ವಿಜಾಪುರ: ಎಲ್ಲೆಡೆ ಈಗ `ಬೆಳಕಿನ~ ಹಬ್ಬ ದೀಪಾವಳಿಯ ಸಡಗರ. ಮನೆಗಳ ಎದುರು ಹಣತೆಗಳ ಸಾಲು; ಆಕಾಶ ಬುಟ್ಟಿಗಳ ಸೊಬಗು. ಬಾನಲ್ಲಿ ಸಿಡಿಮದ್ದಿನ ಚಿತ್ತಾರ. ಲಕ್ಷ್ಮಿಯ ಆರಾಧನೆ. ಸಿಹಿ ತಿಂಡಿಗಳ ವಿನಿಮಯ...
ದೀಪಗಳ ಹಬ್ಬ ತಂದಿರುವ ಸಂಭ್ರಮಕ್ಕೆ ಪಾರವೇ ಇಲ್ಲ. ಎರಡು ದಿನಗಳಿಂದ ಇಡೀ ವಿಜಾಪುರ ನಗರ ಎಣ್ಣೆ ದೀಪ-ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದೆ. ಹೆಂಗಳೆಯರು ಮನೆಯ ಎದುರಿನ ಬೀದಿಯಲ್ಲಿ ಪೈಪೋಟಿಗೆ ಬಿದ್ದವರಂತೆ ರಂಗೋಲಿಗಳನ್ನು ಬಿಡಿಸುತ್ತಿದ್ದಾರೆ. ಮನೆ-ಮನೆಯ ಅಂಗಳಗಳನ್ನು ಅಲಂಕರಿಸುತ್ತಿದ್ದಾರೆ. ಹೀಗಾಗಿ ಬೀದಿಗಳಲ್ಲಿಯ ಆಕರ್ಷಕ ರಂಗವಲ್ಲಿಯ ಚಿತ್ತಾರವೂ ಹಬ್ಬದ ಸೊಬಗನ್ನು ಇಮ್ಮಡಿಗೊಳಿಸಿದೆ.
ಮುದ್ದು ಮಕ್ಕಳು ಕೈಯೊಲ್ಲೊಂದಿಷ್ಟು `ಸುರ್‌ಸುರ್ ಕಡ್ಡಿ~ಗಳನ್ನು ಹಿಡಿದುಕೊಂಡು ಮನೆಯ ಬಾಗಿಲಲ್ಲಿ ನಿಂತು ಬೆಳಗಿಸುತ್ತ ಸಂಭ್ರಮ ಪಡುತ್ತಿದ್ದಾರೆ. ಯುವಕರು ಬಾನೆತ್ತರಕ್ಕೆ ನೆಗೆಯುವ ಪಟಾಕಿಗಳನ್ನು ಸಿಡಿಸುತ್ತಿದ್ದಾರೆ.
ಮಹಿಳೆಯರು ಬಗೆ ಬಗೆಯ ಲಾಡು, ಚಕ್ಕಲಿ, ಚೂಡಾ ಮತ್ತಿತರ ಸಿಹಿ ಪದಾರ್ಥಗಳನ್ನು ತಯಾರಿಸಿಕೊಂಡು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಇದೊಂದು ರೀತಿಯಲ್ಲಿ ಭಾವೈಕ್ಯತೆಯ ಹಬ್ಬವೂ ಆಗಿದೆ.
ಕಳೆದ ಕೆಲ ದಿನಗಳಿಂದ ನಗರದ ಬೇಕರಿ-ಸ್ವೀಟ್‌ಮಾರ್ಟ್‌ಗಳು ಜನರಿಂದ ಕಿಕ್ಕಿರಿದು ತುಂಬಿಹೋಗಿವೆ. ಬಟ್ಟೆ ಅಂಗಡಿ-ಚಿನ್ನಾಭರಣ ಅಂಗಡಿಗಳಲ್ಲಿ ಕಾಲಿಡಲೂ ಸ್ಥಳ ಸಿಗುತ್ತಿಲ್ಲ. ಹಣ್ಣು-ಹಂಪಲು ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಖರೀದಿಯೂ ಅಷ್ಟೇ ಭರಾಟೆಯಿಂದ ನಡೆಯುತ್ತಿದೆ. ಇಲ್ಲಿಯ ಕೆ.ಸಿ. ಮಾರುಕಟ್ಟೆ, ಎಸ್.ಎಸ್. ರಸ್ತೆ, ಸರಾಫ್ ಬಜಾರ್, ಆಜಾದ್ ರಸ್ತೆ, ಎಲ್‌ಬಿಎಸ್ ಮತ್ತಿತರ ಮಾರುಕಟ್ಟೆಗಳು ಮಂಗಳವಾರ ಜನರಿಂದ ತುಂಬಿ ಹೋಗಿದ್ದವು.
ಅಮಾವಾಸ್ಯೆಯ ದಿನವಾದ ಮಂಗಳವಾರ ಇಡೀ ನಗರ ಹಾಗೂ ಜಿಲ್ಲೆಯ ಅಂಗಡಿ-ಮುಂಗಟ್ಟುಗಳು, ಮನೆಗಳಲ್ಲಿ ಹಿಂದೂ ಸಮಾಜ ಬಾಂಧವರು ಲಕ್ಷ್ಮಿ ಪೂಜೆ ನೆರವೇರಿಸಿದರು.
ಲಕ್ಷ್ಮಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಿ, ಪುಷ್ಪ-ವಿದ್ಯುತ್ ದೀಪಗಳಿಂದ ವಿಶೇಷ ಅಲಂಕಾರ ಮಾಡಿದರು. ಹೊಸ ಸೀರೆ-ಕುಬಸ ದೇವಿಗೆ ಸಮರ್ಪಿಸಿದರು. ಗರಿಗರಿಯಾದ ನೋಟು-ಚಿನ್ನ-ಬೆಳ್ಳಿ ಹಾಗೂ ಲೋಹದ ನಾಣ್ಯಗಳನ್ನು ದೇವಿಯ ಮುಂದಿಟ್ಟು ಪೂಜಿಸಿದರು. ಮುತ್ತೈದೆಯರಿಗೆ ಉಡಿ ತುಂಬಿದರು. `ಸಮೃದ್ಧಿ ಕೊಡು-ಸಂಪತ್ತು ವೃದ್ಧಿಸು ತಾಯಿ~ ಎಂದು ಪ್ರಾರ್ಥಿಸಿದರು. ಪೂಜೆಯ ನಂತರ ಬಂಧು-ಮಿತ್ರರು ಎಲ್ಲರೂ ಒಟ್ಟಾಗಿ ಊಟ ಮಾಡಿದರು.
ದೀಪಾವಳಿ ಎಂದರೆ ವರ್ತಕರ ಪಾಲಿಗೆ ಹೊಸ ವರ್ಷದ ಸಂಭ್ರಮ. ಹಳೆಯ ಲೆಕ್ಕ ಚುಕ್ತಾ ಮಾಡಿ ಹೊಸ ಲೆಕ್ಕ ಇಡುವುದು ಪರಿಪಾಠ. ಅದೇ ಕಾರಣಕ್ಕೆ ಲಕ್ಷ್ಮಿ ಪೂಜೆಯೊಂದಿಗೆ ಹೊಸ ಲೆಕ್ಕದ ಪುಸ್ತಗಳನ್ನು ಇಟ್ಟು ಪೂಜಿಸಿದರು.
ದೀಪಾವಳಿ ಪೂಜೆಗಾಗಿ ಫಲ ಇರುವ ಬಾಳೆ ದಿಂಡು, ತೆಂಗಿನ ಗರಿ, ಕಬ್ಬು, ಚೆಂಡು ಹೂವಿನ ಗಿಡ, ಬಗೆ ಬಗೆಯ ಹೂವುಗಳ ಮಾರಾಟ ಇಲ್ಲಿಯ ಅಂಬೇಡ್ಕರ ಚೌಕ್‌ನಲ್ಲಿ ಜೋರಾಗಿತ್ತು. ರೈತರು ಹಾಗೂ ವರ್ತಕರು ರಾತ್ರಿಯೇ ಇವುಗಳನ್ನು ತಂದು ಇಲ್ಲಿ ದಾಸ್ತಾನು ಮಾಡಿಟ್ಟುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.