ADVERTISEMENT

ಪಠ್ಯದಲ್ಲಿ ಜನಪದ ಸಾಹಿತ್ಯ ಅಗತ್ಯ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2012, 5:35 IST
Last Updated 13 ನವೆಂಬರ್ 2012, 5:35 IST

ವಿಜಾಪುರ: `ಜಾನಪದ ಕಲೆ ನಮ್ಮ ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ದಿಂದಲೇ ಪಠ್ಯಕ್ರಮಗಳಲ್ಲಿ ಜನಪದ ಸಾಹಿತ್ಯ ಅಳವಡಿಸಬೇಕು~ ಎಂದು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ವಿಷ್ಣು ಶಿಂಧೆ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತು, ಆಹೇರಿಯ ಬಸವೇಶ್ವರ ವೇದಿಕೆ, ಆಶಾಕಿರಣ ವಿಧವೆಯರ ಹಾಗೂ ಬಡ ಮಕ್ಕಳ ಅಭಿವೃದ್ಧಿ ಸಂಸ್ಥೆಯಿಂದ ನಗರದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಜಾನಪದ ಜಾತ್ರೆ ಹಾಗೂ ವಿಚಾರ ಸಂಕಿರಣದ 2ನೇ ದಿನವಾದ ಭಾನುವಾರ ವಿಚಾರ ಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು.

ಗ್ರಾಮೀಣ ಜಾನಪದ ಕಲೆಗಳಾದ ಹಂತಿ ಪದ, ಗೀಗೀ ಪದ, ಸೋಬಾನೆ ಪದ, ಲಾವಣಿ ಪದ ಸೇರಿದಂತೆ ಮುಂತಾದ ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ. ಇವುಗಳನ್ನು ಉಳಿಸಿ- ಬೆಳೆಸಲು ಚಿಂತನೆ ಮಾಡಬೇಕಾಗಿದೆ. ಗ್ರಾಮೀಣ ರೈತಾಪಿ ವರ್ಗದವರು ಹಾಗೂ ಶೈಕ್ಷಣಿಕ ಕೇಂದ್ರಗಳು ಆಸಕ್ತಿ ವಹಿಸಿ ಜಾನಪದ ಉಳಿಸಿ-ಬೆಳೆಸಲು ಮುಂದಾಗಬೇಕು ಎಂದರು.

ಕರ್ನಾಟಕ ಜಾನಪದ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಂ.ಎನ್. ವಾಲಿ, ಜಾನಪದ ಸಾಹಿತ್ಯ ಮತ್ತು ಕಲೆಗಳ ಪ್ರೋತ್ಸಾಹಕ್ಕೆ ಈಗಾಗಲೇ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ. ಪ್ರತಿ ವರ್ಷ ಹೋಬಳಿ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಜಾನಪದ ಕುರಿತು ವಿಚಾರ ಸಂಕಿರಣ, ಕಾರ್ಯಾಗಾರ ನಡೆಸಬೇಕು. ಇದಕ್ಕೆ ಸರ್ಕಾರ ಅಗತ್ಯ ನೆರವು ನೀಡಬೇಕು ಎಂದು ಹೇಳಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾ ಮಣಿ, ಹಳ್ಳಿಗಾಡಿನಲ್ಲಿ ಈಗ ಸಿನಿಮಾ -ಧಾರವಾಹಿಗಳ ಭರಾಟೆ ಜೋರಾ ಗಿದೆ. ಗ್ರಾಮೀಣ ಜನಪದ ಕಲೆಗಳನ್ನು ಉಳಿಸುವದು ಕಷ್ಟಕರವಾಗಿದೆ. ನಮ್ಮ ಮೂಲ ಸಂಸ್ಕೃತಿ-ಕಲೆಯ ಉಳಿವಿಗಾಗಿ ಯುವ ಜನತೆ ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದರು.

ಪ್ರೊ.ಜಿ.ಎನ್. ತೆಗ್ಗಳ್ಳಿ, ಪ್ರೊ.ಯು. ಎನ್. ಕುಂಟೋಜಿ, ಪ್ರೊ.ರಮೇಶ ತೇಲಿ, ಪ್ರೊ.ಶರಣಗೌಡ ಪಾಟೀಲ ಹಾಗೂ ಬಂಡೆಪ್ಪ ತೇಲಿ ಉಪಸ್ಥಿತರಿದ್ದರು. ಕುರ್ಲೆ ಸ್ವಾಗತಿಸಿದರು. ಈರಣ್ಣ ಕಾರ್ಯಕ್ರಮ ನಿರೂಪಿಸಿದರು. ಮೀನಾಕ್ಷಿ ಉಟಗಿ ವಂದಿಸಿದರು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.