ADVERTISEMENT

ಬೇಸಿಗೆ ಆರಂಭದಲ್ಲೇ ನೀರಿಗೆ ಹಾಹಾಕಾರ..!

ಗ್ರಾಮೀಣ ಪ್ರದೇಶದಲ್ಲಿ ಉಲ್ಬಣಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ; ಕೊಡಗಳ ಪಾಳಿ

ಡಿ.ಬಿ, ನಾಗರಾಜ
Published 14 ಮಾರ್ಚ್ 2018, 7:01 IST
Last Updated 14 ಮಾರ್ಚ್ 2018, 7:01 IST
ಮುದ್ದೇಬಿಹಾಳ ತಾಲ್ಲೂಕು ನಾಗಬೇನಾಳ ತಾಂಡಾದಲ್ಲಿ ಮಿನಿ ಟ್ಯಾಂಕ್‌ ಮುಂದೆ ನೀರಿಗಾಗಿ ಗ್ರಾಮಸ್ಥರು ಕೊಡಗಳನ್ನು ಇಟ್ಟಿದ್ದಾರೆ.
ಮುದ್ದೇಬಿಹಾಳ ತಾಲ್ಲೂಕು ನಾಗಬೇನಾಳ ತಾಂಡಾದಲ್ಲಿ ಮಿನಿ ಟ್ಯಾಂಕ್‌ ಮುಂದೆ ನೀರಿಗಾಗಿ ಗ್ರಾಮಸ್ಥರು ಕೊಡಗಳನ್ನು ಇಟ್ಟಿದ್ದಾರೆ.   

ವಿಜಯಪುರ: ಬೇಸಿಗೆ ಆರಂಭಗೊಂಡ ಬೆನ್ನಿಗೆ ಜಿಲ್ಲೆಯ ಗ್ರಾಮೀಣ ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಕೆಲ ಗ್ರಾಮಗಳಲ್ಲಿ ವಾರ ಕಳೆದರೂ ನೀರು ಸಮರ್ಪಕವಾಗಿ ಪೂರೈಕೆ ಆಗಿಲ್ಲ.

ಗ್ರಾಮ ಪಂಚಾಯ್ತಿ ಆಡಳಿತ ನಿರ್ವಹಿಸುತ್ತಿರುವ ಅನೇಕ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ. ಕೈಪಂಪ್‌ಗಳಲ್ಲೂ ನೀರು ಬರುತ್ತಿಲ್ಲ. ಕುಡಿಯುವ ನೀರು ಅರಸಿ ಗ್ರಾಮೀಣ ಜನರು ಗ್ರಾಮದ ಹೊರ ಭಾಗದಲ್ಲಿನ ಜಮೀನುಗಳಲ್ಲಿರುವ ಖಾಸಗಿ ಕೊಳವೆಬಾವಿಗಳತ್ತ ಹೆಜ್ಜೆ ಹಾಕುವ ಚಿತ್ರ ಜಿಲ್ಲೆಯಲ್ಲಿ ಸಾಮಾನ್ಯ.

ಖಾಸಗಿ ಕೊಳವೆಬಾವಿಗಳಲ್ಲೂ ಜನರ ಅಗತ್ಯಕ್ಕೆ ತಕ್ಕಷ್ಟು ನೀರು ಸಿಗದಾಗಿದೆ. ನೆತ್ತಿ ಸುಡುವ ಕೆಂಡಂದಂತಹ ಬಿಸಿಲಲ್ಲಿ ಹೊಲಗಳಿಗೆ ತೆರಳಿ ನೀರು ತರಲು ಬಹುತೇಕರಿಗೆ ಕಷ್ಟಸಾಧ್ಯ. ಜಾನುವಾರು ಹೊಂದಿರುವ ರೈತ ಕುಟುಂಬಗಳು ನೀರಿಗಾಗಿ ಪರಿತಪಿಸುತ್ತಿವೆ. ಗ್ರಾಮದ ಮಿನಿ ಟ್ಯಾಂಕ್‌, ಮನೆ ಮುಂಭಾಗದ ನಲ್ಲಿಗಳ ಬಳಿ ಕೊಡಗಳ ಪಾಳಿ ಕಂಡು ಬರುತ್ತಿದೆ.

ADVERTISEMENT

ಬಹು ಹಳ್ಳಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿರುವ ಗ್ರಾಮಗಳನ್ನು ಹೊರತುಪಡಿಸಿದರೆ, ಉಳಿದ ಎಲ್ಲೆಡೆ ಸಮಸ್ಯೆ ಕಾಡಲಾರಂಭಿಸಿದೆ. ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿ ದಂಡೆಯ ಕೆಲವು ಗ್ರಾಮಗಳಲ್ಲೇ ಈಗಾಗಲೇ ನೀರಿನ ಸಮಸ್ಯೆ ತಲೆದೋರಿದೆ.

ತೋಟದ ವಸ್ತಿಗಳಲ್ಲಿ ನೀರಿನ ಸಮಸ್ಯೆ ತೀವ್ರ ಉಲ್ಬಣಿಸಿದೆ. ತೆರೆದ ಬಾವಿ, ಕೊಳವೆಬಾವಿಗಳು ಬತ್ತಿದ್ದು, ನೀರಿಗಾಗಿ ಕಿ.ಮೀ.ಗಟ್ಟಲೆ ನಿತ್ಯವೂ ಅಲೆದಾಡಬೇಕಿದೆ. ಜಾನುವಾರು ನಿರ್ವಹಣೆ ಕಷ್ಟಕರವಾಗಿದೆ. ತಾಂಡಾಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

‘ನಮ್‌ ತಾಂಡಾದಾಗ ಹದಿನೈದು ದಿನದ ಹಿಂದೆ ನಿತ್ಯ ನೀರು ಪೂರೈಕೆಯಾಗುತ್ತಿತ್ತು. ಹತ್ತು ದಿನ ಕಳೆಯಿತು. ನೀರಿಗಾಗಿ ಪರಿತಪಿಸುವುದು ತಪ್ಪಿಲ್ಲ. ಈಗ ಬರಬಹುದು ಎಂಬ ನಿರೀಕ್ಷೆಯಿಂದಲೇ ಕೊಡಗಳು ಮಿನಿ ಟ್ಯಾಂಕ್‌ ಸುತ್ತ ಪಾಳಿ ಹಚ್ಚಿವೆ’ ಎಂದು ಮುದ್ದೇಬಿಹಾಳ ತಾಲ್ಲೂಕು ನಾಗಬೇನಾಳ ತಾಂಡಾದ ಶಿವಾನಂದ ನಾಯ್ಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೃಷ್ಣಾ ಹೊಳಿ ದಂಡೆಯಿಂದ ನಮ್‌ ತಾಂಡಾ ಎರಡು ಕಿ.ಮೀ. ಅಂತರದಲ್ಲಿದೆ. ಒಂದು ಕಿ.ಮೀ. ದೂರದಲ್ಲಿ ಕೃಷ್ಣಾ ಮೇಲ್ದಂಡೆ ಕಾಲುವೆ ಹಾದು ಹೋಗಿದೆ. ಆದ್ರೂ ನಮ್ಗ ನೀರಿನ ತ್ರಾಸ್ ಹೆಚ್ಚಾಗಕ್ಕತೈತಿ. ಶುದ್ಧ ಕುಡಿಯುವ ನೀರು ಸಿಗ್ತಿಲ್ಲ. ಮಿನಿ ಟ್ಯಾಂಕಿಗೆ ಪಂಚಾಯ್ತಿ ಆಡಳಿತ ನೀರು ತುಂಬುಸ್ತಿಲ್ಲ. ಊರಲ್ಲಿ ಇದ್ದ ಕೈಪಂಪ್‌ನಲ್ಲಿ ನೀರು ಸಾಕಾಗುವಷ್ಟ್‌ ಬರ್ತಿಲ್ಲ. ಹೊಡ್ದು, ಹೊಡ್ದು ಸುಸ್ತಾಗತೈತಿ. ಸ್ಥಳೀಯ ಪಂಚಾಯ್ತಿ ಸದಸ್ಯರು, ಪಿಡಿಒಗೆ ಹೇಳಿದ್ರೂ ಸಮಸ್ಯೆ ಬಗೆಹರಿದಿಲ್ಲ. ಭರವಸೆ ಬಿಟ್ಟರೇ ನೀರು ಸಿಕ್ತಿಲ್ಲ’ ಎಂದು ಶಿವಾನಂದ ಅಸಮಾಧಾನ ವ್ಯಕ್ತಪಡಿಸಿದರು.

*
ಕೈಪಂಪ್‌ನಿಂದ ಒಂದು ಕೊಡ ನೀರು ತರೋದು ತುಂಬಾ ತ್ರಾಸಾಗ್ತಿದೆ. ನಾಲ್ಕೈದು ದಿನದ ನೀರನ್ನೇ ಕಾಪಿಟ್ಟುಕೊಂಡು ಕುಡಿಯುತ್ತಿದ್ದೇವೆ. ಶುದ್ಧ ನೀರು ಸಿಗದಾಗಿದೆ.
–ಧರೆಪ್ಪ ಹಾರೇಕರ,
ಹಿರೇರೂಗಿ ನಿವಾಸಿ

*
ಶಾಂತಿ ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ ಎಂದು ಸಂಬಂಧಿಸಿದ ಸ್ಥಳೀಯ ಆಡಳಿತ, ಅಧಿಕಾರಿ ವರ್ಗಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
–ಸುನೀಲ ಜಮಾದಾರ,
ಶಾಂತಿನಗರ ನಿವಾಸಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.