ADVERTISEMENT

‘ದೇವೇಗೌಡರ ಪರಿಶ್ರಮದಿಂದ ನಮಗೆ ನೀರಾವರಿ’

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 9:43 IST
Last Updated 24 ಅಕ್ಟೋಬರ್ 2017, 9:43 IST
ಇಂಡಿ ತಾಲ್ಲೂಕಿನ ನಾದ (ಕೆಡಿ) ಗ್ರಾಮದಲ್ಲಿ ನಡೆದ ಪಕ್ಷ ಸೇರ್ಪಡೆ, ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶಂಪೂರ ಮಾತನಾಡಿದರು
ಇಂಡಿ ತಾಲ್ಲೂಕಿನ ನಾದ (ಕೆಡಿ) ಗ್ರಾಮದಲ್ಲಿ ನಡೆದ ಪಕ್ಷ ಸೇರ್ಪಡೆ, ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶಂಪೂರ ಮಾತನಾಡಿದರು   

ಇಂಡಿ: ಉತ್ತರ ಕರ್ನಾಟಕ ಭಾಗಕ್ಕೆ ಅಲ್ಪಸ್ವಲ್ಪ ನೀರಾವರಿಯಾಗಿದೆ ಅಂದರೇ ಮಾಜಿ ಪ್ರಧಾನಿ ದೇವೆಗೌಡರು ಕಾರಣ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪೂರ ಹೇಳಿದರು. ತಾಲ್ಲೂಕಿನ ನಾದ (ಕೆಡಿ) ಗ್ರಾಮದಲ್ಲಿ ತಾಲ್ಲೂಕು ಪ್ರದೇಶ ಜನತಾದಳ ವತಿಯಿಂದ ನಡೆದ ಪಕ್ಷಕ್ಕೆ ಸೇರ್ಪಡೆ, ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಅವರ ಪರಿಶ್ರಮದಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಕಂಡಿದ್ದೇವೆ. ಅವರು ಮನಸ್ಸು ಮಾಡದಿದ್ದರೆ 2000ರಲ್ಲಿಯೇ ನಾವು ನೀರಾವರಿ ಹಕ್ಕನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿತ್ತು’ ಎಂದರು.

ಬಿಜೆಪಿ ಆಡಳಿತದಲ್ಲಿ ಬರೀ ಒಳಜಗಳವೇ ಕಂಡಿದ್ದೇವೆ. ಮುಖ್ಯ ಮಂತ್ರಿಗಳೇ ಸೆರೆಮನೆವಾಸ ಕಂಡರು. ಇದರಿಂದ ಐದು ವರ್ಷದಲ್ಲಿ ಮೂರು ಮುಖ್ಯ ಮಂತ್ರಿಗಳನ್ನು ಕಾಣುವಂತಾಯಿತು. ಪ್ರಸಕ್ತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ತಂದಿರುವ ಅಕ್ಕಿ ಭಾಗ್ಯಕ್ಕಾಗಿ ಜನಸಾಮಾನ್ಯರು ಎರಡು ದಿನ ಕೂಲಿ ಕಳೆದುಕೊಂಡು ಮೂರು ಕಿಲೋ ಅಕ್ಕಿ ಸಂಪಾದಿಸುವಂತಾಗಿದೆ ಎಂದು ಕಿಡಿಕಾರಿದರು.

ಟಿಪ್ಪು ಸುಲ್ತಾನರ ಜಯಂತ್ಯೋತ್ಸವ ಮೊದಲು ದೇವೇಗೌಡರು ಪ್ರಾರಂಭಿಸಿದ್ದಾರೆ. ಇದೀಗ ಕಾಂಗ್ರೆಸ್ ಸರ್ಕಾರ ಪ್ರಾರಂಭಿಸಿದೆ. ಅದಕ್ಕೆ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಟೀಕಿಸುತ್ತಿದ್ದಾರೆ. ಅವರು ಕೆಜೆಪಿ ಕಟ್ಟಿದಾಗ ತಲೆಯ ಮೇಲೆ ಟೋಪಿ ಹಾಕಿಕೊಂಡು ಅದೇ ಟಿಪ್ಪು ಸುಲ್ತಾನರ ಜಯಂತ್ಯೋತ್ಸವ ಆಚರಿಸಿರುವದನ್ನು ಮರೆತು ಬಿಟ್ಟಿದ್ದಾರೆ ಎಂದು ಲೇವಡಿ ಮಾಡಿದರು.

ADVERTISEMENT

ಕಾಂಗ್ರೆಸ್ ಸರ್ಕಾರ ಉದ್ರಿ ಸರ್ಕಾರವಾಗಿದೆ. ರೈತರ ₨ 50000 ಸಾಲ ಮನ್ನಾ ಮಾಡಿ ನಾಲ್ಕು ತಿಂಗಳು ಕಳೆದರೂ ಈವರೆಗೆ ಹಣ ರೈತರ ಖಾತೆಗಳಿಗೆ ಜಮಾ ಮಾಡಿಲ್ಲ. ಜೆಡಿಎಸ್ ಸರ್ಕಾರ ಸಾಲ ಮನ್ನಾ ಮಾಡಿದ ಒಂದು ವಾರದಲ್ಲಿಯೇ ಹಣ ಪಾವತಿ ಮಾಡಲಾಗಿತ್ತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭೂರಪೂರ್ವ ಗೆಲುವು ಸಾಧಿಸಿ, ಆಡಳಿತ ಚುಕ್ಕಾಣೆ ಹಿಡಿದ 24 ಗಂಟೆಯೊಳಗಾಗಿ ರೈತರ ಕೃಷಿಸಾಲ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಉಪಾಧ್ಯಕ್ಷ ನಾನಾಗೌಡ ಬಿರಾದಾರ, ಜಿಲ್ಲಾ ಪಂಚಾಯ್ತಿ ಸದಸ್ಯ ರಾಮು ರಾಠೋಡ, ಮುಖಂಡ ಎಂ.ಆರ್.ಪಾಟೀಲ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಡಿ.ಪಾಟೀಲ, ಸಿದ್ದು ಕಮತೆ, ಎಲ್.ಎಲ್.ಉಸ್ತಾದ, ರೇಷ್ಮಾ ಪಡೆಕನೂರ, ಬಿಲಾವರ ಖಾಜಿ, ರೀಯಾಜ್ ಫಾರೂಕಿ, ಅರವಿಂದಗೌಡ ಬಿರಾದಾರ, ಶ್ರೀಶೈಲಗೌಡ ಪಾಟೀಲ, ಕವಿತಾ ರಾಠೋಡ, ಬಸನಗೌಡ ವಣಕ್ಯಾಳ, ನಾನಾಗೌಡ ಪಾಟೀಲ, ಸಿದ್ದು ಡಂಗಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.