ADVERTISEMENT

ಬರ: ವಿಜಾಪುರ ಬಿಳಿ ಜೋಳಕ್ಕೆ ಕುತ್ತು

ಗಣೇಶ ಚಂದನಶಿವ
Published 29 ನವೆಂಬರ್ 2011, 7:55 IST
Last Updated 29 ನವೆಂಬರ್ 2011, 7:55 IST
ಬರ: ವಿಜಾಪುರ ಬಿಳಿ ಜೋಳಕ್ಕೆ ಕುತ್ತು
ಬರ: ವಿಜಾಪುರ ಬಿಳಿ ಜೋಳಕ್ಕೆ ಕುತ್ತು   

ವಿಜಾಪುರ: `ರೊಟ್ಟಿ ತಿಂದ್ರ ರಟ್ಟಿ ಗಟ್ಟಿ~ ಎಂಬುದು ಉತ್ತರ ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಮಾತು. `ರಟ್ಟಿ~ ಗಟ್ಟಿಮಾಡುವ `ರೊಟ್ಟಿ~ ತಯಾರಿಸಲು ಬೇಕಿರುವ ಪ್ರಸಿದ್ಧ ವಿಜಾಪುರ ಬಿಳಿ ಜೋಳಕ್ಕೆ ಈ ವರ್ಷ ಕುತ್ತು ಬಂದಿದೆ.

ಪೂರೈಕೆಗಿಂತ ಬೇಡಿಕೆ ಹೆಚ್ಚಿರುವುದರಿಂದ ಈಗಲೇ ಬಿಳಿಜೋಳದ ದರ ಕ್ವಿಂಟಲ್‌ಗೆ 4,000 ರೂಪಾಯಿ ಗಡಿ ದಾಟಿದೆ. ಮಳೆಯ ಕೊರತೆ ಹಾಗೂ ಶೀತಗಾಳಿಯಿಂದ ವಿಫಲವಾಗಿರುವ ಬೆಳೆ, ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ಬಿಳಿಜೋಳಕ್ಕೆ ವಿಜಾಪುರ ಜಿಲ್ಲೆ ಪ್ರಸಿದ್ಧಿಯಾಗಿದೆ. ಇಲ್ಲಿಯ ಜೋಳ ಮತ್ತು ಜೋಳದ ರೊಟ್ಟಿಗೆ ಎಲ್ಲಿಲ್ಲದ ಬೇಡಿಕೆ. ಡೋಣಿ ನದಿಯ ತೀರದಲ್ಲಿ ಬೆಳೆಯುವ ಜೋಳ ಇಳುವರಿ ಮತ್ತು ಗುಣಮಟ್ಟದಲ್ಲಿಯೂ ಉತ್ತಮ. ಮಳೆಯ ಕೊರತೆಯಿಂದ ಈಗ ಡೋಣಿ ಭಾಗವೂ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಜೋಳದ ಬೆಳೆ ವಿಫಲವಾಗುತ್ತಿದೆ.

`ಹಿಂಗಾರಿ ಹಂಗಾಮಿನಲ್ಲಿ  ಜಿಲ್ಲೆಯಲ್ಲಿ 2.57 ಲಕ್ಷ ಹೆಕ್ಟೇರ್‌ನಲ್ಲಿ ಬಿಳಿ ಜೋಳ ಬಿತ್ತನೆಯ ಗುರಿ ಇತ್ತು. ಆದರೆ, 1.76 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಮಾಡಲಾಗಿದೆ. ಹೆಕ್ಟೇರ್‌ಗೆ 15 ಕ್ವಿಂಟಲ್‌ದಂತೆ ಒಟ್ಟಾರೆ 38.55 ಲಕ್ಷ ಕ್ವಿಂಟಲ್ ಇಳುವರಿಯ ಗುರಿ ಹಾಕಿಕೊಳ್ಳಲಾಗಿತ್ತು~ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಸಿ. ಭೈರಪ್ಪ ಹೇಳುತ್ತಾರೆ.

`ಪ್ರತಿ ವರ್ಷ ಈ ಅವಧಿಗೆ ಜೋಳದ ಬೆಳೆ ಆಳೆತ್ತರಕ್ಕೆ ಬೆಳೆಯುತ್ತಿತ್ತು. ಈ ವರ್ಷ ಮೊಳಕಾಲಿನವರೆಗೂ ಬೆಳೆದಿಲ್ಲ. ತೇವಾಂಶದ ಕೊರತೆಯಿಂದ ಬೆಳೆ ಬಾಡುತ್ತಿದೆ. ಈ ವರ್ಷ ಕುಂಠಿತಗೊಂಡ ಬೆಳೆಯಲ್ಲಿ ಜೋಳದ ಕಾಳು ಬಿಡುವುದಿಲ್ಲ;  ದನಕರುಗಳಿಗೆ ಕಣಕಿ (ಮೇವು) ಸಹ ಬರುವುದಿಲ್ಲ~ ಎಂಬುದು ತೊರವಿಯ ರೈತ ತಿಪ್ಪಣ್ಣ ದಳವಾಯಿ ಆತಂಕ.

`20 ಎಕರೆಯಲ್ಲಿ ಜೋಳ ಬಿತ್ತನೆ ಮಾಡಿದ್ದೇವೆ. ಎಕರೆಗೆ 5,000 ರೂಪಾಯಿ ಖರ್ಚಾಗಿದೆ. ಮಳೆ ಸರಿಯಾಗಿ ಆಗಿದ್ದರೆ ಎಕರೆಗೆ ಐದು ಚೀಲ ಇಳುವರಿ ಬಂದು 100 ಚೀಲ ಜೋಳ ಬೆಳೆಯುತ್ತಿತ್ತು. ಈಗ ಬಿತ್ತಿದಷ್ಟು ಜೋಳದ ಕಾಳೂ ಸಹ ಬರುವ ಸಾಧ್ಯತೆ ಇಲ್ಲ~ ಎಂದು ಅವರು ವಸ್ತುಸ್ಥಿತಿಯನ್ನು ವಿವರಿಸುತ್ತಾರೆ.

`ನಮಗೆ ಊಟಕ್ಕೆ ಜೋಳದ ರೊಟ್ಟಿ ಬೇಕೇ ಬೇಕು. ಜೋಳದ ದರ ಗಗನಕ್ಕೇರಿದೆ. ಈಗ ಅನಿವಾರ್ಯವಾಗಿ ಜೋಳದಲ್ಲಿ ಪಡಿತರ ಅಕ್ಕಿಯ ಹಿಟ್ಟು ಮಿಶ್ರಣ ಮಾಡಿ ರೊಟ್ಟಿ ಮಾಡುತ್ತಿದ್ದೇವೆ~ ಎಂದು ಬಡವರು ಪಡುತ್ತಿರುವ ಪಡಿಪಾಟಲನ್ನು ವಿವರಿಸುತ್ತಾಳೆ ಕೂಲಿ ಕೆಲಸ ಮಾಡುವ ಶ್ಯಾವಕ್ಕ.

`ಬಿಳಿ ಜೋಳದ ಆವಕ ಕಡಿಮೆಯಾಗಿದೆ. ವಾರದ ಅವಧಿಯಲ್ಲಿ ವಿಜಾಪುರ ಎಪಿಎಂಸಿಗೆ ಕೇವಲ  60 ಕ್ವಿಂಟಲ್ ಬಿಳಿ ಜೋಳ ಆವಕವಾಗಿದೆ. ದರ 2,800 ರಿಂದ 3,100 ರೂಪಾಯಿ ಇದೆ~ ಎಂದು ಎಪಿಎಂಸಿ ಅಧಿಕಾರಿಗಳು ಹೇಳುತ್ತಿದ್ದಾರೆ.

`ಎಪಿಎಂಸಿಯಲ್ಲಿ ಇರುವ ದರವೇ ಬೇರೆ. ಮಾರುಕಟ್ಟೆಯಲ್ಲಿ ಈಗ ಬಿಳಿ ಜೋಳದ ದರ ಕೆ.ಜಿಗೆ 40 ರಿಂದ 41 ರೂಪಾಯಿ ಇದೆ. ಖರೀದಿಯೂ ಕಡಿಮೆಯಾಗಿದೆ~ ಎನ್ನುತ್ತಾರೆ ಹಳೆಯ ಜೋಳದ ಬಜಾರ್‌ನ ವರ್ತಕ ರಮೇಶ ರಜಪೂತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.