ADVERTISEMENT

ನೈತಿಕ ಶಿಕ್ಷಣ ಅಗತ್ಯ: ಸಾರಂಗಮಠ ಶ್ರೀಗಳು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 6:20 IST
Last Updated 20 ಫೆಬ್ರುವರಿ 2012, 6:20 IST

ಸಿಂದಗಿ: `ಇಂದಿನ ಮಕ್ಕಳಿಗೆ ಸಾಮಾನ್ಯ ಶಿಕ್ಷಣದೊಂದಿಗೆ ನೈತಿಕ ಶಿಕ್ಷಣ ಅತ್ಯಗತ್ಯವಾಗಿದೆ~ ಎಂದು ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರು.

ಶನಿವಾರ ಪಟ್ಟಣದ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾಚೇತನ ಪ್ರಕಾಶನ ಏರ್ಪಡಿಸಿದ್ದ ಶೈಕ್ಷಣಿಕ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಕೈಯಲ್ಲಿ ಅಲ್ಲ-ಸಲ್ಲದ್ದನ್ನು ಕೊಡುವುದರ ಬದಲಾಗಿ ಮೌಲ್ಯಾಧಾರಿತ ಪುಸ್ತಕಗಳನ್ನು ನೀಡಿ ಅವರ ಭವಿಷ್ಯ ಉಜ್ವಲಗೊಳಿಸಿ ಎಂದು ಪಾಲಕರಿಗೆ ಕೇಳಿಕೊಂಡರು.

ವಿಜಾಪುರ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜಗದೀಶ ಬಿ. `ಬೋಧನೆ ಮತ್ತು ಕಲಿಕೆಯಲ್ಲಿ ಮನೋವಿಜ್ಞಾನ~ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ, ಶಿಕ್ಷಣವಿಂದು ವ್ಯಾಪಾರೀಕರಣವಾ ಗಿದ್ದು, ಹೀಗಾಗಿ ನೈತಿಕತೆ ಅಧಃ ಪತನಕ್ಕೆ ಇಳಿದಿದೆ ಎಂದು ವಿಷಾದಿಸಿದರು.

ತಾತ್ವಿಕತೆ ಮತ್ತು ಮನೋವೈಜ್ಞಾನಿಕ ತಳಹದಿಗಳು ಶಿಕ್ಷಣದ ತಳಹದಿಗಳಾಗಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಕ್ಕಳ ಸಾಹಿತಿ ಪ.ಗು. ಸಿದ್ದಾಪೂರ ರಚಿಸಿದ `ಮಕ್ಕಳ ನೂರಾರು ಕವನಗಳು~ ಎಂಬ ಕವನ ಸಂಕಲನವನ್ನು ಶ್ರೀಗಳು ಬಿಡುಗಡೆಗೊಳಿಸಿದರು.

ಕವಿ ಡಾ.ಚನ್ನಪ್ಪ ಕಟ್ಟಿ ಮಕ್ಕಳ ನೂರಾರು ಕವನ ಸಂಕಲನದ ಪರಿಚಯ ಮಾಡುತ್ತ ಮಕ್ಕಳ ಸಾಹಿತ್ಯವಿಂದು ಚರ್ಚಿತ ವಿಷಯವಾಗಿದೆ ಎಂದರು.

ಮಕ್ಕಳ ಸಾಹಿತಿಗಳು ಮಕ್ಕಳ ಅಂತರಂಗವನ್ನು ಸೂಕ್ಷ್ಮವಾಗಿ ಗ್ರಹಿಸಬೇಕು ಎಂದು ತಿಳಿಸಿದರು.
ವಿದ್ಯಾಚೇತನ ಪ್ರಕಾಶನದ ಪ್ರಕಾಶಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಹ.ಮ. ಪೂಜಾರ ಮಾತನಾಡಿ, ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮೌಲ್ಯಗಳು ಕಡಿಮೆಯಾಗುತ್ತಲಿವೆ. ಈ ದಿಸೆಯಲ್ಲಿ ಕಳೆದ ಮೂರು ವರ್ಷಗಳಿಂದ ಇಂಥ ಶೈಕ್ಷಣಿಕ ವಿಚಾರ ಸಂಕಿರಣವನ್ನು ಏರ್ಪಡಿಸುವ ಮೂಲಕ ಮಕ್ಕಲಲ್ಲಿ ಜಾಗೃತಿಯನ್ನುಂಟು ಮಾಡುತ್ತಿದೆ ಎಂದರು.
ಮುಂಬರುವ ದಿನಗಳಲ್ಲಿ ಎರಡು ದಿನಗಳ ಬೃಹತ್ ಶೈಕ್ಷಣಿಕ ಸಮ್ಮೇಳನ ನಡೆಸಲಾಗುವುದು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಎಸ್. ಮಠ ಶಿಕ್ಷಕರು ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಬೋಧನೆ ಜೊತೆಗೆ ಸಾಹಿತ್ಯದ ಮೂಲಕ ಮಕ್ಕಳಲ್ಲಿ ನೈತಿಕತೆ ಬೆಳೆಸಬೇಕು ಎಂದು ಸಲಹೆ ನೀಡಿದರು.

ಮಕ್ಕಳ ಸಾಹಿತಿಗಳಾದ ಶರಣಪ್ಪ ಕಂಚ್ಯಾಣಿ, ಸಂಗಮೇಶ ಬಾಗಲಕೋಟೆ, ಚಂದ್ರಶೇಖರ ಹಿರೇಮಠ, ಡಾ.ಎಂ.ಎಂ. ಪಡಶೆಟ್ಟಿ, ಪ್ರೊ.ವಿ.ಡಿ. ವಸ್ತ್ರದ, ಪ್ರೊ.ರವಿ ಗೋಲಾ ಮುಂತಾದವರು ಉಪಸ್ಥಿತರಿದ್ದರು.
ಪುಷ್ಪಾ ಹಿರೇಮಠ ವಚನ ಗೀತೆ ಹಾಡಿದರು. ಪ್ರೊ.ಪಿ.ಎಂ. ಮಡಿವಾಳರ ಸ್ವಾಗತಿಸಿದರು. ಪ್ರೊ.ಸವಿತಾ ಹಾಬಾಳ ನಿರೂಪಿಸಿದರು. ಪ್ರೊ.ಎಸ್.ಎಂ.ಬಶೆಟ್ಟಿ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.