದೇವೆ. ಇದೇ 8ರಂದು ನಗರದಲ್ಲಿ ನೀರಾವರಿ ಅನುಷ್ಠಾನ ಮತ್ತು ಜಾಗೃತ ಸಮಿತಿ ಸಭೆ ನಡೆಯಲಿದ್ದು, ಅಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದರು.

`ಬಜೆಟ್‌ಕ್ಕಿಂತ ಮುನ್ನ ಅವಳಿ ಜಿಲ್ಲೆಗಳ ಮಠಾಧೀಶರ ನೇತೃತ್ವದಲ್ಲಿ ಹೋರಾಟ ಸಮಿತಿಯ ನಿಯೋಗವನ್ನು ಬೆಂಗಳೂರಿಗೆ ಕರೆದೊಯ್ದು ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಚರ್ಚಿಸಬೇಕು ಎಂಬುದು ನನ್ನ ವೈಯಕ್ತಿಕ ವಿಚಾರ. ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು~ ಎಂದರು.

ಈಗಿರುವ ಎಲ್ಲ ನೀರಾವರಿ ಯೋಜನೆಗಳನ್ನು ಅನುಷ್ಠಾನ ಗೊಳಿಸಿದರೂ ಇಂಡಿ ತಾಲ್ಲೂಕಿನ ಹೊರ್ತಿ, ಚಡಚಣ, ಬರಡೋಲ ಪ್ರದೇಶ ನೀರಾವರಿಯಿಂದ ವಂಚಿತವಾಗಲಿದೆ. ಆ ಪ್ರದೇಶಕ್ಕೂ ನೀರಾವರಿ ಕಲ್ಪಿಸುವ ಸಾಧ್ಯತೆ ಕುರಿತು ವರದಿ ನೀಡುವಂತೆ ತಜ್ಞರಿಗೆ ಸಲಹೆ ನೀಡಲಾಗಿದೆ. ಈ ಪ್ರದೇಶಕ್ಕೆ ಅಗತ್ಯವಿರುವ 5 ಟಿಎಂಸಿ ನೀರನ್ನು ಹೊಂದಾಣಿಕೆ ಮಾಡಬೇಕು. ಕೆರೆ ತುಂಬುವ ಯೋಜನೆಯಲ್ಲಿ ಎಲ್ಲ ಕೆರೆಗಳನ್ನು ಸೇರಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಡಾ.ವಿ.ಪಿ. ಹುಗ್ಗಿ, ಜಿ.ಪಂ. ಸದಸ್ಯರಾದ ಬಿ.ಬಿ. ಪಾಟೀಲ, ಟಿ.ಕೆ. ಹಂಗರಗಿ, ಪ್ರಮುಖರಾದ ಅರ್ಜುನ ರಾಠೋಡ, ಸಿದ್ದಣ್ಣ ಸಕ್ರಿ, ಸೋಮನಾಥ ಬಾಗಲಕೋಟ ಪತ್ರಿಕಾಗೋಷ್ಠಿಯಲ್ಲಿದ್ದರು. ಬಿಎಲ್‌ಡಿಇಯಿಂದ ಮತ್ತೊಂದು ಆಸ್ಪತ್ರೆ: ಬಿಎಲ್‌ಡಿಇ ಸಂಸ್ಥೆಯಿಂದ 200 ಹಾಸಿಗೆಗಳ ಸುಸಜ್ಜಿತ ಮತ್ತೊಂದು ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಸಂಸ್ಥೆಯ ಚೇರಮನ್ ಎಂ.ಬಿ. ಪಾಟೀಲ ಹೇಳಿದರು.

ಜಾಗತಿಕ ಗುಣಮಟ್ಟದ ಐಟಿಐ ಆರಂಭಿಸಲಾಗುತ್ತಿದ್ದು, ಇದಕ್ಕೆ 9995 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ. ಈ ಶುಲ್ಕ ಭರಿಸುವ ಶಕ್ತಿ ಇಲ್ಲದ ಬಡವರಿಗೆ ಕಾರ್ಖಾನೆಗಳ ಸಹಯೋಗದಲ್ಲಿ ಪ್ರವೇಶ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.