ADVERTISEMENT

ದೃಷ್ಟಿ ಹಾನಿ ಆರೋಪ: ನ್ಯಾಯಕ್ಕಾಗಿ ಮೊರೆ

ಜಿಲ್ಲಾ ಸರ್ಜನ್‌ರಿಂದ ತನಿಖಾ ವರದಿ ಬಂದ ನಂತರ ಕ್ರಮ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 6:33 IST
Last Updated 8 ಡಿಸೆಂಬರ್ 2012, 6:33 IST

ವಿಜಾಪುರ/ಮುದ್ದೇಬಿಹಾಳ: ಮುದ್ದೇಬಿಹಾಳದ ಲಯನ್ಸ್ ಕ್ಲಬ್ ಸಂಘಟಿಸಿದ್ದ ಶಿಬಿರದಲ್ಲಿ ನೇತ್ರ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ 23 ಜನರ ಪೈಕಿ ಒಂಬತ್ತು ಜನರ ಕಣ್ಣಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ಇವರಲ್ಲಿ ಬಹುತೇಕ ಜನರಿಗೆ ದೃಷ್ಟಿ ಹೋಗಿದ್ದು, ತಮಗೆ ನ್ಯಾಯ ಕೊಡಿಸುವಂತೆ ಅವರು ಜಿಲ್ಲಾ ಆಡಳಿತದ ಮೊರೆ ಹೋಗಿದ್ದಾರೆ.

ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಎರಡು ದಿನ ಮುದ್ದೇಬಿಹಾಳದಲ್ಲಿ ಪ್ರತಿಭಟನೆ ನಡೆಸಿದ ಈ ರೋಗಿಗಳು, ಶುಕ್ರವಾರ ವಿಜಾಪುರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು. ಮುದ್ದೇಬಿಹಾಳದ ಲಯನ್ಸ್ ಕ್ಲಬ್, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಹಾಗೂ ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕದ ಸಹಯೋಗದಲ್ಲಿ ಈ ಶಿಬಿರವನ್ನು ಏರ್ಪಡಿಸಲಾಗಿತ್ತು.

`ಕಳೆದ ಅಕ್ಟೋಬರ್ 19ರಂದು ಮುದ್ದೇಬಿಹಾಳದಲ್ಲಿ ಕೇವಲ ಔಪಚಾರಿಕ ಉದ್ಘಾಟನಾ ಸಮಾರಂಭ ನೆರವೇರಿಸಿ ರೋಗಿಗಳನ್ನು ವಿಜಾಪುರ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಅಕ್ಟೋಬರ್ 20ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಈ ರೋಗಿಗಳಿಗೆ ಹೊಲಿಗೆ ರಹಿತ ಶಸ್ತ್ರಚಿಕಿತ್ಸೆ ಮಾಡದೆ ಹೊಲಿಗೆ ಸಹಿತ ಶಸ್ತ್ರಚಿಕಿತ್ಸೆ ಮಾಡಲಾಗಿದೆ' ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ವಿವೇಕಾನಂದ ಯುವ ವೇದಿಕೆ ಮತ್ತಿತರ ಸಂಘಟನೆಗಳ ಮುಖಂಡರಾದ ಅರವಿಂದ ಕೊಪ್ಪ. ಎಚ್.ಬಿ. ಸಾಲಿಮನಿ ಆರೋಪಿಸಿದರು.

`ಶಸ್ತ್ರಚಿಕಿತ್ಸೆ ನಂತರ ರೋಗಿಗಳು ಹಲವು ತೊಂದರೆ ಅನುಭವಿಸುತ್ತಿದ್ದಾರೆ. ಒಬ್ಬ ರೋಗಿ ಐರಿಸ್ ಪ್ರೋಲ್ಯಾಪ್ಸ್‌ನಿಂದ ಖಾಸಗಿ ಆಸ್ಪತ್ರೆಯಲ್ಲಿ ಮರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇನ್ನೊಬ್ಬರಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದರೂ ಲೆನ್ಸ್ ಅಳವಡಿಸಿಲ್ಲ. ಮತ್ತೊಬ್ಬರಿಗೆ ದೃಷ್ಟಿ ಹಾನಿ ಆಗಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢ ಪಟ್ಟಿದೆ' ಎಂದರು.

`ಕಳೆದ 5ರಂದು ಮರು ಪರೀಕ್ಷೆಗೆ ಮುದ್ದೇಬಿಹಾಳಕ್ಕೆ ಬಂದಿದ್ದ ರೋಗಿಗಳಲ್ಲಿ ಆರಕ್ಕೂ ಹೆಚ್ಚು ಜನರಿಗೆ ಕಣ್ಣು ಕಾಣದಿರುವುದು ಬೆಳಕಿಗೆ ಬಂದಿದೆ. ಅಂದು ಮರುಪರೀಕ್ಷೆ ನಡೆಸಬೇಕಿದ್ದ ಡಾ.ಮಾಳೇಜಾನ ಅವರು ಬರದೇ ನೇತ್ರ ಸಹಾಯಕರಿಂದ ತಪಾಸಣೆ ನಡೆಸಿದ್ದರು. ಇದು ವೈದ್ಯ ಕಾನೂನಿಗೆ ವಿರುದ್ಧ. ವಿಜಾಪುರಕ್ಕೆ ಶಸ್ತ್ರಚಿಕಿತ್ಸೆಗೆ ಬಂದಿದ್ದ ರೋಗಿಗಳು ಊಟ- ಪ್ರವಾಸ ವೆಚ್ಚಕ್ಕಾಗಿ ಪರದಾಡಿದ್ದಾರೆ.

ರೋಗಿಗಳಿಗೆ ರೂ 125 ನೆರವು ನೀಡುವ ಬದಲು ಕನ್ನಡಕಕ್ಕಾಗಿ ಅವರಿಂದಲೇ 50 ರೂಪಾಯಿಯನ್ನು  ಒತ್ತಾಯ ಪೂರ್ವಕವಾಗಿ ಪಡೆಯಲಾಗಿದೆ. ಗುಣಮಟ್ಟದ ಔಷಧಿ ಕೊಡುವ ಬದಲು ಸ್ಯಾಂಪಲ್‌ಗಾಗಿ ನೀಡಿದ್ದ ಔಷಧಿ ಕೊಟ್ಟಿದ್ದಾರೆ. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಮತ್ತು ಆ ನಂತರ ಆರೈಕೆಯ ಮೇಲ್ವಿಚಾರಣೆ ನಡೆಸಬೇಕಿದ್ದ ಮುದ್ದೇಬಿಹಾಳ ಲಯನ್ಸ್ ಕ್ಲಬ್‌ನವರು ಅತ್ತ ಸುಳಿದಿಲ್ಲ' ಎಂದು ಅವರು ಆಪಾದಿಸಿದರು.

`ಈ ರೋಗಿಗಳಿಗೆ ತಕ್ಷಣ ತಲಾ ರೂ 20 ಸಾವಿರ ಪರಿಹಾರ ನೀಡಬೇಕು. ಮುದ್ದೇಬಿಹಾಳ ಲಯನ್ಸ್ ಕ್ಲಬ್ ಅನ್ನು ಕಪ್ಪು ಪಟ್ಟಿಗೆ ಸೇರಿಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದವೆು ದಾಖಲಿಸಬೇಕು' ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಸ್.ಬಿ. ಬೂದಿಹಾಳ, ಅಮೀರ್ ನಂದವಾಡಗಿ, ಸಿದ್ಧಣ್ಣ ಹಡಲಗೇರಿ, ಬಸವರಾಜ ಬಿದರಕುಂದಿ, ದಲಿತ ಸಂಘಟನೆಗಳ ಮುಖಂಡರಾದ ನಾಗರಾಜ ಲಂಬೂ, ಅಡಿವೆಪ್ಪ ಸಾಲಗಲ್ ಒತ್ತಾಯಿಸಿದರು.

ಸ್ಪಷ್ಟನೆ: `ನಾವು 30 ವರ್ಷಗಳಿಂದ ಶಿಬಿರ ಸಂಘಟಿಸುತ್ತಿದ್ದೇವೆ. ರೋಗಿಗಳಲ್ಲಿ ಜಾಗೃತಿ ಮೂಡಿಸಿ ಅವರನ್ನು ಶಸ್ತ್ರ ಚಿಕಿತ್ಸೆಗೆ ಕರೆತರುವುದು ಮಾತ್ರ ನಮ್ಮ ಕೆಲಸ. ಶಸ್ತ್ರಚಿಕಿತ್ಸೆ ನಡೆಸುವವರು ಜಿಲ್ಲಾ ಆಸ್ಪತ್ರೆ ಮತ್ತು ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯವರು. ಅವಘಡ ಸಂಭವಿಸಿದ್ದರೆ ಅದಕ್ಕೆ ಅವರೇ ಹೊಣೆ' ಎಂದು ಮುದ್ದೇಬಿಹಾಳ ಲಯನ್ಸ್ ಕ್ಲಬ್ ಆರೋಗ್ಯ ಸಮಿತಿಯ ಅಧ್ಯಕ್ಷ ಡಾ.ಡಿ.ಬಿ. ಓಸ್ವಾಲ್ ಪ್ರತಿಕ್ರಿಯಿಸಿದರು.

ಡಿಸಿ ಭರವಸೆ: `ನೇತ್ರ ಶಸ್ತ್ರಚಿಕಿತ್ಸೆಯಲ್ಲಿ ವೈದ್ಯರು ನಿರ್ಲಕ್ಷ್ಯವೆಸಗಿದ್ದಾರೆ ಎಂಬ ಆರೋಪದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಸರ್ಜನ್‌ಗೆ ಆದೇಶ ನೀಡಿದ್ದೇನೆ. ವರದಿ ಬಂದ ನಂತರ ತಪ್ಪಿಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಸಾಮಾಜಿಕ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸದ ಮುದ್ದೇಬಿಹಾಳ ಲಯನ್ಸ್ ಕ್ಲಬ್‌ಗೆ ನೋಟಿಸ್ ಜಾರಿ ಮಾಡಲಾಗುವುದು' ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಹೇಳಿದರು.

ಹುಬ್ಬಳ್ಳಿಯಲ್ಲಿ ಶಸ್ತ್ರಚಿಕಿತ್ಸೆ: `ಹುಬ್ಬಳ್ಳಿಯ ಡಾ.ಎಂ.ಎಂ. ಜೋಶಿ ಆಸ್ಪತ್ರೆಯನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದು, ಚಿಕಿತ್ಸೆ ನೀಡಲು ಅವರು ಮುಂದೆ ಬಂದಿದ್ದಾರೆ. ಎಲ್ಲ ಸಂಘಟನೆಯವರು ಸೇರಿ ಈ ರೋಗಿಗಳನ್ನು ಅಲ್ಲಿಗೆ ಕರೆದೊಯ್ಯುತ್ತೇವೆ' ಎಂದು ಅರವಿಂದ ಕೊಪ್ಪ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.