ADVERTISEMENT

ತಾಳಿಕೋಟೆ: ತಂಪೆರೆದ ಆರಿದ್ರಾ ಮಳೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 4:41 IST
Last Updated 24 ಜೂನ್ 2013, 4:41 IST

ತಾಳಿಕೋಟೆ: ರೋಹಿಣಿ ಮಳೆಯ ಅಬ್ಬರದ ನಂತರ ಮೃಗಶಿರಾ ಸದ್ದು ಮಾಡದೇ ಹೋಗಿದ್ದರಿಂದ ಬಾಡಿ ಹೋಗಿದ್ದ ರೈತರ ಮುಖಗಳಲ್ಲಿ ಶನಿವಾರ ಆರಂಭಗೊಂಡಿರುವ ಆರಿದ್ರಾ ಮಳೆ ಮತ್ತೆ ಸಂತಸ ಅರಳುವಂತೆ ಮಾಡಿತು.

ಕಳೆದೆರಡು ವರ್ಷಗಳಿಂದ ಬರಗಾಲದ ಬೇಗೆಯಲ್ಲಿ ಬಳಲಿರುವ ಪಟ್ಟಣ ಹಾಗೂ ಸುತ್ತಲಿನ ರೈತರು ಈ ಬಾರಿ ಉತ್ತಮ ಮುಂಗಾರಿನ ಕನಸಿನೊಂದಿಗೆ ಭೂಮಿ ಹದ ಮಾಡಿಟ್ಟುಕೊಂಡಿದ್ದರು. ರೈತರ ನಿರೀಕ್ಷೆ ಹುಸಿ ಮಾಡದ ರೋಹಿಣಿ ಮಳೆ ಸುರಿದ ಅಬ್ಬರಕ್ಕೆ ಹಸಿದು ನೀರಡಿಸಿ ಕುಳಿತಂತಿದ್ದ ಭೂತಾಯಿಯ ಬೇಗೆ ತೀರಿ ಒಡಲು ಬಿರಿದು ಒಡ್ಡು-ವಾರಿಗಳು ಒಡೆದು ಹೋಗಿದ್ದವು.

ಉತ್ತಮ ಮಳೆಯಾಯಿತು ಎಂದು ಬಿತ್ತನೆಗೆ ಬೀಜ- ಗೊಬ್ಬರಗಳನ್ನು ಹೊಂದಿಸಿಕೊಂಡು ಕುಳಿತ ರೈತರಿಗೆ ಮೃಗಶಿರಾ ಆಸರೆಯಾಗಲಿಲ್ಲ. ಬೀಸುವ ಜೋರಾದ ಗಾಳಿಗೆ ತುಂಬಿಕೊಂಡು ಬಂದ ದಟ್ಟನೆಯ ಮೋಡಗಳೆಲ್ಲ ಹಿಂಜಿದ ಅರಳೆಯಂತೆ ಓಡುವುದನ್ನು ನೋಡಿ ನಿಟ್ಟುಸಿರು ಬಿಡುತ್ತ ಕುಳಿತುಕೊಳ್ಳುವುದು ರೈತರ ಕಾಯಕವಾಗಿತ್ತು.

ಮೂಕಿಹಾಳ, ಶಿವಪುರ, ದೇವರಹುಗಬಾಳ, ಕೊಡಗಾನೂರ ಮತ್ತಿತರ ಗ್ರಾಮಗಳ ರೈತರು ಧೈರ್ಯ ಮಾಡಿ ತೊಗರಿ ಬಿತ್ತನೆ ಆರಂಭಿಸಿದರು. ಆದರೆ ಹೆಚ್ಚಿನೆಡೆ ಬಿತ್ತನೆ ಆರಂಭವಾಗಲೇ ಇಲ್ಲ. ಮತ್ತೆ ಕಳೆದ ವರ್ಷದ ಸ್ಥಿತಿ ಮರುಕಳಿಸಬಹುದೇ ಎಂಬ ಆತಂಕದಲ್ಲಿ ರೈತರಿದ್ದರು. ಆದರೆ, ಇಂದು ಸುರಿದ ಆರಿದ್ರಾ ವರ್ಷದ ದಾರಿದ್ರ್ಯ ಕಳೆಯುವ ಆಸೆ ಮೂಡಿಸಿದ್ದಾಳೆ.

`ಇಷ್ಟ ದಿನಾ ಮಳಿಯಿಲ್ಲದ ತಂದ, ಬೀಜಾ, ಗೊಬ್ಬರಾ ಎಲ್ಲಿ ಹಾಳಾಗತ್ತ ಅಂತ ಚಿಂತಿ ಮಾಡಿದ್ದಿವ್ರಿ. ಇವತ್ತ, ಇಲ್ಲೆಲ್ಲಾ ಬಿತ್ತುವಂಗ ಮಳಿಯಾಗೈತ್ರಿ, ಆದ್ರ ಇನ್ನಾ ಮಳಿ ಬೇಕರಿ' ಎಂದು ಗುಂಡಕನಾಳದ ರೈತ ಯಂಕನಗೌಡ ಬಿರಾದಾರ ಮಳೆ ಇನ್ನೂ ಅಗತ್ಯವಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.