ADVERTISEMENT

ಭೀಮಾನದಿ ಪ್ರವಾಹಕ್ಕೆ ಕಬ್ಬಿನ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 10:45 IST
Last Updated 8 ಸೆಪ್ಟೆಂಬರ್ 2011, 10:45 IST

ಇಂಡಿ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಯಲ್ಲಿ ನೀರು ಹರಿಬಿಟ್ಟ ಕಾರಣ ಭೀಮಾ ನದಿಯಲ್ಲಿ ಕಳೆದ 3 ದಿವಸಗಳಿಂದ ಪ್ರವಾಹ ಬಂದಿದೆ. 

ಇದರಿಂದ ಧೂಳಖೇಡ-ಚಣೇಗಾಂವ ಗ್ರಾಮಗಳ ರಸ್ತೆ ಬಂದಾಗಿದ್ದು, ಚಣೆಗಾಂವ ಗ್ರಾಮದ ಜನ ಅಣಚಿ ಮಾರ್ಗವಾಗಿ ಸಂಚರಿಸುತ್ತಿದ್ದಾರೆ. ಭೀಮಾ ಪ್ರವಾಹದಿಂದ ಯಾವುದೇ ಪ್ರಾಣ ಹಾನಿಯಾಗಲ್ಲ. ಭೀಮಾ ತೀರದಲ್ಲಿಯ ಕಬ್ಬಿನ ಬೆಳೆಗಳಿಗೆ ಹೆಚ್ಚಿನ ಹಾನಿಯಾಗಿದೆ. 


 ಭೀಮಾ ತೀರದಲ್ಲಿ 4 ರಿಂದ 6 ತಿಂಗಳ ಕಬ್ಬಿನ ಬೆಳೆಗಳಿಗೆ ಹಾನಿಯಾಗಿದೆ ಎಂದು ರೈತರು ತಿಳಿಸಿದ್ದಾರೆ. ಇನ್ನುಳಿದ 6 ರಿಂದ 10 ತಿಂಗಳ ಬೆಳೆಗಳಿಗೆ ಅಷ್ಟೊಂದು ಹಾನಿಯಾಗಿಲ್ಲ. ಭೀಮಾ ನದಿಯಲ್ಲಿ ಹರಿಯುತ್ತಿರುವ ನೀರು ಕಲುಷಿತವಾಗಿರುವುದರಿಂದ ಕಬ್ಬಿನ ಸುಳಿಯಲ್ಲಿ ಆ ನೀರು ನುಗ್ಗಿದರೆ, ಅಲ್ಲಿ ಮಣ್ಣು ಬೀಡುತ್ತದೆ. ಇದರಿಂದ ಆ ಕಬ್ಬು ಒಣಗುತ್ತದೆ ಎಂಬ ಆತಂಕ ರೈತರಲ್ಲಿದೆ.

ಬುಧವಾರ ನದಿಯಲ್ಲಿ ಸುಮಾರು 4 ಅಡಿಗಳಷ್ಟು ನೀರು ಕಡಿಮೆಯಾಗಿದ್ದು, ರೈತರಲ್ಲಿ ನಿಟ್ಟುಸಿರು ಬಿಡುವಂತಾಗಿದೆ. ಉಜನಿ ಜಲಾಶಯದಿಂದ ಕ್ರಮೇಣವಾಗಿ ನೀರು ಹರಿಸುವ ಪ್ರಮಾಣ ಕಡಿಮೆ ಮಾಡಲಾಗಿದೆ ಎಂದು ತಹಸೀಲ್ದಾರ ಜಿ.ಎಲ್.ಮೇತ್ರಿ ತಿಳಿಸಿದ್ದಾರೆ.

ಭೀಮಾ ನದಿಗೆ ನೀರು ಹರಿಸುವುದಾದರೆ ಸಾಕಷ್ಟು ಮುಂಚಿತವಾಗಿ ತಿಳಿಸುವುದರೊಂದಿಗೆ ಪ್ರವಾಹ ಬರುವಂತೆ ಹೆಚ್ಚಿನ ನೀರು ಬಿಡುವದಿಲ್ಲ ಎಂದು ಮಹಾರಾಷ್ಟ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳ ಭೀಮಾ ತೀರದ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಭೀಮಾ ತೀರದಲ್ಲಿ ಪ್ರವಾಹ ಬಂದಿದ್ದಾದರೆ ಅದನ್ನು ಸಮರ್ಥವಾಗಿ ಎದುರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಪ್ರತಿ ಗ್ರಾಮಗಳಲ್ಲಿ ಅಧಿಕಾರಿಗಳು ಮುಕ್ಕಾಂ ಹೂಡುವಂತೆ ಸೂಚಿಸಲಾಗಿದೆ. ಅವರು ಕಟ್ಟೆಚ್ಚರ ವಹಿಸಿಕೊಂಡಿದ್ದಾರೆ. ಭೀಮಾ ನದಿಯಲ್ಲಿ ಪ್ರವಾಹ ಕಂಡದ್ದಾದರೆ ಕ್ರಮ ಜರುಗಿಸುತ್ತಾರೆ ಎಂದು ತಹಸೀಲ್ದಾದರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT