ADVERTISEMENT

ಭರದಿಂದ ನಡೆದ ಪೈಪ್‌ಲೈನ್ ದುರಸ್ತಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 5:45 IST
Last Updated 17 ಫೆಬ್ರುವರಿ 2012, 5:45 IST

ಚಡಚಣ: ಪಟ್ಟಣಕ್ಕೆ ಭೀಮಾ ನದಿಯಿಂದ ನೀರು ಪೂರೈಸಲೆಂದು ಸುಮಾರು 20 ವರ್ಷಗಳ ಹಿಂದೆ ನಿರ್ಮಿಸಿದ್ದ ಪೈಪ್‌ಲೈನ್ ಸರಿಯಾಗಿ ಕೆಲಸ ನಿರ್ವಹಿಸದೇ ಸ್ಥಗಿತಗೊಂಡಿತ್ತು. ಈ ಸ್ಥಗಿತಗೊಂಡ ಕೊಳವೆಗಳ ಮೂಲಕ ಪಟ್ಟಣಕ್ಕೆ ನೀರು ಪೂರೈಸಲು ಗ್ರಾಮ ಪಂಚಾಯಿತಿ ಭರದ ದುರಸ್ತಿ ಕಾಮಗಾರಿಯನ್ನು ಆರಂಭಿಸಿದೆ.

ಈ ಕುರಿತು ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಚಂದಕ್ಕ ಚವ್ಹಾಣ, ಪಟ್ಟಣಕ್ಕೆ ಈಗಾಗಲೇ ಬಹು ಹಳ್ಳಿಗಳ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಭೀಮಾ ನದಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಆದರೂ ಮುಂಬರುವ ಬೇಸಿಗೆಯಲ್ಲಿ ಪಟ್ಟಣಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಸ್ಥಿತಿ ನಿರ್ಮಾಣ ವಾಗಬಹುದು. ಮುಂಜಾಗ್ರತಾ ಕ್ರಮವಾಗಿ ಈ ಕಾಮಗಾರಿ ಆರಂಭಿಸಲಾಗಿದೆ.

ಸುಮಾರು 20 ವರ್ಷಗಳ ಹಿಂದೆ ಶಾಸಕರಾಗಿದ್ದ ರಮೇಶ ಜಿಗಜಿಣಗಿಯವರ ಪ್ರಯತ್ನದಿಂದ ನೀರು ಪೂರೈಕೆ ಯೋಜನೆಯ ಕೊಳವೆ ಮಾರ್ಗ ಜೋಡಿಸಲಾಗಿತ್ತು. ಅವು ಆಗಲೇ ಸ್ಥಗಿತಗೊಂಡಿದ್ದವು. ಅಲ್ಲಿಂದ ಇಲ್ಲಿಯವರೆಗೆ ಯಾವ ಅಧಿಕಾರಿಗಳು ಈ ದುರಸ್ತಿಗೆ ಮುಂದಾಗಿರಲಿಲ್ಲ. ಆದ್ದರಿಂದ ಗ್ರಾ.ಪಂ. ಅನುದಾನದಲ್ಲಿ, ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭೀಮಾ ನದಿಯಿಂದ ಈ ದುರಸ್ತಿ ಕಾಮಗಾರಿ ಆರಂಭಿಸಲಾಗಿದೆ. ಕೆಲವೇ ದಿನಗಳಲ್ಲಿ ದುರಸ್ತಿ ಕಾಮಗಾರಿ ಮುಗಿಯಲಿದ್ದು, ಈ ಕೊಳವೆಗಳು ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡಲಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆರ್.ಬಿ. ಬಿರಾದಾರ, ಸದಸ್ಯರಾದ ಕಾಂತೂಗೌಡ ಪಾಟೀಲ, ಚಂದು ಶಿಂಧೆ, ರಾಜು ಕೋಳಿ, ಸೋಮುಶೇಖರ ಬಡಿಗೇರ, ಪ್ರಭಾಕರ ನಿರಾಳೆ, ಚಾಂದಸಾಬ ನದಾಫ, ಇಸಾಕ್‌ನದಾಫ, ಸಂಗೀತಾ ಮಠ, ಭರತೇಶ ಚವ್ಹಾಣ, ಸಂಗೀತಾ ಕೋಟಿ, ಸುರೇಶ ಶಿಂಧೆ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.