ADVERTISEMENT

ಬಾನಂಗಳಲ್ಲಿ ಕೌತುಕ ಉಂಗುರ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2012, 13:30 IST
Last Updated 23 ಆಗಸ್ಟ್ 2012, 13:30 IST

ವಿಜಾಪುರ: ಬಾನಲ್ಲಿ ಸೂರ್ಯನ ಸುತ್ತ ಕಾಮನಬಿಲ್ಲು ತರಹ ರಂಗು ರಂಗಿನ ಉಂಗುರ ಆಕಾರ ಗೋಚರಿಸಿದ ಘಟನೆ ಬುಧವಾರ ಮಧ್ಯಾಹ್ನ ವಿಜಾಪುರದಲ್ಲಿ ಘಟಿಸಿತು.

ಸುಡು ಬಿಸಿಲಿನಲ್ಲಿಯೂ ಜನ ಬೀದಿಗಿಳಿದು ಈ ಕೌತುಕ ವೀಕ್ಷಿಸಿದರು. ಮೊಬೈಲ್, ಕಾಮೆರಾಗಳಲ್ಲಿ ಚಿತ್ರವನ್ನು ಸೆರೆ ಹಿಡಿದರು.

`ಸೂರ್ಯನ ಸುತ್ತ ಕೆರೆ ಕಟ್ಟಿದೆ. ಇದು ಉತ್ತಮ ಮಳೆಯ ಸಂಕೇತ~ ಎಂದು ಬಹುಪಾಲು ಜನ ಹೇಳುತ್ತಿದ್ದರು. ಆದರೆ, `ಇದು ಸಹಜ ಪ್ರಕ್ರಿಯೆ. ಇದರಲ್ಲಿ ವಿಶೇಷತೆ ಏನೂ ಇಲ್ಲ~ ಎಂದು ವಿಜ್ಞಾನಿಗಳು ಪ್ರತಿಕ್ರಿಯಿಸಿದರು.

`ವಾಯು ಮಂಡಳದಲ್ಲಿ ಆವಿ ರೂಪದ ನೀರಿನ ಕಣಗಳು, ತಂಪಿನ ಪ್ರಮಾಣ ಹೆಚ್ಚಾಗಿದ್ದರೆ ಅದರ ಮೂಲಕ ಬೆಳಕು ಹೊರಬರುವಾಗ ಬೆಳಕಿನಲ್ಲಿಯ ಏಳೂ ಬಣ್ಣಗಳು ವಿಭಜನೆಗೊಳ್ಳುತ್ತವೆ. ಆಗ ಸೂರ್ಯನ ಸುತ್ತ ಕಾಮನ ಬಿಲ್ಲು ತರಹ ಬಗೆ ಬಗೆಯ ಬಣ್ಣದ ರಿಂಗ್ ಆಕೃತಿ ಗೋಚರಿಸುತ್ತದೆ~ ಎಂದು ಸ್ಥಳೀಯ ವಿಜ್ಞಾನಿಗಳಾದ ನಿವೃತ್ತ ಪ್ರಾಚಾರ್ಯ ಡಾ.ಬಿ.ಜಿ. ಮಠ, ಡಾ.ಅಶೋಕ ಲಿಮಕರ ಹೇಳಿದರು.

`ಚಂದ್ರನ ಸುತ್ತಲೂ ಇಂತಹ ದೃಶ್ಯ ಆಗಾಗ ಕಂಡು ಬರುತ್ತಿರುತ್ತದೆ. ಇದು ಸಹ ಪ್ರಕ್ರಿಯೆ. ಇದರಲ್ಲಿ ವಿಶೇಷತೆ ಏನೂ ಇಲ್ಲ. ಆದರೂ, ವಾತಾವರಣದಲ್ಲಿ ಆದ್ರತೆಯ ಪ್ರಮಾಣ ಇದೆ ಎಂಬುದು ಇದರ ಸಂಕೇತ. ಮೋಡಗಳಿದ್ದರೆ ಸಹಜವಾಗಿಯೇ ಮಳೆ ಆಗಲೂಬಹುದು~ ಎಂದೂ ಅವರು ಹೇಳಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.