ADVERTISEMENT

ಜಿಲ್ಲೆಯ ವಿವಿಧೆಡೆ ಕಾರಹುಣ್ಣಿಮೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 4:51 IST
Last Updated 25 ಜೂನ್ 2013, 4:51 IST

ಬಸವನಬಾಗೇವಾಡಿ:  ತಾಲ್ಲೂಕಿ ನಾ ದ್ಯಂತ ಭಾನುವಾರ ಕಾರಹುಣ್ಣಿಮೆ ಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ರೈತರು ಬೆಳಿಗ್ಗೆ ತಮ್ಮ ದನಕರುಗಳ ಮೈತೊಳೆದು  ಬಣ್ಣಗಳಿಂದ ಅಲಂಕರಿಸಿ ಗೊಂಡೆ, ರಿಬ್ಬನ್, ಗೆಜ್ಜೆ ಸರ ಸೇರಿದಂತೆ ವಿವಿಧ ವಸ್ತುಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿದರು. ನಂತರ ಎತ್ತುಗಳಿಗೆ ನೈವೇದ್ಯ  ಅರ್ಪಿಸಲಾಯಿತು.

ಸಂಜೆ ಪಟ್ಟಣದ ಕೆರೆಯ ಮುಂಭಾಗ, ಗಣಪತಿ ಚೌಕ್ ಮುಖ್ಯ ರಸ್ತೆ ಹಾಗೂ ವಿಜಾಪುರ ರಸ್ತೆಯಲ್ಲಿ ರೈತರು ತಮ್ಮ ಎತ್ತುಗಳನ್ನು ಕರೆ ತಂದರು. ಸಾಲಾಗಿ ನಿಲ್ಲಿಸಿದ ಎತ್ತುಗಳನ್ನು ಜನರು ಜಯಘೋಷದೊಂದಿಗೆ  ಓಡಿಸಿದರು.

ರೈತರಾದ ಗುರುಪಾದ ಮುಳವಾಡ, ಬಸಪ್ಪ ಹಾರಿವಾಳ, ಮಲಕಾಜಿ ನಾಗ ವಾಡ, ಮಲಕಾಜಿ ಮುಳವಾಡ, ಚನ್ನ ಬಸು ಮುಳವಾಡ, ಗೋಲಪ್ಪ ಜಾಡರ, ಶರಣಪ್ಪ ಬೆಲ್ಲದ, ಲಕ್ಕಪ್ಪ ಡೆಂಗಿ, ಶಿವಾನಂದ ಈರಕಾರ ಮುತ್ಯಾ, ಸೋಮಲಿಂಗ ಈರಕಾರ ಮುತ್ಯಾ, ಸಂಗಯ್ಯ ಒಡೆಯರ, ಜ್ಯೋತಿ ಪವಾರ, ಯಲ್ಲಪ್ಪ ಉಕ್ಕಲಿ, ಶಿವಪ್ಪ ಯರನಾಳ, ಪರುತಪ್ಪ ಕುಂಬಾರ, ಚಂದ್ರಶೇಖರ ಓಲೇಕಾರ, ಹಣಮಂತ ಬಸ್ತಾಳ, ಸಿದ್ದಪ್ಪ ಉಕ್ಕಲಿ ಉಪಸ್ಥಿತರಿದ್ದರು.

ಮನಗೂಳಿ ವರದಿ: ತಾಲ್ಲೂಕಿನ ಮನ ಗೂಳಿ ಗ್ರಾಮದಲ್ಲಿ ಕಾರಹುಣ್ಣಿಮೆ ಯನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು.
ರೈತರು ತಮ್ಮ ಎತ್ತುಗಳನ್ನು ಅಲಂಕರಿಸುವುದರೊಂದಿಗೆ ತಾವು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಗ್ರಾಮದ ಹಳೆ ಬಸ್‌ನಿಲ್ದಾಣದ ಬಳಿ  ಬಂಡಿ ಓಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಕರಿ ಹರಿದ ಎತ್ತುಗಳು
ಆಲಮಟ್ಟಿ: ನಿಡಗುಂದಿಯಲ್ಲಿ ಭಾನುವಾರ ಕಾರಹುಣ್ಣಿಮೆಯ ನಿಮಿತ್ತ ಎತ್ತುಗಳನ್ನು ಸಿಂಗರಿಸಿ, ಅವುಗಳಿಗೆ ವಿಶೇಷ ಪೂಜೆ ಮಾಡಿ ಕರಿ ಹರಿಯುವ ಕಾರ್ಯಕ್ರಮ ಗ್ರಾಮಸ್ಥರ  ಹರ್ಷೋದ್ಘಾರಗಳ ಮಧ್ಯೆ ಜರುಗಿತು.

ರೈತರು ತಮ್ಮ ಬದುಕಿನ ಜೀವನಾಡಿಯಾಗಿರುವ ಎತ್ತುಗಳ ಮೈತೊಳೆದು ಅವುಗಳಿಗೆ ಬಣ್ಣ ಬಳಿದು ಶೃಂಗರಿಸುವ ಕಾರ್ಯದಲ್ಲಿ ತೊಡಗಿದ್ದರು. ಅವುಗಳ ಮೈಗೆ, ಕೊಂಬುಗಳಿಗೆ ಬಣ್ಣ ಹಚ್ಚಿ, ರಿಬ್ಬನ್ ಮುಂತಾದ ಸಾಮಗ್ರಿಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿದರು.

ನಿಡಗುಂದಿಯ ದೇಸಾಯಿ, ಕುಲಕರ್ಣಿ, ದೇಶಪಾಂಡೆ, ಪಟ್ಟಣಶೆಟ್ಟಿ, ಅವಟಿ, ಗೋನಾಳ, ಮಿಣಜಗಿ, ಚಿಂತಾಮಣಿ, ಬಡಿಗೇರ ಮನೆತನಗಳ ಎತ್ತುಗಳು ಸೇರಿದಂತೆ ಪ್ರಮುಖರ ಎತ್ತುಗಳು ಪಾಲ್ಗೊಂಡಿದ್ದವು.

ಊರ ದೈವದ ಹಿರಿಯರು ಹಸಿರು ನಿಶಾನೆ ತೋರಿಸುವುದರ ಮೂಲಕ ಕರಿ ಹರಿಯುವ ಓಟಕ್ಕೆ ಚಾಲನೆ ನೀಡಿದರು.
ಕಂದು ಬಣ್ಣದ ಎತ್ತು ಮುಂದೆ ಓಡಿದರೇ ಮುಂಗಾರು ಬೆಳೆ, ಮಳೆ ಉತ್ತಮ, ಬಿಳಿ ಎತ್ತುಗಳು ಕರಿ ಹರಿದರೇ ಹಿಂಗಾರು ಬೆಳೆ ಹುಲುಸಾಗಿ ಬರುತ್ತವೆ ಎಂಬ ಅಪಾರವಾದ ನಂಬಿಕೆ ರೈತರಲ್ಲಿದೆ.

ನಿಡಗುಂದಿ ಪಟ್ಟಣದ ಕರವೀರಪ್ಪ ಪಟ್ಟಣಶೆಟ್ಟಿ ಅವರ ಬಿಳಿ ಎತ್ತುಗಳು ಅತ್ಯಂತ ವೇಗವಾಗಿ ಓಡಿ ಕರಿ ಹರಿದವು. ಇದರಿಂದಾಗಿ ಹಿಂಗಾರು ಬೆಳೆಗಳಾದ ಜೋಳ, ಗೋಧಿ ಬೆಳೆ ಚೆನ್ನಾಗಿ ಬರುತ್ತವೆ ಎಂದು ಅಲ್ಲಿ ಸೇರಿದ್ದ ರೈತರು ಆಡಿಕೊಳ್ಳುತ್ತಿದ್ದರು. ಕರಿ ಹರಿಯುವ ಸಂದರ್ಭದಲ್ಲಿ ಸ್ವಲ್ಪ ವೇಳೆ ಜಿಟಿ ಜಿಟಿ ಮಳೆ ಸುರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.