ADVERTISEMENT

ಪೌರಾಯುಕ್ತ ಸೇರಿ ಮೂವರ ಅಮಾನತಿಗೆ ಠರಾವ್

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 8:25 IST
Last Updated 18 ಅಕ್ಟೋಬರ್ 2012, 8:25 IST

ವಿಜಾಪುರ: ಕರ್ತವ್ಯಲೋಪ ಆರೋಪದ ಮೇಲೆ ನಗರಸಭೆಯ ಪೌರಾಯುಕ್ತ ಎಸ್.ಜಿ. ರಾಜಶೇಖರ, ಲೆಕ್ಕಪತ್ರ ಶಾಖೆಯ ಅಧೀಕ್ಷಕ ಹೊಳೆಣ್ಣವರ ಹಾಗೂ ಒಳಚರಂಡಿ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾರ್ಯ ನಿರ್ವಾಹಕ ಎಂಜಿನಿಯರ್ ತೆರಗಾಂವ ಅವರನ್ನು ಅಮಾನತು ಗೊಳಿಸಬೇಕು ಎಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಲಾಯಿತು.

ಬುಧವಾರ ಇಲ್ಲಿ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ವಿಷಯ ಪ್ರಸ್ತಾಪಿಸಿದರು.

`ಒಳಚರಂಡಿ ಕಾಮಗಾರಿ 18 ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು, ಆದರೆ 36 ತಿಂಗಳಾದರೂ ಮುಗಿದಿಲ್ಲ. ಅದರ ಪ್ರಗತಿಯ ಮಾಹಿತಿಯನ್ನು ಯಾವ ಜನಪ್ರತಿನಿಧಿಗಳಿಗೂ ನೀಡುತ್ತಿಲ್ಲ. ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾರ್ಯ ನಿರ್ವಾಹಕ ಎಂಜಿನಿಯರ್ ತೆರಗಾಂವ ಅವರ ನಿರ್ಲಕ್ಷ್ಯವೇ ಕಾರಣ. ಅವರನ್ನು ಅಮಾನತುಗೊಳಿಸಲು ಠರಾವು ಪಾಸ್ ಮಾಡಿ~ ಎಂಬ ಶಾಸಕ ಕಟಕಧೋಂಡ ಅವರ ಸಲಹೆಗೆ ಬಹುತೇಕ ಸದಸ್ಯರು ಸಹಮತ ವ್ಯಕ್ತಪಡಿಸಿದರು.

`ಕರ್ತವ್ಯಲೋಪ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರ ಕಲ್ಯಾಣ ಯೋಜನೆಗಳ ಜಾರಿಯಲ್ಲಿ ನಿರ್ಲಕ್ಷ್ಯ, ಮೇಲಾಧಿಕಾರಿಗಳ ಆದೇಶ ಪಾಲನೆ ಮಾಡದೇ ಇರುವುದೂ ಸೇರಿದಂತೆ ಎಂಟು ಅಂಶಗಳನ್ನು ನಮೂದಿಸಿ ಪೌರಾಯುಕ್ತ ರಾಜಶೇಖರ ವಿರುದ್ಧ ಶಿಸ್ತು ಕ್ರಮಕ್ಕೆ ಜಿಲ್ಲಾಧಿಕಾರಿಗಳು ಈಗಾಗಲೇ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಅವರ ಶಿಫಾರಸ್ಸಿಗೆ ಬೆಂಬಲ ಸೂಚಿಸಿ ಹಾಗೂ ಈ ಅಧಿಕಾರಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು~ ಎಂದು ಬಹುಪಾಲು ಸದಸ್ಯರು ಸರ್ಕಾರವನ್ನು ಆಗ್ರಹಿಸಿದರು.

ಪೌರಾಯುಕ್ತರು ಹಾಗೂ ಲೆಕ್ಕಪತ್ರ ಶಾಖೆಯ ಅಧೀಕ್ಷಕ ಹೊಳೆಣ್ಣವರ ಅವರನ್ನು ಅಮಾನತು ಮಾಡಲು ಠರಾವು ಪಾಸ್ ಮಾಡಲಾಗಿದೆ ಎಂದು ಅಧ್ಯಕ್ಷ ಪರಶುರಾಮ ರಜಪೂತ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.