ADVERTISEMENT

ನಿಷ್ಕಾಳಜಿ ತೋರಿದರೆ ಕ್ರಮ: ಸಿಇಒ

ಕುಡಿಯುವ ನೀರಿನ ಸಮಸ್ಯೆ ಕುರಿತು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 12:02 IST
Last Updated 6 ಏಪ್ರಿಲ್ 2018, 12:02 IST

ಬಸವನ ಬಾಗೇವಾಡಿ: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಹೆಚ್ಚಿನ ಗಮನ ಹರಿಸಬೇಕು. ನಿಷ್ಕಾಳಜಿ ವಹಿಸಿದರೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಸುಂದರೇಶಬಾಬು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಗುರುವಾರ ಕುಡಿಯುವ ನೀರು ಹಾಗೂ ಬರಗಾಲ ನಿರ್ವಹಣೆ ಕುರಿತು ನಡೆದ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಸರಿಯಾಗಿ ಮಾಡಬೇಕು. ಜಿಲ್ಲೆಯಲ್ಲಿ ಈಗಾಗಲೇ ನಿರ್ಮಿಸಿರುವ ಶುದ್ಧ ಕುಡಿಯವ ನೀರಿನ ಘಟಕದ ದುರಸ್ತಿಗಾಗಿ ₹ 25 ಲಕ್ಷ ಹಣವನ್ನು ಕಾಯ್ದಿರಿಸಲಾಗಿದೆ. ಇದೊಂದು ಬಾರಿ ನಾವು ಕೆಟ್ಟು ಹೊಗಿರುವ ಶುದ್ಧ ಕುಡಿಯವ ನೀರಿನ ಘಟಕದ ದುರಸ್ತಿ ಮಾಡಿಸುತ್ತೇವೆ. ಮುಂದೆ ಅದರ ನಿರ್ವಹಣೆಯನ್ನು ಆಯಾ ಗ್ರಾಮ ಪಂಚಾಯ್ತಿಗೆ ಸಂಬಂಧಪಟ್ಟಿದ್ದು ಎಂದು ತಿಳಿಸಿದರು.

ADVERTISEMENT

ಜಿಲ್ಲೆಯ ಬೇರೆ ತಾಲ್ಲೂಕುಗಳಿಗೆ ಹೊಲಿಸಿದರೆ ಬಸವನಬಾಗೇವಾಡಿ ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರು ಮತ್ತು ಮೇವಿನ ಕೊರತೆ ಗಂಭೀರವಾಗಿ ಕಂಡು ಬಂದಿಲ್ಲ. ಆದಾಗ್ಯೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮುಂಜಾಗೃತ ಕ್ರಮ ಕೈಗೊಳ್ಳುವ ಮೂಲಕ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ಪ್ರತಿ ಶುಕ್ರವಾರ ಜಿಲ್ಲಾಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ಸಭೆ ನಡೆಯುತ್ತದೆ. ಗ್ರಾಮಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು ತಕ್ಷಣ ತಮ್ಮ ತಾಲ್ಲೂಕು ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.