ADVERTISEMENT

ನಮಗ ವಯಸ್ಸಾಗ್ಯಾವ್ರೀ... ಪಗಾರ ಕೊಡಸ್ರಿ...!

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 4:30 IST
Last Updated 6 ಫೆಬ್ರುವರಿ 2012, 4:30 IST

ಆಲಮಟ್ಟಿ: “ನನಗ ವಯಸ್ಸ ಎಪ್ಪತ್ತೈದ ಆಗ್ಯಾವ್ರೀ, ನಂದ ಪಗಾರ ಬಂದ್ ಮಾಡ್ಯಾರ‌್ರೀ.. ನನ್ಗತೇ ನಮ್ಮೂರಾಗ 8-10 ಮಂದೀವೂ ಪಗಾರ ನಿಂದ್ರ್ಯಾಸಿರಿ. ನಾವು ಹೊಲಕ ಹೋಗಿ ಮನೀಗ ಬಂದ ಜೀವನಾ ಮಾಡಾವ್ರೀ... ನಾವು ಊರಾಗಿಲ್ದಾಗ ಯಾರ ಆಫೀಸರ್ ಅಂತ ಬಂದ ಸರ್ವೆ ಮಾಡಿ ನಮ್ಮ ಪಗಾರ ಬಂದ್ ಮಾಡ್ಯಾರಿಯಪಾ..!

ಇದು ನಿಡಗುಂದಿಯ ವಿಶೇಷ ತಹಶೀಲ್ದಾರ ಮುಂದೆ ತಮ್ಮ ಗೋಳನ್ನು ಸಮೀಪದ ಕುರಬರದಿನ್ನಿ ವಯೋವೃದ್ಧರು ತೋಡಿಕೊಂಡ ಅಳಲು.

ಅದ್ಕ ಸಾಹೇಬರ ಮುಂದ ನಮ್ಮ ಗೋಳ ಹೇಳಕೊಂಡ ನಮ್ಮ ಅನ್ನಕ್ಕೀಟ ದಾರಿ ಮಾಡಿಕೊಡ್ರಿ ಅಂತಾ ಕೇಳಕಾ ಬಂದಿದ್ದೀವ್ರಿಯಪಾ! ನಮ್ಗೂ ವಯಸ್ಸಾದ ಪಗಾರ ಚಾಲು ಆಗಿ ಎರಡು ವರ್ಷ ಆಗೀತ್ರೀ..., ಇಲ್ಲಿತನ ಬಂದ್ ಆಗೀದ್ದೀಲ್ರಿ, ಈ ಸರಕಾರದೋರು ಬಡವ್ರೀಗೆ ಅದನ್ನ ಮಾಡತೀನಿ, ಇದನ್ನ ಮಾಡತೀನಂತ್ಹೇಳಿ ಕುತ್ಗಿಗೆ ಹಗ್ಗ ಹಾಕ್ಯಾರ‌್ರೀಯಪ್ಪಾ, ನೀವ ಅವರ ಒಂದೀಟ ಸಾಯಿಬ್ರಿಗೆ ಹೇಳಿ ನಮ್ಮ ಪಗಾರ ಚಾಲು ಮಾಡಿಸ್ರಿ, ಮುಂದ ನಿಮ್ಮ ಮಕ್ಕಳ ಮರೀಗಿ ಪುಣ್ಯ ಬರ‌್ತದಯಪ್ಪಾ....!~ ಎಂದು ತಮ್ಮ ಸಮಸ್ಯೆಯನ್ನು ವಿವರಿಸಿದರು.

ಶಾಂತವ್ವ ಅರಷಣಗಿ, ನಾಗವ್ವ ಬಿರಾದಾರ ಸೇರಿದಂತೆ ಹತ್ತಕ್ಕೂ ಹೆಚ್ಚು ವಯೋವೃದ್ಧರು ಪಗಾರ ಕೊಡಿ ಎಂದು ಎಂದು ಅಧಿಕಾರಿಗಳಿಗೆ ಬೇಡಿಕೊಂಡರು.

ಸರಕಾರದ ವಿವಿಧ ಯೋಜನೆಗಳಾದ ಸಂಧ್ಯಾ ಸುರಕ್ಷಾ, ಅನಾಥ, ವಿಧವಾ, ಅಂಗವಿಕಲ ಯೋಜನೆಗಳಡಿ ಲಕ್ಷಾಂತರ ಬಡವರಿಗೆ ಆಧಾರವಾಗಲೆಂದು ಮಾಸಾಶನದ ಮೊತ್ತವನ್ನು ರೂ 400ಗೆ ಹೆಚ್ಚಿಸಿತು. ನಂತರ ಆರ್ಥಿಕ ಹೊರೆ ಗಮನಿಸಿ ನಕಲಿ ಫಲಾನುಭವಿಗಳನ್ನು ಗುರುತಿಸುವ ದೃಷ್ಟಿಯಿಂದ ನೈಜ ಫಲಾನುಭವಿಗಳ ಗುರುತಿಸುವ ಕುರಿತು ಸಮೀಕ್ಷೆ ಕಾರ್ಯ ಆರಂಭಿಸಿತು.

ಅಧಿಕಾರಿಗಳ ನಿರ್ಲಕ್ಷತನದಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗ್ದ್ದಿದು, ಅನರ್ಹ ಫಲಾನುಭವಿಗಳು ಯೋಜನೆಯ ಲಾಭ ಪಡೆಯುವಂತಾಗಿದೆ ಎಂದು ಆರೋಪಿಸಿದರು.

ಕೆಲವು ಅಧಿಕಾರಿಗಳು ಹಣ ಪಡೆದು ಖೊಟ್ಟಿ ಫಲಾನುಭವಿಗಳಿಗೆ ಪಿಂಚಣಿ ದೊರೆಯುವಂತೆ ಮಾಡಿ ನೈಜ ಫಲಾನುಭವಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂಬ ಆರೋಪಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ದುರಂತವೆಂದರೇ ಅರಳದಿನ್ನಿ ಗ್ರಾಮದ 80 ವರ್ಷದ ಪಾರ್ವತೆವ್ವ ಸಿಂಧೆಯಂತಹವರಿಗೆ ಇನ್ನೂ ಪಿಂಚಣಿ ಆದೇಶವಾದರೂ ಇಲ್ಲಿಯವರೆಗೆ ಪಿಂಚಣಿಯೂ ಬಂದಿಲ್ಲ ಎಂದು ಗ್ರಾಮಸ್ಥರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.