ADVERTISEMENT

ಬಣ್ಣದೋಕುಳಿಯಲ್ಲಿ ಮಿಂದೆದ್ದ ಜನರು

ಮುಂಜಾನೆಯಿಂದಲೇ ಮನೆ ಮಾಡಿದ ಬಣ್ಣದ ಸಂಭ್ರಮ; ಮುಗಿಲು ಮುಟ್ಟಿದ ಘೋಷಣೆ

ಡಿ.ಬಿ, ನಾಗರಾಜ
Published 3 ಮಾರ್ಚ್ 2018, 9:49 IST
Last Updated 3 ಮಾರ್ಚ್ 2018, 9:49 IST
ವಿಜಯಪುರದ ವೆಂಕಟರಮಣ ಗಲ್ಲಿಯಲ್ಲಿ ಶುಕ್ರವಾರ ಹೋಳಿ ಅಂಗವಾಗಿ ಪರಸ್ಪರ ಬಣ್ಣ ಬಳಿದುಕೊಂಡ ಹೆಂಗೆಳೆಯರು
ವಿಜಯಪುರದ ವೆಂಕಟರಮಣ ಗಲ್ಲಿಯಲ್ಲಿ ಶುಕ್ರವಾರ ಹೋಳಿ ಅಂಗವಾಗಿ ಪರಸ್ಪರ ಬಣ್ಣ ಬಳಿದುಕೊಂಡ ಹೆಂಗೆಳೆಯರು   

ವಿಜಯಪುರ: ಮೂಡಣದ ದಿಗಂತದಲ್ಲಿ ಅರುಣೋದಯದೊಂದಿಗೆ ಆರಂಭಗೊಂಡ ಬಣ್ಣದೋಕುಳಿಯ ರಂಗಿನ ಸಡಗರ ಶುಕ್ರವಾರ ರಾತ್ರಿಯಿಡೀ ನಡೆಯಿತು. ಹಲಗೆಯ ಸದ್ದು ಇದಕ್ಕೆ ಸಾಥ್‌ ನೀಡಿತು.

ಗುರುವಾರ ರಾತ್ರಿ ಮನೆಗಳ ಮುಂಭಾಗ, ಓಣಿಯ ಗಲ್ಲಿ ಗಲ್ಲಿಯಲ್ಲಿ ಕಾಮಣ್ಣನ ದಹನದ ಬಳಿಕವೇ ಆರಂಭಗೊಂಡಿದ್ದ ಬಣ್ಣದ ರಂಗಿನಾಟ, ಶುಕ್ರವಾರ ನಸುಕಿನಿಂದಲೇ ಬಿರುಸು ಪಡೆಯಿತು. ಎತ್ತ ನೋಡಿದರೂ ರಂಗಿನ ಚಿತ್ತಾರ ಗೋಚರಿಸಿತು. ಹಲಗೆಯ ಸಪ್ಪಳ ಕಿವಿಗಪ್ಪಳಿಸಿತು.

ಚಿಣ್ಣರು–ಯುವ ಸಮೂಹ ಮುಂಜಾನೆ ಒಂಬತ್ತರ ವೇಳೆಗೆ ಮನೆಯಲ್ಲಿ, ಓಣಿಯೊಳಗೆ ಒಂದು ಸುತ್ತಿನ ಬಣ್ಣದಾಟ ಮುಗಿಸಿ, ಹೊರ ಬಿದ್ದಿತು. ನಗರದ ಬಡಾವಣೆಗಳಲ್ಲಿ ಹಲಗೆಯ ಸದ್ದಿನ ಆರ್ಭಟಗೊಂದಿಗೆ, ಯುವಕರ ಬೈಕ್‌ನ ಅಬ್ಬರ, ಬಾಯಿ ಬಡಿದುಕೊಂಡು ಹೊಯ್ಕೊಂಡ ಸದ್ದು ಗುಮ್ಮಟನಗರಿಯಲ್ಲಿ ಮಾರ್ದನಿಸಿದವು.

ADVERTISEMENT

ಗ್ರಾಮೀಣ ಪ್ರದೇಶದ ಚಿತ್ರಣವೂ ಇದಕ್ಕೆ ಹೊರತಾಗಿರಲಿಲ್ಲ. ಜಿಲ್ಲೆ ವ್ಯಾಪ್ತಿಯ ಎಲ್ಲ ಗ್ರಾಮಗಳು ಹೋಳಿಯ ರಂಗಿನಿಂದ ಮಿಂದೆದ್ದವು. ಅಬಾಲ ವೃದ್ಧರಾದಿಯಾಗಿ ಎಲ್ಲರೂ ಬಣ್ಣದಾಟದಲ್ಲಿ ಮಿಂದೆದ್ದರು. ಹಲಗೆಯ ನಿನಾದ ಉನ್ಮಾದಕ್ಕೆ ತಲುಪಿತ್ತು. ಎತ್ತ ನೋಡಿದರೂ ಬಣ್ಣದಾಟದ ಸಂಭ್ರಮ ಗೋಚರಿಸಿತು.

ವಿಜಯಪುರದ ಪ್ರಮುಖ ಬಜಾರ್‌ಗಳು ಬಹುತೇಕ ಬಂದ್‌ ಆಗಿದ್ದವು. ಬಣ್ಣ, ಪಿಚಕಾರಿ ಖರೀದಿ ಕೊನೆ ಕ್ಷಣದವರೆಗೂ ಬಿರುಸಿನಿಂದ ನಡೆಯಿತು. ರಸ್ತೆಗಳ ತುಂಬಾ ಬಣ್ಣದೋಕುಳಿಯ ರಂಗು ಚೆಲ್ಲಿತ್ತು.

ಬಿಎಲ್‌ಡಿಇ ಎಂಜಿನಿಯರಿಂಗ್‌ ಕಾಲೇಜಿನ ರಸ್ತೆಯಲ್ಲಿ ಯುವಕರದ್ದೇ ಸಂಭ್ರಮ. ಹತ್ತಕ್ಕೂ ಹೆಚ್ಚು ಸ್ನೇಹಿತರು ಗುಂಪು ಗುಂಪಾಗಿ ಬೈಕ್‌ಗಳಲ್ಲಿ ಹಲಗೆ ಬಾರಿಸುತ್ತಾ, ಬಣ್ಣ ಎರಚುತ್ತಾ ನಗರದ ಎಲ್ಲೆಡೆ ಸಂಚರಿಸಿದರು. ಬಾಗಿಲು ಮುಚ್ಚಿದ್ದ ಅಂಗಡಿಗಳ ನೆರಳಿನಲ್ಲಿ ಕೂತು ಹಲಗಿ ಬಾರಿಸಿ, ಬಣ್ಣ ಎರಚಾಡಿ ಸಾಮೂಹಿಕ ನೃತ್ಯ ನಡೆಸಿದರು.

ಯುವಕರಿಗೆ ಪೈಪೋಟಿ ನೀಡುವಂತೆ ಯುವತಿಯರ ತಂಡವೂ ರಸ್ತೆಗಿಳಿದು ಬಣ್ಣದೋಕುಳಿಯ ಸಂಭ್ರಮದಲ್ಲಿ ಮಿಂದೆದ್ದಿತು. ಚಿಣ್ಣರ ಸಂಭ್ರಮವಂತೂ ಮುಗಿಲು ಮುಟ್ಟಿತ್ತು. ಮುಂಜಾನೆಯಿಂದ ಮುಸ್ಸಂಜೆವರೆಗೂ ಸಿಕ್ಕ ಸಿಕ್ಕವರಿಗೆ ಬಣ್ಣ ಎರಚಿ, ಓಣಿ ತುಂಬಾ ಸಂಚರಿಸಿ, ಸಂಭ್ರಮಿಸಿತು. ಯುವ ಸಮೂಹ ತಮ್ಮ ಬಣ್ಣದಾಟವನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಲೈವ್‌ ಪ್ರಸಾರ ಮಾಡಿಕೊಂಡಿತು.

ನಗರದ ಎಲ್ಲೆಡೆಯ ಸಾರ್ವಜನಿಕ ಟ್ಯಾಂಕ್ ನೀರು ಮಧ್ಯಾಹ್ನದ ವೇಳೆಗೆ ಖಾಲಿಯಾಗಿತ್ತು. ನೆತ್ತಿ ಸುಡುವ ಕೆಂಡದಂಥ ಬಿಸಿಲನ್ನು ಲೆಕ್ಕಿಸದೆ ಯುವ ಸಮೂಹ ಬಣ್ಣದಾಟದಲ್ಲಿ ತಲ್ಲೀನವಾಗಿತ್ತು. ತಮ್ಮ ಬಾಯಾರಿಕೆಯ ದಾಹ ತೀರಿಸಿಕೊಳ್ಳಲು ತಂಪು ಪಾನೀಯದ ಮೊರೆ ಹೊಕ್ಕ ದೃಶ್ಯ ಕಂಡುಬಂದವು.

ಮಧ್ಯಾಹ್ನದ ಬಳಿಕ ಬಣ್ಣದ ಅಬ್ಬರ ಕೊಂಚ ತಗ್ಗಿತು. ಯುವಕರ ತಂಡ ನಗರದ ಹೊರ ವಲಯದಲ್ಲಿನ ಡಾಬಾಗಳಿಗೆ ತೆರಳಿ ಭರ್ಜರಿ ಭೋಜನ ಸವಿಯಿತು. ಕೆಲವೆಡೆ ಮದ್ಯ–ಬಾಡೂಟದ ಔತಣಕೂಟಗಳು ಹೋಳಿ ಅಂಗವಾಗಿ ನಡೆದವು.

ಪಡುವಣದ ಬಾನಂಗಳದಲ್ಲಿ ಭಾಸ್ಕರ ಕೆಂಬಣ್ಣದೊಂದಿಗೆ ತನ್ನ ರಂಗು ಕಳೆದುಕೊಳ್ಳಲಾರಂಭಿಸುತ್ತಿದ್ದಂತೆ, ರಸ್ತೆಗಿಳಿದ ಯುವ ಸಮೂಹ ಮತ್ತೊಂದು ಸುತ್ತಿನ ಬಣ್ಣದೋಕುಳಿಯಾಟಕ್ಕೆ ಅಣಿಯಾಯ್ತು. ತಮ್ಮ ಆಪ್ತೇಷ್ಟರನ್ನು ಹುಡುಕಿಕೊಂಡು ಹೋಗಿ ಬಣ್ಣ ಎರಚಿ ಸಂಭ್ರಮಿಸಿತು.

ಹಿರಿಯರು, ಮಹಿಳೆಯರು ಸಹ ಬಣ್ಣದೋಕುಳಿಯ ಸಂಭ್ರಮದಲ್ಲಿ ಮುಳುಗಿದ್ದರು. ತಮ್ಮ ಆತ್ಮೀಯ ಒಡನಾಡಿಗಳ ಕೆನ್ನೆಗೆ ಬಣ್ಣ ಬಳಿದು ಪರಸ್ಪರ ಶುಭ ಹಾರೈಸಿ ಸಂಭ್ರಮಿಸಿದ ಚಿತ್ರಣ ಜಿಲ್ಲೆಯ ಎಲ್ಲೆಡೆ ಗೋಚರಿಸಿತು. ಹಿಂದಿನ ವರ್ಷಗಳ ಸಂಭ್ರಮಕ್ಕಿಂತ ಈ ಬಾರಿ ಸಾಮಾಜಿಕ ಜಾಲತಾಣಗಳಲ್ಲೂ ಹೋಳಿಯ ಸಂಭ್ರಮ ಮೇರೆ ಮೀರಿತ್ತು.
***
ರಂಗೋಲಿಕ್‌ನಲ್ಲೂ ಸಂಭ್ರಮ

ಬಿಎಲ್‌ಡಿಇ ಎಂಜಿನಿಯರಿಂಗ್‌ ಕಾಲೇಜು ಮುಂಭಾಗದ ವಿಶಾಲ ಮೈದಾನದಲ್ಲಿ ಖಾಸಗಿಯಾಗಿ ‘ರಂಗೋಲಿಕ್‌’ ಹೆಸರಿನಲ್ಲಿ ಹೋಳಿ ಸಂಭ್ರಮ ಆಚರಿಸಲಾಯಿತು.

‘ಮಣ್ಣಿನ ಕೆಸರು, ನೀರು, ತುಂತುರು ಹನಿ, ಮಳೆಯ ಹನಿಯೊಳಗೆ ನೃತ್ಯ, ಆರ್ಗ್ಯಾನಿಕ್‌ ಕಲರ್‌ ವಿಭಾಗ ನಿರ್ಮಿಸಲಾಗಿತ್ತು. 1200ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಹೋಳಿ ಸಂಭ್ರಮಾ ಚರಣೆ ನಡೆಸಿದರು. ಯುವ ಸಮೂಹ, ಕುಟುಂಬ ವರ್ಗಗಳು ಪಾಲ್ಗೊಂಡಿದ್ದು ವಿಶೇಷ’ ಎಂದು ಸಂಘಟಕ ವೀಟಸ್‌ ಅಲೆಕ್ಸಾಂಡರ್‌ ತಿಳಿಸಿದರು.

ಶುಭ ಕೋರಿದ ಜಿಗಜಿಣಗಿ

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ತಮ್ಮ ಪೇಜ್‌ನಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ ನಾಡಿನ ಜನರಿಗೆ ಹೋಳಿ ಶುಭಾಶಯ ಕೋರುವ 39 ಸೆಕೆಂಡ್‌ನ ತಮ್ಮ ವಿಡಿಯೊ ಕ್ಲಿಪ್ಪಿಂಗ್ ಅಪ್‌ಲೋಡ್‌ ಮಾಡಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.