ಆಲಮಟ್ಟಿ: ರ್ಯಾಗಿಂಗ್ ಎಂಬ ಪೆಂಡಭೂತ ಗ್ರಾಮೀಣ ಪ್ರದೇಶಕ್ಕೂ ಹಬ್ಬಿದ್ದು, ಶಿಸ್ತಿಗೆ ಹೆಸರಾದ ಕೇಂದ್ರ ಸರಕಾರದ ಜವಾಹರ ನವೋದಯ ವಿದ್ಯಾಲಯದ ವಸತಿ ಶಾಲೆಯಲ್ಲಿ ಭಾನುವಾರ ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ ನಡೆಸಿದ್ದಾರೆ. ರ್ಯಾಗಿಂಗ್‌ನಿಂದಾಗಿ ವಿದ್ಯಾಲಯದ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಆತಂಕಕ್ಕೆ ಒಳಗಾಗಿದ್ದಾರೆ.
ವಿದ್ಯಾಲಯದ 10ನೇ ತರಗತಿಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳ ಗುಂಪೊಂದು, 8ನೇ ತರಗತಿಯ 12 ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನ ಕೋಣೆಯಲ್ಲಿ ಕೂಡಿ ಹಾಕಿ ಕಬ್ಬಿಣದ ರಾಡ್, ಬಡಿಗೆ, ಕೈಯಿಂದ ಹೊಡೆದು ಗಾಯ ಮಾಡಿದ್ದಾರೆ. ಶನಿವಾರ ಹಾಗೂ ಭಾನುವಾರ ರಾತ್ರಿಯಿಡಿ ಕೋಣೆಯಲ್ಲಿ ಕೂಡಿ ಹಾಕಿ, ನಂತರ ಪ್ರತಿಯೊಬ್ಬರನ್ನೂ ಬಕೆಟ್ ಮೇಲೆ ಕೂಡಿಸಿ ಹೊಡೆದಿದ್ದಾರೆ ಎಂದು ವಿದ್ಯಾರ್ಥಿಗಳು ಆಪಾದಿಸಿದ್ದಾರೆ.
ಹಲ್ಲೆಗೆ ಕಿರಿಯ ವಿದ್ಯಾರ್ಥಿಗಳು ಗಾಯಗೊಂಡಿದ್ದರೂ ಹೌಸ್ ಮಾಸ್ಟರ್‌ಗೆ ಮಾಹಿತಿ ತಲುಪಿಲ್ಲ. ಈ ಬಗ್ಗೆ ವಿಚಾರಣೆಯನ್ನೂ ಮಾಡಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ವಿದ್ಯಾರ್ಥಿಗಳಾದ ರೋಹಿತ್ ಅಂಕದ, ಸಾಗರ ಉಪ್ಪಾರ, ಪೃಥ್ವಿರಾಜ ಶಿಂಧೆ, ಪವನಕುಮಾರ ನಾಯ್ಕೋಡಿ, ಅಭಿಜಿತ್ ದೊಡಮನಿ, ವೀರೇಶ ಕಡಿ, ಸಚಿನ ಇಂಗಳೆ, ಬಸವರಾಜ ಸೊನ್ನದ, ಸಚಿನ ಹುಲ್ಲೂರ, ಶಿವಾನಂದ ಐನಾಪೂರ ಮತ್ತಿತರ 8ನೇ ತರಗತಿಯ ವಿದ್ಯಾರ್ಥಿಗಳು ಹಲ್ಲೆಗೆ ಒಳಗಾಗಿದ್ದು, ನೋವಿನಿಂದ ಬಳಲುತ್ತಿದ್ದಾರೆ.
‘ಎರಡು ದಿನ ನಮಗೆ ಹೊಡೆದಿದ್ದಾರೆ, ಯಾವುದೋ ಹಿಂದಿನ ದ್ವೇಷಕ್ಕೆ ರ್ಯಾಗಿಂಗ್ ನಡೆದಿದೆ. ಸರದಿ ಪ್ರಕಾರ ನಮ್ಮನ್ನು ರ್ಯಾಗಿಂಗ್ ಮಾಡುವುದು ಅವರ ಉದ್ದೇಶವಾಗಿತ್ತು, ಮಾನಸಿಕ, ದೈಹಿಕವಾಗಿ ಹಿಂಸಿಸಿದ್ದಲ್ಲದೆ ಶಿಕ್ಷಕರಿಗೆ ಹೇಳಿದರೇ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ’ ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡರು.
ವಿದ್ಯಾಲಯದಲ್ಲಿ ನಾಲ್ಕು ವಸತಿ ನಿಲಯಗಳಿವೆ. ಪ್ರತಿ ನಿಲಯಕ್ಕೆ ಇಬ್ಬರಂತೆ 8 ಜನ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ವರ್ಷವೂ ಚಿಕ್ಕ ಪುಟ್ಟ ರ್ಯಾಗಿಂಗ್, ಶಾಲೆಯ ವಸ್ತುಗಳನ್ನು ಒಡೆಯುವ ಘಟನೆಗಳು ಮಾರ್ಚ್ ತಿಂಗಳಲ್ಲಿಯೇ ಜರುಗುತ್ತಿದ್ದರೂ, ಮುಂಜಾಗ್ರತೆ ವಹಿಸಿಲ್ಲ.
ಘಟನೆಯ ನಂತರ ಎಚ್ಚೆತ್ತುಕೊಂಡ ಶಾಲಾ ಆಡಳಿತ ಮಂಡಳಿ, ರ್ಯಾಗಿಂಗ್ ಮಾಡಿದ 10ನೇ ತರಗತಿಯ 20 ವಿದ್ಯಾರ್ಥಿಗಳ ಪಾಲಕರನ್ನು ಕರೆಯಿಸಿ ಅವರಿಂದ ಮುಚ್ಚಳಿಕೆ ಬರೆದುಕೊಂಡು ಅವರನ್ನೆಲ್ಲಾ ಶಾಲೆಯಿಂದ ಹೊರ ಕಳುಹಿಸಿದ್ದಾರೆ ಎನ್ನಲಾಗಿದೆ.10 ನೇ ತರಗತಿ ವಿದ್ಯಾರ್ಥಿಗಳಿಗೆ ಈಗ ಪರೀಕ್ಷಾ ಸಮಯ. ಆದ್ದರಿಂದ ಪರೀಕ್ಷೆಗೆ ಅನುಮತಿ ನೀಡಿದ್ದಾರೆ.
ಘಟನೆಯ ವಿವರ: 10ನೇ ತರಗತಿಯ ಪರೀಕ್ಷೆ ಮುಕ್ತಾಯ ಹಂತದಲ್ಲಿವೆ. ಮುಂದಿನ ವಾರ ಪರೀಕ್ಷೆ ಮುಗಿಸಿ ಹೊರ ಹೋಗುವರು. ಹಳೆಯ ದ್ವೇಷಕ್ಕೆ ಸೇಡು ತೀರಿಸಿಕೊಳ್ಳಲು ಕಿರಿಯ ವಿದ್ಯಾರ್ಥಿಗಳ ಮೇಲೆ ರ್ಯಾಗಿಂಗ್ ನಡೆಸಿದ್ದಾರೆ ಎನ್ನಲಾಗಿದೆ.ಘಟನೆಗೆ ಸಂಬಂಧಿಸಿದಂತೆ ಉಪಪ್ರಾಚಾರ್ಯ ಎಸ್.ಆರ್. ಅಂಗಡಿ ಅವರನ್ನು ಸಂಪರ್ಕಿಸಿದಾಗ, ವಿದ್ಯಾರ್ಥಿಗಳ ನಡುವಿನ ಸಣ್ಣ ಘಟನೆ. ಹಲ್ಲೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಜರುಗಿಸಿದೆ ಎಂದರು.
ವಿದ್ಯಾಲಯದಲ್ಲಿ ಸದ್ಯ ಒಟ್ಟು 480 ವಿದ್ಯಾರ್ಥಿ ಕಲಿಯುತ್ತಿದ್ದಾರೆ. ಘಟನೆಯಿಂದ ಕಿರಿಯ ವಿದ್ಯಾರ್ಥಿಗಳು ಭಯಗೊಂಡಿದ್ದಾರೆ. ಇದು ಮಕ್ಕಳಿಗೆ ಮಾತ್ರವಲ್ಲ ಪಾಲಕರಿಗೂ ಆತಂಕ ಮೂಡಿಸಿದೆ. ನೆಮ್ಮದಿ ಇಲ್ಲದಂತಾಗಿದೆ ಎಂದು ಪಾಲಕರು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.