ADVERTISEMENT

ಪುನರ್ವಸತಿ ಕೇಂದ್ರಗಳಿಗೆ ಸೌಲಭ್ಯಗಳಿಲ್ಲ

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 6:10 IST
Last Updated 14 ಜುಲೈ 2012, 6:10 IST
ಪುನರ್ವಸತಿ ಕೇಂದ್ರಗಳಿಗೆ ಸೌಲಭ್ಯಗಳಿಲ್ಲ
ಪುನರ್ವಸತಿ ಕೇಂದ್ರಗಳಿಗೆ ಸೌಲಭ್ಯಗಳಿಲ್ಲ   

ಆಲಮಟ್ಟಿ: ಆಲಮಟ್ಟಿ ಜಲಾಶಯದಿಂದ ಮುಳುಗಡೆಯಾಗಿ ದಶಕಗಳು ಕಳೆದರೂ ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದ ಪುನರ್ವಸತಿ ಕೇಂದ್ರಗಳಿಗೆ ಸಮರ್ಪಕ ಮೂಲ ಸೌಕರ್ಯ ದೊರೆತಿಲ್ಲ ಎಂದು ಬಬಲೇಶ್ವರ ಶಾಸಕ ಎಮ್.ಬಿ. ಪಾಟೀಲ ದೂರಿದರು.

ಸ್ಥಳೀಯ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಬಬಲೇಶ್ವರ ಮತಕ್ಷೇತ್ರ ವ್ಯಾಪ್ತಿಯ ಪುನರ್ವಸತಿ ಕೇಂದ್ರಗಳ ಹಾಗೂ ಅಚ್ಚುಕಟ್ಟು ಪ್ರದೇಶದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಸವುಳು-ಜವುಳು, ನೀರು ಬಳಕೆದಾರರ ಸಂಘ, ಸ್ಮಶಾನ ಭೂಮಿ ಒತ್ತುವರಿ, ಸಮರ್ಪಕ ಕುಡಿಯುವ ನೀರಿನ ಕೊರತೆ ಸೇರಿದಂತೆ ಸುಮಾರು 25 ಕ್ಕೂ ಹೆಚ್ಚು ವಿಷಯಗಳ ಕುರಿತು ಶಾಸಕರು ಸಂಬಂಧಿಸಿದ ಅಧಿಕಾರಿಗಳ ಜೊತೆ ವಿವರವಾಗಿ ಚರ್ಚಿಸಿದರು.

ಸದ್ಯ ಪ್ರತಿ ವರ್ಷವೂ ಈ ರೀತಿಯ ಸಭೆ ನಡೆಸಲಾಗುತ್ತಿದ್ದು, ಈಗ ಸಮಸ್ಯೆಗಳ ಇತ್ಯರ್ಥಕ್ಕಾಗಿ ಅಗಷ್ಟ ತಿಂಗಳಲ್ಲಿ ಒಮ್ಮೆ, ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ಇಂಥ ಪ್ರಗತಿ ಪರಿಶೀಲನಾ ಸಭೆ ನಡೆಸುವುದಾಗಿ ಶಾಸಕರು ಹೇಳಿದರು.

ಕಾಲುವೆಗೆ ಬಿಡುವ ನೀರಿನ ನಿರ್ವಹಣೆ, ಕಾಲುವೆ ದುರಸ್ತಿ ಕುರಿತು ದೀರ್ಘವಾಗಿ ಚರ್ಚಿಸಿದ ಶಾಸಕರು, ಅಧಿಕಾರಿಗಳಿಗೆ ತಮ್ಮ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮುಳವಾಡ ಏತ ನೀರಾವರಿ ಪಶ್ಚಿಮ ಕಾಲುವೆಯ ದುರಸ್ತಿ, ಅದರಿಂದಾಗುವ ನೀರಾವರಿ ಕ್ಷೇತ್ರದ ಹೆಚ್ಚಳ ಬಗ್ಗೆ ಶೀಘ್ರವೇ  ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಶಾಸಕ ಪಾಟೀಲ ಸೂಚಿಸಿದರು.  

ಅದಕ್ಕೆ ಸ್ಪಂದಿಸಿದ ಮುಖ್ಯ ಎಂಜಿನಿಯರ್ ಅನಂತರಾಮು, ಒಂದೆರೆಡು ದಿನದಲ್ಲಿಯೇ ರೈತರ, ಕಾಡಾ ಅಧಿಕಾರಿಗಳ ತಂಡ ರಚಿಸಿ ಹೊಲಗಾಲುವೆ ಹಾಗೂ ಉಪಕಾಲುವೆಯ ವೀಕ್ಷಣೆ ನಡೆಸಿ ದುರಸ್ತಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ನೀರು ಬಳಕೆದಾರರ ಸಂಘವನ್ನು ರಚಿಸಲು ಶಾಸಕರು ಸೂಚಿಸಿದರು.

ಮುಳವಾಡ ಏತ ನೀರಾವರಿ ಯೋಜನೆಯ ಪಶ್ಚಿಮ ಕಾಲುವೆಯಿಂದ ಬಬಲೇಶ್ವರ ಮತಕ್ಷೇತ್ರ ವ್ಯಾಪ್ತಿಯ 4000 ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚು ಜಮೀನು ಸವುಳು-ಜವುಳಿಗೆ ತುತ್ತಾಗಿದ್ದು, ಅದನ್ನು ನಿವಾರಿಸಿ ಎಂದು ಕಾಡಾ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಕಾಡಾ ಅಧಿಕಾರಿಗಳು ಮಾಹಿತಿ ನೀಡಿ, ಅದಕ್ಕಾಗಿ ಸಬ್ ಸರಫೈಸ್ ಡ್ರೈನೇಜ್ ನಿರ್ಮಿಸುವ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಇದರಿಂದ ಸವುಳು-ಜವುಳಿನ ತೊಂದರೆಯನ್ನು ನಿವಾರಿಸಲು ಸವುಳು ಹಿಡಿದ ಪ್ರದೇಶದ ಉತಾರಿ ಭಾವಚಿತ್ರ ನೀಡುವಂತೆ ಅಧಿಕಾರಿಗಳು ರೈತರಿಗೆ ಸೂಚಿಸಿದರು.

ಕಣಬೂರ, ಜೈನಾಪುರ ಗ್ರಾಮದ ಕುಡಿಯುವ ನೀರಿನ ಸಮಸ್ಯೆ, ಜೈನಾಪುರ ಹಾಗೂ ದೇವರಗೆಣ್ಣೂರ ಗ್ರಾಮಕ್ಕೆ ಕಲುಷಿತ ನೀರು ಪೂರೈಕೆ, ದೇವರಗೆಣ್ಣೂರ ಗ್ರಾಮದ ಸ್ಮಶಾನ ಒತ್ತುವರಿ, ಅನೇಕ ಕಾಲುವೆಗಳನ್ನು ನಿರ್ಮಿಸಿದರೂ ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡದಿರುವುದು, ಬಬಲಾದಿ, ಸುತಗುಂಡಗಿ, ಗಲಗಲಿ ಮೊದಲಾದ ಗ್ರಾಮಗಳಿಗೆ ಸಮರ್ಪಕ ರಸ್ತೆ ಸಂಪರ್ಕದ ಬಗ್ಗೆ ಅಲ್ಲಿಯ ಜನತೆ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಅಧೀಕ್ಷಕ ಎಂಜಿನಿಯರ್‌ರಾದ ವಿ.ಕೆ. ಪೋತದಾರ, ಡಿ.ಎನ್. ಮರೋಳ, ಜಿ.ಪಂ. ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಪುನರ್ವಸತಿ ಅಧಿಕಾರಿ ಕಟ್ಟಿಮನಿ ಸೇರಿದಂತೆ ಬಬಲೇಶ್ವರ ಮತಕ್ಷೇತ್ರದ ಜನಪ್ರತಿನಿಧಿಗಳು, ರೈತರು, ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.