ADVERTISEMENT

ಬಿಎಸ್‌ಡಬ್ಲ್ಯೂ, ಬಿಬಿಎಗೆ ಇಲ್ಲದ ಬೇಡಿಕೆ

ಮಹಿಳಾ ಪದವಿ ಕಾಲೇಜುಗಳಲ್ಲಿಯೂ ಅರ್ಧದಷ್ಟು ಸ್ಥಾನ ಖಾಲಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 5:30 IST
Last Updated 19 ಜುಲೈ 2013, 5:30 IST

ವಿಜಾಪುರ: ಮಹಿಳಾ ಪದವಿ ಕಾಲೇಜುಗಳಲ್ಲಿಯೂ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆಯಾಗಿದೆ. ಬಿ.ಎಸ್.ಡಬ್ಲ್ಯೂ.ಗೆ ಬೇಡಿಕೆ ಕುಸಿ ದಿದ್ದರೆ, ಬಿ.ಬಿ.ಎ. ಕೋರ್ಸ್‌ನ್ನು ಕೇಳುವವರೇ ಇಲ್ಲ!

ವಿಜಾಪುರದಲ್ಲಿರುವ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಳಪಟ್ಟಿರುವ ಏಳು ಪದವಿ ಕಾಲೇಜುಗಳು ಜಿಲ್ಲೆ ಯಲ್ಲಿವೆ. ಈ ಕಾಲೇಜುಗಳಲ್ಲಿ ವಿವಿಧ ಪದವಿ ಕೋರ್ಸ್‌ಗಳ ಪ್ರಥಮ ಸೆಮಿಸ್ಟರ್‌ಗೆ ಒಟ್ಟು 1320 ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಲು ಅವಕಾಶವಿದೆ. ಈ ವರೆಗೆ ಪ್ರವೇಶ ಪಡೆದವರ ಸಂಖ್ಯೆ 763 ಮಾತ್ರ.

ಸಿಂದಗಿಯಲ್ಲಿ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಬಿ.ಬಿ.ಎ. ಮತ್ತು ಬಿ.ಎಸ್.ಡಬ್ಲ್ಯೂ. ಮಹಿಳಾ ಕಾಲೇಜು ಇದೆ. ಜಿಲ್ಲೆಯ ಮಹಿಳಾ ಕಾಲೇಜುಗಳಲ್ಲಿ ಈ ಕೋರ್ಸ್‌ಗಳಿರುವುದು ಈ ಕಾಲೇಜಿನಲ್ಲಿ ಮಾತ್ರ. ಬಿ.ಬಿ.ಎ.ಗೆ 40 ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಲು ಅವಕಾಶ ಇದ್ದರೂ ಒಬ್ಬ ವಿದ್ಯಾರ್ಥಿನಿಯೂ ಪ್ರವೇಶ ಪಡೆದಿಲ್ಲ! ಇದೇ ಕಾಲೇಜಿನಲ್ಲಿ ಬಿ.ಎಸ್.ಡಬ್ಲ್ಯೂ. ಗೆ 40 ಸ್ಥಾನಗಳು ಲಭ್ಯವಿದ್ದು, 10 ವಿದ್ಯಾರ್ಥಿನಿ ಯರಷ್ಟೇ ಪ್ರವೇಶ ಪಡೆದುಕೊಂಡಿದ್ದಾರೆ.

`ಬಿ.ಬಿ.ಎ. ಪದವಿ ಪಡೆದವರಿಗೆ ಎಂ.ಕಾಂ.ಗೆ ಪ್ರವೇಶ ನೀಡುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಎಂ.ಬಿ.ಎ.ಗೆ ಬೇಡಿಕೆಯೂ ಕಡಿವೆುಯಾಗಿದೆ. ಈ ಕಾರಣಕ್ಕಾಗಿಯೇ ಬಿ.ಬಿ.ಎ. ಕೋರ್ಸ್‌ಗೆ ವಿದ್ಯಾ ರ್ಥಿಗಳು ಬರುತ್ತಿಲ್ಲ' ಎನ್ನುತ್ತಾರೆ ಉಪನ್ಯಾಸಕ ರೊಬ್ಬರು.

ಬಿ.ಎಲ್.ಡಿ.ಇ. ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನಲ್ಲಿ ಬಿ.ಎ. ಬಿ.ಕಾಂ. ಕೋರ್ಸ್‌ಗಳು ಇವೆ. ಈ ಕಾಲೇಜಿನಲ್ಲಿ ಮಾತ್ರ ಸ್ಥಾನಗಳು ಬಹುತೇಕ ಭರ್ತಿಯಾಗಿವೆ. ಉಳಿದ ಕಾಲೇಜುಗಳಲ್ಲಿ ಇನ್ನೂ ಅರ್ಧಕ್ಕಿಂತ ಹೆಚ್ಚು ಸ್ಥಾನಗಳು ಖಾಲಿ ಉಳಿದಿವೆ.

`ನಮ್ಮಲ್ಲಿ ಬಿ.ಎ.ಗೆ 240ರ ಪೈಕಿ 12 ಸ್ಥಾನಗಳು ಮಾತ್ರ ಖಾಲಿ ಉಳಿದಿವೆ. ಬಿ.ಕಾಂ.ನ ಎಲ್ಲ 120 ಸ್ಥಾನಗಳು ಭರ್ತಿಯಾಗಿವೆ. ಉತ್ತಮ ಬೋಧಕ ವರ್ಗ, ಅಗತ್ಯ ಮೂಲಸೌಲಭ್ಯ ಇರುವುದೇ ಪ್ರವೇಶ ಸಂಖ್ಯೆ ಹೆಚ್ಚಲು ಕಾರಣ' ಎನ್ನುತ್ತಾರೆ ಬಿಎಲ್‌ಡಿಇ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಂ. ನುಚ್ಚಿ.

ಸಿಕ್ಯಾಬ್ ಸಂಸ್ಥೆಯ ಎ.ಆರ್.ಎಸ್. ಇನಾಮದಾರ ಕಲಾ, ವಿಜ್ಞಾನ, ವಾಣಿಜ್ಯ ಮಹಿಳಾ ಕಾಲೇಜು ಜಿಲ್ಲೆಯ ಅತ್ಯಂತ ಹಳೆಯ ಮಹಿಳಾ ಕಾಲೇಜು. ಪ್ರಥಮ ಸೆಮಿಸ್ಟರ್‌ನ ಬಿ.ಎ.ಗೆ 120 ಸ್ಥಾನಗಳ ಪೈಕಿ 86, ಬಿಎಸ್ಸಿಯ 120     ಸ್ಥಾನಗಳ ಪೈಕಿ 53, ಬಿ.ಕಾಂ.ನ 50ಸ್ಥಾನಗಳ ಪೈಕಿ 26 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ ಎಂಬುದು ಆ ಕಾಲೇಜಿನವರ ಮಾಹಿತಿ.

ನಗರದ ಬಿ.ಡಿ.ಇ. ಸಂಸ್ಥೆಯಲ್ಲಿ ಪ್ರಸಕ್ತ ವರ್ಷದಿಂದ ಮಹಿಳಾ ಪದವಿ ಕಾಲೇಜು ಆರಂಭಿಸಲಾಗಿದ್ದು, ಬಿ.ಎ., ಬಿ.ಎಸ್ಸಿ., ಬಿ.ಕಾಂ. ಕೋರ್ಸ್ ಗಳಿವೆ. ಪ್ರತಿ ವಿಭಾಗದಲ್ಲಿ 100 ಸ್ಥಾನಗಳ ಪೈಕಿ ಬಿ.ಎ. 40, ಬಿ.ಎಸ್ಸಿ. 85, ಬಿ.ಕಾಂ.ನದಲ್ಲಿ 65 ಸ್ಥಾನಗಳು ಖಾಲಿ ಉಳಿದಿವೆ ಎಂದು ಆ ಕಾಲೇಜಿನವರು ಹೇಳಿದರು.

ಇನ್ನು ಬಿ.ಎ. ಕೋರ್ಸ್ ಮಾತ್ರ ಇರುವ ಬಸವನ ಬಾಗೇವಾಡಿ ತಾಲ್ಲೂಕು ಕೂಡಗಿಯ ಮುರುಘರಾಜೇಂದ್ರ ಶಿಕ್ಷಣ ಸಂಸ್ಥೆಯ ಭಾರತಿ ಶಿವಾನಂದ ಗುರವ ಮಹಿಳಾ ಕಲಾ ಪದವಿ ಕಾಲೇಜಿನಲ್ಲಿ  68 ಸ್ಥಾನ, ತಾಳಿಕೋಟೆಯ ಶಿವಯೋಗಿ ಸಂಗಮಾರ್ಯ ವಿದ್ಯಾಸಂಸ್ಥೆಯ  ಎಚ್.ಎಸ್ .ಪಾಟೀಲ ಮಹಿಳಾ ಪದವಿ ಕಲಾ ಕಾಲೇಜಿನಲ್ಲಿ 25 ಸ್ಥಾನ, ಸಿಂದಗಿ ತಾಲ್ಲೂಕು ಕಲಕೇರಿಯ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಬಸವೇಶ್ವರ ಮಹಿಳಾ  ಪದವಿ ಕಾಲೇಜಿನಲ್ಲಿ 67 ಸ್ಥಾನ ಖಾಲಿ ಉಳಿದಿವೆ ಎಂದು ಆಯಾ ಕಾಲೇಜಿನವರು ಮಾಹಿತಿ ನೀಡಿದರು.

ಪ್ರವೇಶಕ್ಕೆ ಇನ್ನೂ ಇದೆ ಅವಕಾಶ: `ಮಹಿಳಾ ಪದವಿ ಕಾಲೇಜುಗಳ ಬಿ.ಎ., ಬಿ.ಕಾಂ., ಬಿ.ಎಸ್ಸಿ, ಬಿ.ಬಿ.ಎ., ಬಿ.ಎಸ್.ಡಬ್ಲೂ ಕೋರ್ಸ್‌ಗಳ ಪ್ರವೇಶಕ್ಕೆ ಇನ್ನೂ ಅವಕಾಶವಿದೆ. ರೂ 50 ದಂಡದೊಂದಿಗೆ ಇದೇ 23 ಮತ್ತು  ರೂ 100 ದಂಡದೊಂದಿಗೆ ಇದೇ 31ರವರೆಗೆ ವಿದ್ಯಾರ್ಥಿನಿಯರು ಪ್ರವೇಶ ಪಡೆಯಬಹುದು' ಎಂಬುದು ಮಹಿಳಾ ವಿಶ್ವವಿದ್ಯಾಲಯದ ಕುಲ ಸಚಿವ ಪ್ರೊ.ಎಸ್.ಎ. ಖಾಜಿ ಅವರ ವಿವರಣೆ.

ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶದ ನಂತರ ಮತ್ತಷ್ಟು ವಿದ್ಯಾರ್ಥಿನಿಯರು ಪ್ರವೇಶ ಪಡೆಯಬುದು ಎಂಬುದು ಆ ಕಾಲೇಜುಗಳವರ ನಿರೀಕ್ಷೆ.

ವಿಜಾಪುರ ಜಿಲ್ಲೆಯ ಮಹಿಳಾ ಪದವಿ ಕಾಲೇಜುಗಳ ದೂರವಾಣಿ ಸಂಖ್ಯೆ:
ಸಿಕ್ಯಾಬ್ ಮಹಿಳಾ ಕಾಲೇಜು, ವಿಜಾಪುರ-08352-277490
ಬಿ.ಎಲ್.ಡಿ.ಇ. ಮಹಿಳಾ ಕಾಲೇಜು, ವಿಜಾಪುರ- 08352-253324
ಬಿಡಿಇ ಸಂಸ್ಥೆಯ ಮಹಿಳಾ ಕಾಲೇಜು, ವಿಜಾಪುರ -08352-259147
ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಮಹಿಳಾ ಕಾಲೇಜು, ಸಿಂದಗಿ -08488-221219
ಬಸವೇಶ್ವರ ಮಹಿಳಾ ಪದವಿ ಕಾಲೇಜು, ಕಲಕೇರಿ- 08424-273243
ಎಚ್.ಎಸ್ .ಪಾಟೀಲ ಮಹಿಳಾ ಕಾಲೇಜು, ತಾಳಿಕೋಟೆ- 08356-266335
ಭಾರತಿ ಶಿವಾನಂದ ಗುರವ ಮಹಿಳಾ ಕಾಲೇಜು, ಕೂಡಗಿ- 9880853415/ 9740507667

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT