ADVERTISEMENT

ಜಿ.ಪಂ. ಸಭೆ: ಮಾರ್ಚ್ ಅಂತ್ಯದೊಳಗೆ ಹಣ ಬಳಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 8:15 IST
Last Updated 14 ಫೆಬ್ರುವರಿ 2012, 8:15 IST

ವಿಜಾಪುರ: ಅಭಿವೃದ್ಧಿ ಕಾರ್ಯಗಳಿಗಾಗಿ ಬಿಡುಗಡೆ ಯಾದ ಅನುದಾನವನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣವಾಗಿ ಬಳಕೆ ಮಾಡಬೇಕು. ಬಳಕೆಯಾಗದ ಅನುದಾನ ವ್ಯರ್ಥವಾಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎನ್. ಪಾಟೀಲ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ವಿಶೇಷ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಯಾದ ಅನುದಾನ ಪೈಕಿ  ರೂ. 12 ಕೋಟಿ  ಅನುದಾನ  ವಿವಿಧ ಇಲಾಖೆಯಲ್ಲಿ ವೆಚ್ಚವಾಗದೇ ಉಳಿದಿದೆ. ಈ  ಆರ್ಥಿಕ ವರ್ಷದ ಮಾರ್ಚ್ ಅಂತ್ಯದೊಳಗೆ ಎಲ್ಲ ಹಣವನ್ನು ಪೂರ್ಣವಾಗಿ ಬಳಕೆ ಮಾಡಬೇಕು ಎಂದರು.

ವಿಶೇಷ ಘಟಕ ಯೋಜನೆಯಡಿ ನಿಗದಿಯಾದ ಅನುದಾನವನ್ನು ಈಗಾಗಲೇ ಎಲ್ಲ ತಾಲೂಕಾ ಪಂಚಾಯತಿಗಳಿಗೆ ಬಿಡುಗಡೆಗೊಳಿಸಲಾಗಿದೆ. ಇಲಾಖಾವಾರು ಅನುದಾನವನ್ನು ಪಡೆದು ನಿಗದಿತ ಅವಧಿಯೊಳಗೆ ವೆಚ್ಚ ಮಾಡಲು ಸಲಹೆ ನೀಡಿದರು.

ವಿವಿಧ ಇಲಾಖೆಯ ಅಭಿವೃದ್ಧಿ ಅನುದಾನದ ಶೇ 33ರಷ್ಟು ಅನುದಾನವನ್ನು ಮಹಿಳಾ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಬಳಸಬೇಕಾಗಿದೆ.
 
ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ನಿಗದಿಯಂತೆ ಮಹಿಳಾ ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡಿರುವುದಿಲ್ಲ. ಈ ಕುರಿತಂತೆ  ಗಮನಹರಿಸಿ ನಿಗದಿತ ಅನುದಾನದಂತೆ ಮಹಿಳಾ ಕಲ್ಯಾಣ ಕಾರ್ಯಕ್ರಮಗಳಿಗೆ ಶೇ 33ರಷ್ಟು ಅನು ದಾನ ಬಳಸಿ ವರದಿ ನೀಡುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಬರಗಾಲ ಪರಿಸ್ಥಿತಿ ಇರುವುದರಿಂದ ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ವಿವಿಧೆಡೆಯಿಂದ  ಬೇಡಿಕೆ ಬರುತ್ತಿವೆ. ಉದ್ಯೋಗ ಖಾತರಿಯಡಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಉದ್ಯೋಗ ಬೇಡಿಕೆಗಳು ಬರುತ್ತಿಲ್ಲ. ಉದ್ಯೋಗ ಖಾತರಿ ಕುರಿತಂತೆ ಯಾವುದೇ ದೂರುಗಳು ಸಹ ಇರುವುದಿಲ್ಲ.
 
ಈವರೆಗೆ ಹಳೆಯ ಬಾಕಿ ರೂ. 46 ಕೋಟಿಗಳ ಬಿಲ್‌ಗಳನ್ನು ಪಾವತಿಸಲಾಗಿದೆ. ಹೊಸದಾಗಿ ರೂ. 24 ಕೋಟಿಗಳ ಕೆಲಸವನ್ನು ಮಾಡಲಾಗಿದೆ ಎಂದು ಉದ್ಯೋಗ ಖಾತರಿ ಉಸ್ತುವಾರಿ ಜಿಲ್ಲಾ ಪಂಚಾಯೊತಿ ಉಪಕಾರ್ಯದರ್ಶಿ ಅಮರೇಶ ನಾಯಕ ಸಭೆಗೆ ವಿವರಿಸಿದರು.

ಜಿಲ್ಲೆಯಲ್ಲಿ 417 ಕುಡಿಯುವ ನೀರಿನ ಕಾಮಗಾರಿಗಳನ್ನು ಈವರ್ಷ ಕೈಗೊಂಡಿದ್ದು, 114 ಕಾಮಗಾರಿಗಳು ಪೂರ್ಣಗೊಂಡಿವೆ. ಬಹುಹಳ್ಳಿ ಕುಡಿಯುವ ನೀರಿನ 24 ಯೋಜನೆಗಳ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ.
 
ಉಳಿದ ಎಲ್ಲ ಕಾಮಗಾರಿಗಳು ಮಾರ್ಚ್ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿವೆ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಪ್ರಭಾರ ಕಾರ್ಯನಿರ್ವಾಹಕ ಎಂಜಿನಿಯರ್ ಕೊಳ್ಳಿ ಸಭೆಗೆ ತಿಳಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ 196 ಕೊಳವೆ ಬಾವಿಗಳು, ಡಾ. ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದಿಂದ 122 ವೈಯಕ್ತಿಕ ಹಾಗೂ 20 ಸಾಮೂಹಿಕ ಕೊಳವೆ ಬಾವಿಗಳು ಹಾಗೂ  ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ  75 ವೈಯಕ್ತಿಕ ಕೊಳವೆ ಬಾವಿಗಳನ್ನು ಕೊರೆಸುವ ಕಾಮಗಾರಿಯನ್ನು ಆರಂಭಿಸಲಾಗಿದ್ದು, ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಈಗಾಗಲೇ ಕೊರೆಯಿಸಲಾದ ಕೊಳವೆ ಬಾವಿಗಳ ಪೈಕಿ ವಿದ್ಯುತ್ ಸಂಪರ್ಕ ಕಲ್ಪಿಸಲು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಇಲಾಖೆಯ 667, ಹಿಂದುಳಿದ ವರ್ಗದ 230, ಅಲ್ಪಸಂಖ್ಯಾತರ ಇಲಾಖೆಯ 214 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಬಾಕಿ ಉಳಿದಿದ್ದು, ವಿದ್ಯುತ್ ಕಾಮಗಾರಿಗಳು ಆರಂಭಿಸಲಾಗಿದೆ ಎಂದು ಹೆಸ್ಕಾಂ  ಎಂಜಿನಿಯರ್‌ರು ಸಭೆಗೆ ವಿವರಿಸಿದರು.

ಸಭೆಯಲ್ಲಿ ಆರೋಗ್ಯ, ಶಿಕ್ಷಣ, ಪಡಿತರ ವಿತರಣೆ, ಯುಜನರಿಗೆ ಉದ್ಯೋಗಾವಕಾಶ, ಕೃಷಿ, ರೇಷ್ಮೆ ಇತರ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಲಾಯಿತು.

ಜಿಲ್ಲಾ ಪಂಚಾಯಿತಿ ಹಂಗಾಮಿ ಅಧ್ಯಕ್ಷ ಗಂಗಾಧರ ನಾಡಗೌಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ. ಯೋಜನಾಧಿಕಾರಿ ನಿಂಗಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.