ADVERTISEMENT

ಬಿಳಿಜೋಳ ಬಿತ್ತನೆ ಪ್ರದೇಶ ಕುಸಿತ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 9:30 IST
Last Updated 30 ಅಕ್ಟೋಬರ್ 2017, 9:30 IST
ವಿಜಯಪುರ ಹೊರವಲಯದ ಭೂತನಾಳ ಸಮೀಪದ ಜೋಳದ ಹೊಲ
ವಿಜಯಪುರ ಹೊರವಲಯದ ಭೂತನಾಳ ಸಮೀಪದ ಜೋಳದ ಹೊಲ   

ವಿಜಯಪುರ: ಒಂದೆಡೆ ಊಟ–ಉಪಾಹಾರಕ್ಕೆ ಜೋಳದ ರೊಟ್ಟಿ ಬಳಸುವವರ ಸಂಖ್ಯೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಬಿಳಿಜೋಳ ಬೆಳೆಯುವ ಪ್ರದೇಶವೇ ಕಡಿಮೆಯಾಗುತ್ತಿದೆ. ‘ಬಿಜಾಪುರದ ಬಿಳಿಜೋಳ’ವು ನೆರೆ ರಾಜ್ಯಗಳಲ್ಲೂ ಹೆಸರುವಾಸಿ. ಆದರೆ, ದಶಕದಿಂದ ಹಿಂಗಾರು ಹಂಗಾಮಿನ ಬಿಳಿಜೋಳದ ಬಿತ್ತನೆ ಪ್ರದೇಶ ಜಿಲ್ಲೆಯಲ್ಲಿ ಕ್ಷೀಣಿಸಿದೆ.

2008–09ರಲ್ಲಿ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ 2.40 ಲಕ್ಷ ಹೆಕ್ಟೇರ್‌ನಲ್ಲಿ ಬಿಳಿ ಜೋಳದ ಬಿತ್ತನೆ ನಡೆದಿತ್ತು. 2012–13 ಹೊರತುಪಡಿಸಿದರೆ ವರ್ಷದಿಂದ ವರ್ಷಕ್ಕೆ ಇದರ ಪ್ರಮಾಣ ಕಡಿಮೆಯಾಗುತ್ತಲೇ ಬಂದಿದೆ. ಪ್ರಸ್ತುತ ಹಂಗಾಮಿನಲ್ಲಿ 1 ಲಕ್ಷ ಹೆಕ್ಟೇರ್‌ ಆಸುಪಾಸು ಮಾತ್ರ ಬಿತ್ತನೆಯಾಗಿದೆ ಎಂಬುದನ್ನು ಜಿಲ್ಲಾ ಕೃಷಿ ಇಲಾಖೆಯ ಅಂಕಿ–ಅಂಶಗಳು ದೃಢೀಕರಿಸುತ್ತವೆ.

‘ಪ್ರಸ್ತುತ ಹಿಂಗಾರು ಹಂಗಾಮಿನಲ್ಲಿ 2.21 ಲಕ್ಷ ಹೆಕ್ಟೇರ್‌ನಲ್ಲಿ ಬಿಳಿಜೋಳ ಬಿತ್ತನೆ ಗುರಿ ಇತ್ತು. ಈವರೆಗೂ ಶೇ 50ರಷ್ಟೂ ಗುರಿ ಸಾಧಿಸಲಾಗಿಲ್ಲ. ಹಿಂದಿನ ವರ್ಷ ಸಹ 1.02 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಸಾಧ್ಯವಾಗಿತ್ತು’ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್ ತಿಳಿಸಿದರು.

ADVERTISEMENT

ಯಂತ್ರೋಪಕರಣಗಳ ಕೊರತೆ
‘ಜೋಳಕ್ಕಿಂತ ಕಡಲೆಯ ಕೊಯ್ಲು ಹಾಗೂ ರಾಶಿ ಮಾಡುವುದು ಸುಲಭ. ಹೀಗಾಗಿ ಹಿಂಗಾರು ಹಂಗಾಮಿನಲ್ಲಿ ಕಡಲೆ ಬಿತ್ತನೆಗೇ ರೈತರು ಆದ್ಯತೆ ನೀಡುತ್ತಿದ್ದಾರೆ. ಇದರ ಪರಿಣಾಮವಾಗಿ ಬಿಳಿಜೋಳದ ಬಿತ್ತನೆ ಪ್ರದೇಶ ಕಡಿಮೆಯಾಗುತ್ತಿದೆ’ ಎನ್ನುತ್ತಾರೆ ಮಂಜುನಾಥ.

ಈ ಹಂಗಾಮಿನ ಬಿಳಿಜೋಳದ ಅವಧಿ ನಾಲ್ಕು ತಿಂಗಳಾದರೆ, ಕಡಲೆ ಮೂರು ತಿಂಗಳ ಅವಧಿಯದ್ದು. ಜೋಳದ ಕೃಷಿಗೆ ಅತ್ಯಾಧುನಿಕ ಯಂತ್ರೋಪಕರಣ ಇಂದಿಗೂ ಲಭ್ಯವಿಲ್ಲ. ಕೊಯ್ಲಿಗೆ ಕೂಲಿ ಕಾರ್ಮಿಕರನ್ನೇ ಅವಲಂಬಿಸಬೇಕು. ರಾಶಿ ಮಾಡಲೂ ಸಮರ್ಪಕ ಯಂತ್ರವಿಲ್ಲ.

ಅಕಾಲಿಕ ಮಳೆ ಸುರಿದರೆ ಬೆಳೆ ಕೈಗೆ ಸಿಗುವುದಿಲ್ಲ. ಸಕಾಲಕ್ಕೆ ಕೃಷಿ ಕಾರ್ಮಿಕರು ಸಿಗದಿದ್ದರೆ ಮಣ್ಣು ಪಾಲಾಗುವ ಸಾಧ್ಯತೆ ಹೆಚ್ಚು. ಆದರೆ, ಕಡಲೆ ಬೆಳೆಯಲ್ಲಿ ಅತ್ಯಾಧುನಿಕ ಯಂತ್ರೋಪಕರಣ ಬಳಸಿ ಒಂದೇ ಸಲಕ್ಕೆ ಕೊಯ್ಲು–ರಾಶಿ ಮಾಡಲು ಅನುಕೂಲವಾಗುತ್ತದೆ. ಹೀಗಾಗಿ ಬಹುತೇಕ ರೈತರು ಅದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಅವರು ವಿಶ್ಲೇಷಿಸಿದರು.

ಕಡಲೆಯಿಂದ ಹೆಚ್ಚು ಆದಾಯ
‘ಮಾರುಕಟ್ಟೆಯಲ್ಲಿ ಪ್ರಸ್ತುತ ಕಡಲೆ ಧಾರಣಿ ಪ್ರತಿ ಕ್ವಿಂಟಲ್‌ಗೆ ₹ 5000 ಇದ್ದರೆ, ಬಿಳಿಜೋಳಕ್ಕೆ ₹ 2000 ದ ಆಸುಪಾಸಿದೆ. ಕಡಲೆ ವಾಣಿಜ್ಯ ಬೆಳೆಯಲ್ಲದಿದ್ದರೂ, ಹೆಚ್ಚು ಆದಾಯ ತಂದುಕೊಡುತ್ತದೆ ಎಂಬ ಕಾರಣದಿಂದ ಅದನ್ನು ಬೆಳೆಯುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಸಹಜವಾಗಿಯೇ ಜೋಳದ ಬಿತ್ತನೆ ಪ್ರದೇಶ ಕಡಿಮೆಯಾಗುತ್ತಿದೆ’ ಎಂದು ಬಿತ್ತನೆ ಬೀಜೋತ್ಪಾದನಾ ಉದ್ಯಮಿ ರವೀಂದ್ರ ಲೋಣಿ ತಿಳಿಸಿದರು.

‘ಈ ಹಿಂದೆ ಪ್ರತಿಯೊಂದು ಮನೆಯಲ್ಲೂ ಜಾನುವಾರುಗಳು ಇರುತ್ತಿದ್ದವು. ಆಹಾರಧಾನ್ಯಕ್ಕಾಗಿ ಬೆಳೆಯುವುದಕ್ಕಿಂತಲೂ ಕಣಕಿಗಾಗಿಯೇ ಯಥೇಚ್ಛವಾಗಿ ಬಿಳಿಜೋಳ ಬಿತ್ತುತ್ತಿದ್ದರು. ಜಾನುವಾರುಗಳ ಸಂಖ್ಯೆ ಕುಸಿಯುತ್ತಿದ್ದಂತೆ ಸಹಜವಾಗಿಯೇ ಜೋಳ ಬಿತ್ತನೆ ಪ್ರದೇಶವೂ ಕುಸಿಯುತ್ತಿದೆ’ ಎಂದು ಕೃಷಿ ಇಲಾಖೆಯ ತಾಂತ್ರಿಕ ವಿಭಾಗದ ಅಧಿಕಾರಿ ಎ.ಪಿ.ಬಿರಾದಾರ ಹೇಳಿದರು.

* * 

ಬಿಳಿಜೋಳದ ಖರ್ಚೂ ಹುಟ್ಟುತ್ತಿಲ್ಲ. ಈ ಹಿಂದೆ ದನ–ಕರುಗಳ ಮೇವಿಗಾಗಿ ಜೋಳ ಬೆಳೆಯುವುದು ಅನಿವಾರ್ಯವಾಗಿತ್ತು. ಇದೀಗ ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಕಡಲೆಯತ್ತ ಹೊರಳಿದ್ದೇವೆ
ಎನ್‌.ಕೆ.ಮನಗೊಂಡ,
ಬಬಲೇಶ್ವರದ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.