ADVERTISEMENT

ಜಿ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 5:45 IST
Last Updated 25 ಜನವರಿ 2012, 5:45 IST

ವಿಜಾಪುರ: ವಿರೋಧ ಪಕ್ಷದವರ ಅವಿಶ್ವಾಸ ಮಂಡನೆಯ ಭೀತಿ ಹಾಗೂ ಭಾರತೀಯ ಜನತಾ ಪಕ್ಷದ ಜಿಲ್ಲಾ ಕೋರ್ ಕಮೀಟಿಯ ಸೂಚನೆಯ ಮೇರೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಂಕ್ರುಬಾಯಿ ಚಲವಾದಿ, ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಅವರ ರಾಜೀನಾಮೆ ಅಂಗೀಕಾರವಾಗಿದ್ದು, ತಾಂತ್ರಿಕ ಕಾರಣದಿಂದ ಅಧ್ಯಕ್ಷೆ ಶಂಕ್ರುಬಾಯಿ ಚಲವಾದಿ ಅವರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ.

ಏತನ್ಮಧ್ಯೆ `ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಭೆ ಕರೆಯುವಂತೆ ಅಧ್ಯಕ್ಷರಿಗೆ ನೊಟೀಸ್ ನೀಡಿದ್ದರೂ ಅವರು ಸಭೆ ಕರೆದಿಲ್ಲ. ಅವಿಶ್ವಾಸ ನಿರ್ಣಯ ಮಂಡಿಸಲು ಸಭೆ ಕರೆಯಬೇಕು~ ಎಂದು ಕಾಂಗ್ರೆಸ್ ಪಕ್ಷದ 19 ಹಾಗೂ ಜೆಡಿಎಸ್‌ನ ಒಬ್ಬ ಸದಸ್ಯರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ನೋಟೀಸ್ ನೀಡಿದ್ದಾರೆ.

`ಅಧ್ಯಕ್ಷೆ ಶಂಕ್ರುಬಾಯಿ ಚಲವಾದಿ ತಮ್ಮ ಹುದ್ದೆಗೆ ಸೋಮವಾರ ರಾಜೀನಾಮೆ ಸಲ್ಲಿಸಿ ಅದನ್ನು ಅಂಗೀಕರಿಸುವಂತೆ ನಮಗೆ ಪತ್ರ ನೀಡಿದ್ದರು. ನಿಯಮದಂತೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ರಾಜೀನಾಮೆ ಸಲ್ಲಿಸಬೇಕು. ನಾವು ಅವರ ರಾಜೀನಾವೆು ಅಂಗೀಕರಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಅದನ್ನು ಅವರಿಗೆ ತಕ್ಷಣವೇ ಪತ್ರದ ಮೂಲಕ ತಿಳಿಸಲಾಗಿದೆ~ ಎಂದು ಜಿ.ಪಂ. ಸಿಇಒ ಎ.ಎನ್. ಪಾಟೀಲ ಹೇಳಿದರು.

`ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಅವರು ತಮ್ಮ ರಾಜೀನಾಮೆ ಪತ್ರವನ್ನು ಮಂಗಳವಾರ ಅಧ್ಯಕ್ಷರಿಗೆ ಸಲ್ಲಿಸಿದ್ದು, ಅಧ್ಯಕ್ಷರು ಅದನ್ನು ಅಂಗೀಕರಿಸಿದ್ದಾರೆ~ ಎಂದು ಅವರು ತಿಳಿಸಿದರು.

`ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಭೆ ಕರೆಯಬೇಕು ಎಂದು ಕಾಂಗ್ರೆಸ್‌ನ 19 ಹಾಗೂ ಜೆಡಿಎಸ್‌ನ ಒಬ್ಬರು ಸದಸ್ಯರು ಸೋಮವಾರ ನೋಟೀಸ್ ನೀಡಿದ್ದಾರೆ. ಉಪಾಧ್ಯಕ್ಷರು ರಾಜೀನಾಮೆ ನೀಡಿದ್ದರಿಂದ ಆ ಹುದ್ದೆ ತೆರವಾಗಿದೆ.
 
ಅಧ್ಯಕ್ಷರು ಸರ್ಕಾರಕ್ಕೆ ರಾಜೀನಾಮೆ ಸಲ್ಲಿಸಿ, ಅದು ಅಂಗೀಕಾರವಾಗಬೇಕು. ನಿಯಮದಂತೆ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಭೆ ಕರೆಯಬೇಕಾಗುತ್ತದೆ~ ಎಂಬುದು ಅವರ ವಿವರಣೆ.

ಒಟ್ಟು 38 ಸದಸ್ಯ ಬಲದ ವಿಜಾಪುರ ಜಿಲ್ಲಾ ಪಂಚಾಯಿತಿಯಲ್ಲಿ 19 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಏಕೈಕ ದೊಡ್ಡ ಪಕ್ಷವಾಗಿದೆ. ಬಿಜೆಪಿ 16, ಜೆಡಿಎಸ್ ಎರಡು ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ.
ಸದ್ಯ ಬಿಜೆಪಿಯ ಶಂಕ್ರುಬಾಯಿ ಚಲವಾದಿ ಅಧ್ಯಕ್ಷರಾಗಿದ್ದು, ಪಕ್ಷೇತರರಾಗಿ ಆಯ್ಕೆಯಾಗಿದ್ದ ಶ್ರೀಶೈಲಗೌಡ ಬಿರಾದಾರ ಉಪಾಧ್ಯಕ್ಷರಾಗಿದ್ದರು.

ಅವಿಶ್ವಾಸ ಗೊತ್ತುವಳಿಗೆ ಆಡಳಿತಾರೂಢ ಬಿಜೆಪಿ ಪಕ್ಷದ ಆರು ಜನ ಸಹಿ ಮಾಡಿದ್ದರು. ಪಕ್ಷದ ಸೂಚನೆಯ ಮೇರೆಗೆ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಜೆಡಿಎಸ್‌ನ ಒಬ್ಬ ಸದಸ್ಯರನ್ನು ಸೆಳೆಯುವ ಮೂಲಕ ಕಾಂಗ್ರೆಸ್ ತನ್ನ ಬಲವನ್ನು 20ಕ್ಕೆ ಹೆಚ್ಚಿಸಿಕೊಂಡಿದೆ. 

ಒಂದು ವೇಳೆ ಅವಿಶ್ವಾಸ ನಿರ್ಣಯ ಮಂಡನೆಯಾದರೆ ಬಹುಮತ ಕ್ರೋಢೀಕರಿಸಿಕೊಂಡಿರುವ ಕಾಂಗ್ರೆಸ್ ಮೇಲುಗೈ ಸಾಧಿಸುವ ಸಾಧ್ಯತೆ ಇರುವುದರಿಂದ ಬಿಜೆಪಿ ತನ್ನ ಅಧ್ಯಕ್ಷ- ಉಪಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.