ADVERTISEMENT

ನೀರಿಗೆ ಪ್ರತ್ಯೇಕ ವಿದ್ಯುತ್ ಫೀಡರ್

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 11:20 IST
Last Updated 19 ಅಕ್ಟೋಬರ್ 2011, 11:20 IST

ವಿಜಾಪುರ: `ಬರಪೀಡಿತ ಪ್ರದೇಶಗಳ ಜನರ ನೀರಿನ ಬವಣೆ ನೀಗಿಸಲು ಸರ್ಕಾರ ತಕ್ಷಣವೇ ಎಲ್ಲ ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳಿಗೆ ಪ್ರತ್ಯೇಕ ವಿದ್ಯುತ್ ಫೀಡರ್ ಅಳವಡಿಸಬೇಕು~ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದರು.

ತಾಲ್ಲೂಕಿನ ಲೋಹಗಾಂವ, ಇಟ್ಟಂಗಿಹಾಳ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿ ಬರ ಪರಿಸ್ಥಿತಿಯ ಖುದ್ದು ಅಧ್ಯಯನ ನಡೆಸಿದ ನಂತರ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಹಾಹಾಕಾರ ಹೆಚ್ಚಿದೆ. ಕೆಲವೆಡೆ ಜಲ ಮೂಲದ ಸಮಸ್ಯೆಯಾದರೆ, ಬಹುತೇಕ ಕಡೆಗಳಲ್ಲಿ ವಿದ್ಯುತ್ ಕ್ಷಾಮದಿಂದ ನೀರು ದೊರೆಯುತ್ತಿಲ್ಲ. ಯಾವ ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳಿಗೂ ಸರ್ಕಾರ ಪ್ರತ್ಯೇಕ ಫೀಡರ್‌ನಿಂದ ವಿದ್ಯುತ್ ಪೂರೈಸುತ್ತಿಲ್ಲ ಎಂದರು.

ರಾಜ್ಯ ಸರ್ಕಾರ ಬರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕುಡಿಯುವ ನೀರು-ಮೇವು-ಜನರಿಗೆ ಉದ್ಯೋಗ ನೀಡಲು ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಬರ-ನೆರೆ ಕುರಿತು ಹೆಚ್ಚಿನ ಅನುದಾನ ಕೋರಿ ಕೇಂದ್ರ ಸರ್ಕಾರಕ್ಕೆ ಈ ವರೆಗೆ ಮನವಿಯನ್ನೂ ಸಲ್ಲಿಸಿಲ್ಲ. ಕೇಂದ್ರದಿಂದ ಹೆಚ್ಚಿನ ನೆರವು ಪಡೆಯಲಿಕ್ಕೆ ಯಾವುದೇ ಸಿದ್ಧತೆಯನ್ನೂ ಮಾಡಿಕೊಂಡಿಲ್ಲ ಎಂದು ದೂರಿದರು.

ಶಾಸಕರಾದ ಎಸ್.ಆರ್. ಪಾಟೀಲ, ಸಿ.ಎಸ್. ನಾಡಗೌಡ, ಮಾಜಿ ಶಾಸಕರಾದ ರಾಜು ಆಲಗೂರ, ಪ್ರಕಾಶ ರಾಠೋಡ, ಶರಣಪ್ಪ ಸುಣಗಾರ, ಪ್ರಮುಖರಾದ ಯಶವಂತರಾಯಗೌಡ ಪಾಟೀಲ, ಎಸ್.ಎಂ. ಪಾಟೀಲ ಗಣಿಹಾರ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.