ADVERTISEMENT

ಬಿಜೆಪಿ ಮೌನ ತರವಲ್ಲ: ಯತ್ನಾಳ್‌

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 10:20 IST
Last Updated 23 ಅಕ್ಟೋಬರ್ 2017, 10:20 IST

ವಿಜಯಪುರ: ‘ರಾಷ್ಟ್ರ ಮಟ್ಟದಲ್ಲಿ ಹಿಂದುತ್ವದ ಪ್ರತಿಪಾದನೆಗೆ ಪೇಜಾವರ ಮಠಾಧೀಶರನ್ನು ಬಳಸಿಕೊಂಡ ಬಿಜೆಪಿ ಮುಖಂಡರು, ಇದೀಗ ಶ್ರೀಗಳ ವಿರುದ್ಧ ಟೀಕೆ ವ್ಯಕ್ತವಾಗುತ್ತಿದ್ದರೂ ಅವರ ಬೆಂಬಲಕ್ಕೆ ನಿಲ್ಲದಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟರು.

ಈ ವಿಷಯದಲ್ಲಿ ಯಾವ ಕಾರಣಕ್ಕಾಗಿ ಮೌನ ವಹಿಸಿದ್ದಾರೆ ಎಂಬುದನ್ನು ಬಿಜೆಪಿ ಮುಖಂಡರು ಬಹಿರಂಗಗೊಳಿಸಬೇಕು ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಪೇಜಾವರ ಸ್ವಾಮೀಜಿ ವಿರುದ್ಧ ಲಿಂಗಾಯತ ಪ್ರತ್ಯೇಕ ಧರ್ಮದ ಪ್ರತಿಪಾದಕರು ಮಾಡುತ್ತಿರುವ ಟೀಕೆ ಶೋಭೆ ತರುವ ಸಂಗತಿಯಲ್ಲ. ಇದೇ ಪ್ರವೃತ್ತಿ ಮುಂದುವರಿದರೆ ನಾವೂ ಹೋರಾಟಕ್ಕೆ ಇಳಿಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

‘ಸಮಾಜ ಒಡೆಯಬಾರದು ಎಂಬ ಆಶಯದಿಂದ ಪೇಜಾವರ ಶ್ರೀಗಳು ಸಲಹೆ, ಕಿವಿಮಾತು ಹೇಳಿದ್ದಾರೆ. ದೇಶಪ್ರೇಮ, ಸಾಮಾಜಿಕ ಕಳಕಳಿ, ದಲಿತೋದ್ಧಾರ ಸೇರಿದಂತೆ ಇನ್ನಿತರ ಚಟುವಟಿಕೆಗಳ ಮೂಲಕ ಅಪಾರ ಸಂಖ್ಯೆಯ ಭಕ್ತ ಸಮೂಹಕ್ಕೆ ಮಾರ್ಗದರ್ಶಿಯಾಗಿದ್ದಾರೆ. ಅಂಥವರ ಬಗ್ಗೆ ಹಗುರ ಮಾತುಗಳನ್ನಾಡುವುದು ತರವಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.