ADVERTISEMENT

ಬಾಂಧವ್ಯ ಬೆಸೆಯುವ ‘ರಮ್ಜಾನ್‌ ಇಫ್ತಾರ್‌’

​ಪ್ರಜಾವಾಣಿ ವಾರ್ತೆ
Published 18 ಜೂನ್ 2017, 6:30 IST
Last Updated 18 ಜೂನ್ 2017, 6:30 IST
ವಿಜಯಪುರದ ಹೆಸ್ಕಾಂ ಸಮುದಾಯ ಭವನದಲ್ಲಿ ನಡೆದ ಇಫ್ತಾರ್‌ ಔತಣಕೂಟದ ಚಿತ್ರಣ
ವಿಜಯಪುರದ ಹೆಸ್ಕಾಂ ಸಮುದಾಯ ಭವನದಲ್ಲಿ ನಡೆದ ಇಫ್ತಾರ್‌ ಔತಣಕೂಟದ ಚಿತ್ರಣ   

ಪಡುವಣದ ದಿಗಂತದಲ್ಲಿ ದಿನಕರ ಅಸ್ತಂಗತನಾಗುತ್ತಿದ್ದಂತೆ ‘ರಮ್ಜಾನ್‌’ ಮಾಸಾಚರಣೆಯ ಇಫ್ತಾರ್‌ ಔತಣ ಕೂಟಗಳ ಸಂಭ್ರಮ ಗರಿಗೆದರುತ್ತದೆ. ಮಸೀದಿಗಳಲ್ಲಿ, ಮನೆಗಳ ಮುಂಭಾಗ ಝಗಮಗಗೊಳಿಸುವ ವಿದ್ಯುತ್‌ ಬೆಳಕಿನಲ್ಲಿ ಅಪಾರ ಸಂಖ್ಯೆಯ ಜನರು ಒಂದೆಡೆ ಕಲೆತು, ಸಾಮೂಹಿಕ ವಾಗಿ ಸಹ ಭೋಜನ ನಡೆಸುವ ಮೂಲಕ, ಆತ್ಮೀಯವಾಗಿ ಬೆರೆತು ರಾತ್ರಿಗೆ ಇನ್ನಷ್ಟು ಮೆರುಗು ತುಂಬುತ್ತಾರೆ.

ಅಬಾಲವೃದ್ಧರಾದಿಯಾಗಿ ಎಲ್ಲರೂ ಈ ಔತಣಕೂಟಗಳಲ್ಲಿ ಪಾಲ್ಗೊಳ್ಳು ತ್ತಾರೆ. ಬಡವ–ಬಲ್ಲಿದ ಎಂಬ ಭೇದ–ಭಾವವಿರುವುದಿಲ್ಲ. ಅನ್ಯ ಧರ್ಮೀ ಯರು ಇಫ್ತಾರ್‌ನಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವೈಶಿಷ್ಟ್ಯತೆ. ಇಸ್ಲಾಂ ಧರ್ಮೀಯರ ಪವಿತ್ರ ಮಾಸಾಚರಣೆ ಆರಂಭಗೊಂಡ ಬೆನ್ನಿಗೆ ಇಫ್ತಾರ್‌ ಔತಣಕೂಟಗಳು ಚಾಲನೆ ಪಡೆಯುವುದು ವಿಶೇಷ. ಒಂದೆರೆಡು ತಾಸಿನ ಅವಧಿ ಈ ಸಂಭ್ರಮಕೂಟಗಳು ನಡೆಯುತ್ತವೆ.

ಮನೆ–ಮಸೀದಿಗಳಿಗೆ ಸೀಮಿತವಾ ಗಿದ್ದ ಇಫ್ತಾರ್‌ ಔತಣಕೂಟಗಳು ಇದೀಗ ಎಲ್ಲೆಡೆ ಪಸರಿಸಲಾರಂಭಿಸಿವೆ. ಸರ್ಕಾರಿ ಇಲಾಖೆಗಳು, ರಾಜಕೀಯ ನೇತಾರರು ಒಂದೊಂದು ದಿನ ‘ಇಫ್ತಾರ್‌’ ಆಯೋಜಿಸಿ ತಮ್ಮ ಆಪ್ತೇಷ್ಟರ ಜತೆ ಧಾರ್ಮಿಕ ಶ್ರದ್ಧಾ ಭಕ್ತಿಯಿಂದ ಪವಿತ್ರ ಮಾಸಾಚರಣೆಯಲ್ಲಿ ಪಾಲ್ಗೊಳ್ಳುವುದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ADVERTISEMENT

ವಿಜಯಪುರ ಮಹಾನಗರ ಪಾಲಿಕೆ ಹಲ ವರ್ಷಗಳಿಂದ ಇಫ್ತಾರ್‌ ಔತಣ ಕೂಟ ಆಯೋಜಿಸುತ್ತಿದೆ. ಪಾಲಿಕೆ ಸಿಬ್ಬಂದಿ, ಸದಸ್ಯರು ಸೇರಿದಂತೆ ಆಪ್ತ ವಲಯ ಆಹ್ವಾನಿಸಿ ರಾತ್ರಿಯ ಊಟ ನೀಡುತ್ತಿದೆ. ಪ್ರಸ್ತುತ ವರ್ಷ ಆಯುಕ್ತ ಹರ್ಷಶೆಟ್ಟಿ ಔತಣದಲ್ಲಿ ಖುದ್ದು ಊಟ ಬಡಿಸಿದ್ದು ವಿಶೇಷವಾಗಿತ್ತು.

ವಿಜಯಪುರ ನಗರ ವಲಯದ ಹೆಸ್ಕಾಂ ಸಿಬ್ಬಂದಿ ಸಹ ಈಚೆಗಿನ ವರ್ಷ ಗಳಲ್ಲಿ ತಪ್ಪದೆ ಇಫ್ತಾರ್‌ ಔತಣಕೂಟ ಆಯೋಜಿಸುತ್ತಿದ್ದಾರೆ. ಸಿಬ್ಬಂದಿಯ ಜತೆಗೆ ಆಪ್ತೇಷ್ಟರು, ಅನ್ಯ ಧರ್ಮದ ಸ್ನೇಹಿತರನ್ನು ಆಹ್ವಾನಿಸಿ, ಒಟ್ಟಿಗೆ ಸಹ ಭೋಜನವನ್ನು ಗುರುವಾರ ರಾತ್ರಿ ಸವಿದರು. ‘ಹೆಸ್ಕಾಂನ ಹತ್ತು ಮಂದಿ ನೌಕರರು ಒಟ್ಟಾಗಿ ಗುರುವಾರ ಸಮು ದಾಯ ಭವನದಲ್ಲಿ ಇಫ್ತಾರ್‌ ಕೂಟ ಆಯೋಜಿಸಿದ್ದೆವು. ಮುಂಚಿತವಾಗಿಯೇ ಎಲ್ಲರಿಗೂ ತಿಳಿಸಿದ್ದರಿಂದ ಅಪಾರ ಸಂಖ್ಯೆಯ ಜನರು ಸೇರಿದ್ದರು.

ನಮ್ಮದು ಪಕ್ಕಾ ಸಸ್ಯಹಾರಿ ಔತಣ ಕೂಟ. ಮುಂಜಾನೆಯೇ ಮಾರುಕಟ್ಟೆಗೆ ತೆರಳಿ ಕಾಯಿಪಲ್ಯೆ–ಹಣ್ಣನ್ನು ತಂದಿದ್ದೆವು. ಬಂದಿದ್ದ ಎಲ್ಲರಿಗೂ ಸಮೋಸಾ, ವೆಜ್‌ ಪಪ್ಸ್‌, ಕುಂದಾ, ಖಜೂರಿ, ಕಾಜುಶೇಖ್‌ ನೀಡಿದೆವು. ಎಲ್ಲರೂ ಖುಷಿಯಿಂದ ಒಟ್ಟಾಗಿ ಕಲೆತು ಸವಿದರು’ ಎಂದು ಔತಣಕೂಟದ ಆಯೋಜಕರಲ್ಲೊಬ್ಬ ರಾದ ಮೈನುದ್ದೀನ್‌ ಅಯ್ಯನಗುಡಿ ತಿಳಿಸಿದರು.

ಅಲ್‌ಅಮೀನ್‌ ಮೆಡಿಕಲ್‌ ಕಾಲೇಜಿನಲ್ಲಿ ನಡೆದ ಇಫ್ತಾರ್‌ನಲ್ಲಿ ಹಿಂದೂ–ಮುಸ್ಲಿಂ ವೈದ್ಯ ಸಮೂಹ, ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಪವರ್‌ ಪಾಯಿಂಟ್‌ ಪ್ರಸಂಟೇಷನ್‌ ಮೂಲಕ ಈ ಸಂದರ್ಭ ‘ಕುರಾನ್‌ ಮತ್ತು ವಿಜ್ಞಾನದ ಪವಾಡ’ ವಿಷಯ ಪ್ರಸ್ತುತ ಪಡಿಸಲಾಯಿತು.

ಸಂಭ್ರಮದ ಸಿದ್ಧತೆ: ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯ ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯವೂ ರಮ್ಜಾನ್‌ ಇಫ್ತಾರ್‌ ಕೂಟಗಳು ಆಯೋಜನೆಗೊಳ್ಳುತ್ತಿವೆ.
ಔತಣಕೂಟ ಆಯೋಜನೆಯ ತಯಾರಿ ಮೂರ್ನಾಲ್ಕು ದಿನಗಳಿಂದ ನಡೆದಿರುತ್ತದೆ. ಆಪ್ತೇಷ್ಟರಿಗೆ ಆಹ್ವಾನ ನೀಡುವುದು, ಔತಣಕೂಟದ ದಿನ ರಾತ್ರಿಯ ಊಟಕ್ಕೆ ಬಿಸಿ ಬಿಸಿ ಅಡುಗೆ ತಯಾರಿ ನಡೆಯುವುದು ಎಲ್ಲವೂ ಮುಂಚಿತವಾಗಿಯೇ. ಈ ಸಂಭ್ರಮದಲ್ಲಿ ಆಯೋಜಕರು ಸಡಗರದಲ್ಲಿ ಭಾಗಿ ಯಾಗುವ ದೃಶ್ಯ ಇದೀಗ ಎಲ್ಲೆಡೆ ಗೋಚರಿಸುತ್ತಿದೆ.

ಈ ಔತಣಕೂಟಗಳಲ್ಲಿ ಸಸ್ಯಹಾರ, ಮಾಂಸಹಾರ ಎರಡೂ ಬಗೆ  ಊಟ ಗಳಿರುತ್ತವೆ. ಒಣ ಹಣ್ಣು, ಹಣ್ಣುಗಳು, ಜ್ಯೂಸ್‌, ಹಸಿ ತರಕಾರಿ ಸೇರಿದಂತೆ ವಿದೇಶಿ ಖಜೂರ ಸಹ ಲಭ್ಯ. ಬಿಸಿಬಿಸಿ ಬಿರಿಯಾನಿ, ಚಿಕನ್‌, ಮೀನಿನ ಖಾದ್ಯ ಈ ಔತಣಕೂಟದ ವಿಶೇಷ ಖಾದ್ಯಗಳು. ಈಚೆಗಿನ ದಿನಗಳಲ್ಲಿ ಬಿಸ್ಲೇರಿ ನೀರಿನ ಬಾಟಲ್ ವಿತರಿಸುತ್ತಿರು ವುದು ವಿಶೇಷವಾಗಿದೆ.

* * 

ಹೆಸ್ಕಾಂ ಸಿಬ್ಬಂದಿಗೆ, ಆತ್ಮೀಯ ರಿಗೆ ಪ್ರತಿ ವರ್ಷ ಇಫ್ತಾರ್ ಆಯೋಜಿಸುತ್ತೇವೆ. ಔತಣಕೂಟದಲ್ಲಿ ಸಸ್ಯಹಾರ ಮಾತ್ರ ನೀಡುತ್ತೇವೆ. ಅನ್ಯ ಧರ್ಮೀಯರು ಪಾಲ್ಗೊಳ್ಳುತ್ತಾರೆ
ಮೈನುದ್ದೀನ್‌ ಅಯ್ಯನಗುಡಿ
ಹೆಸ್ಕಾಂ ನೌಕರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.