ADVERTISEMENT

ಟ್ರ್ಯಾಕ್ಟರ್‌ಗೆ 27 ಟನ್ ಕಬ್ಬು ತುಂಬಿದ ಮಹಿಳೆ!

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 5:15 IST
Last Updated 13 ಫೆಬ್ರುವರಿ 2012, 5:15 IST

ವಿಜಾಪುರ: ಮಹಿಳೆಯೊಬ್ಬಳು ಏಕಾಂಗಿಯಾಗಿ 27 ಟನ್ ಕಬ್ಬನ್ನು ಟ್ರ್ಯಾಕ್ಟರ್‌ನ ಟ್ರೈಲರ್‌ಗಳಿಗೆ ತುಂಬುವ ಮೂಲಕ ಸಾಧನೆ ಮಾಡಿದ ಘಟನೆ ಬಸವನ ಬಾಗೇವಾಡಿ ತಾಲ್ಲೂಕು ಹಳ್ಳದ ಗೆಣ್ಣೂರಲ್ಲಿ ನಡೆದಿದೆ.

ಈ ಸಾಧಕಿಯ ಹೆಸರು ಅನ್ನಪೂರ್ಣ ಮೋತಿರಾಮ ಚವ್ಹಾಣ (32). ವಿಜಾಪುರ ತಾಲ್ಲೂಕು ಮಿಂಚನಾಳ ತಾಂಡಾದ ಈಕೆ ಸುಮಾರು 10 ವರ್ಷಗಳಿಂದ ಕಬ್ಬು ಕಟಾವು ಮಾಡುವ ಕೆಲಸ ಮಾಡುತ್ತಿದ್ದಾಳೆ.

ಹಳ್ಳದ ಗೆಣ್ಣೂರ ಗ್ರಾಮದ ನಿಂಗಪ್ಪ ಬೀರಪ್ಪ ಹರನಾಳ ಅವರ ತೋಟದಲ್ಲಿ ಈ ಮಹಿಳೆ ಶುಕ್ರವಾರ ಈ ಸಾಧನೆ ಮಾಡಿದ್ದಾಳೆ.

ಕಬ್ಬು ಕಟಾವು ಕೆಲಸ ಮಾಡುವ ಹತ್ತು ಜನರ ಈ ತಂಡದಲ್ಲಿ ಅನ್ನಪೂರ್ಣ ಸಹ ಒಬ್ಬ ಸದಸ್ಯೆ. ಏಳು ಜನ ಕಬ್ಬು ಕಟಾವು ಮಾಡಿದರೆ, ಈಕೆ ಏಕಾಂಗಿಯಾಗಿ ಆ ಎಲ್ಲ ಕಬ್ಬನ್ನು ಟ್ರ್ಯಾಕ್ಟರ್‌ನ ಎರಡು ಟ್ರೈಲರ್‌ಗಳಿಗೆ ತುಂಬಿದಳು.

ಟ್ರ್ಯಾಕ್ಟರ್ ಟ್ರೈಲರ್‌ಗಳಲ್ಲಿ ಇಬ್ಬರು ಪುರುಷರು ನಿಂತು ಕಬ್ಬನ್ನು ಹೊಂದಿಸಿಕೊಂಡರು ಎಂದು ತಿಳಿಸಲಾಗಿದೆ.
ಗ್ರಾಮಸ್ಥರು ಈ ಸಾಧಕಿಯನ್ನು ಸನ್ಮಾನಿಸಿ, ಮೆರವಣಿಗೆ ನಡೆಸಿದರು.

ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಸಿಬ್ಬಂದಿ ಎಲ್.ಬಿ. ದೇಸಾಯಿ, ರೈತರಾದ ಹಣಮಂತ ಬಸಪ್ಪ ಗಣಿ, ರಶೀದ್ ಹವಾಲ್ದಾರ, ಗೂಳಪ್ಪ ಪೂಜೇರಿ, ಹಣಮಂತ ರಾಮಣ್ಣ ಬೆಳ್ಳುಬ್ಬಿ, ರಮೇಶ ಮಲ್ಲಪ್ಪ ಸಂಗಳದ, ವಿಠಲ ಶಿವಪ್ಪ ಬೆಳ್ಳುಬ್ಬಿ, ಶೇಖಪ್ಪ ಗಣಿ, ಅಶೋಕ ಮನಗೂಳಿ, ಇಸ್ಮಾಯಿಲ್ ಅಂಗಡಿ, ನಿಂಗಪ್ಪ ಬೀರಪ್ಪ ಹರನಾಳ, ಶಿವನಿಂಗಪ್ಪ ಸಂಗಪ್ಪ ಗಣಿ, ಪರಸಪ್ಪ ಕೆಳಗಿನಮನಿ ಈ ಸಂದರ್ಭದಲ್ಲಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.