ADVERTISEMENT

ಭೀಮಾ ನದಿ ತಟದಲ್ಲಿ ನೀರಿಗೆ ಹಾಹಾಕಾರ

ಚಡಚಣ: ಸಂಪೂರ್ಣ ಬತ್ತಿರುವ 6 ಬ್ಯಾರೇಜ್‌ಗಳು; ಹಲವು ಗ್ರಾಮಗಳಲ್ಲಿ ದುಸ್ಥಿತಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 11:09 IST
Last Updated 1 ಜೂನ್ 2018, 11:09 IST
ಚಡಚಣ ಸಮೀಪದ ಉಮರಣಿ ಹತ್ತಿರದ ಭೀಮಾ ನದಿ ಸಂಪೂರ್ಣ ಬರಿದಾಗಿರುವುದು
ಚಡಚಣ ಸಮೀಪದ ಉಮರಣಿ ಹತ್ತಿರದ ಭೀಮಾ ನದಿ ಸಂಪೂರ್ಣ ಬರಿದಾಗಿರುವುದು   

ಚಡಚಣ: ರಾಜ್ಯದ ಗಡಿಗೆ ಹೊಂದಿಕೊಂಡಿರುವ ಭೀಮಾ ನದಿ ಬತ್ತಿ 15 ದಿನಗಳು ಗತಿಸಿವೆ. ಇದರಿಂದಾಗಿ ಭೀಮಾ ನದಿ ತೀರದ ಗ್ರಾಮಗಳೂ ಸೇರಿದಂತೆ ಚಡಚಣ ಪಟ್ಟಣಕ್ಕೂ ನೀರು ಸರಬರಾಜು ಸ್ಥಗಿತಗೊಂಡಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಭೀಮಾ ನದಿಗೆ ನಿರ್ಮಿಸಲಾದ 8 ಬ್ಯಾರೇಜುಗಳ ಪೈಕಿ 6 ಬ್ಯಾರೇಜ್‌ಗಳು ಸಂಪೂರ್ಣ ಬತ್ತಿ ಮರಭೂಮಿಯಂತಾಗಿದೆ. ನದಿಯಲ್ಲಿ ಗುಂಡಿ ತೋಡಿದರೂ ಕುಡಿಯಲು ಹನಿ ನೀರು ದೊರಕುತ್ತಿಲ್ಲ.

ನದಿ ತೀರದ ಗ್ರಾಮಗಳಾದ ದಸೂರ, ಉಮರಜ, ನೀವರಗಿ, ಸಂಖ ಉಮರಾಣಿ, ಹಿಂಗಣಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಜನ ಹಾಗೂ ಜಾನುವಾರುಗಳಿಗೆ ನೀರು ದೊರಕುವುದೇ ದುಸ್ತರವಾಗಿದೆ. ನದಿಯಲ್ಲಿ ಆಳವಾದ ಹಳ್ಳ ತೋಡಿ ಅಲ್ಪ ನೀರು ದೊರೆತರೂ ಈ ನೀರು ಕುಡಿಯಲು ಯೋಗ್ಯವಾಗಿಲ್ಲ. ರಾಸಾಯನಿಕ ಹಾಗೂ ಸತ್ತ ಜಲಚರ ಪ್ರಾಣಿಗಳ ತ್ಯಾಜ್ಯ ಬೆರೆತು ಗಬ್ಬುವಾಸನೆ ಬೀರುತ್ತಿದೆ.

ADVERTISEMENT

ಚಡಚಣ, ರೇವತಗಾಂವ ಹಾಗೂ ನಾಲ್ಕು ಗ್ರಾಮಗಳಿಗೆ ಮಾಡಲಾದ ಶಾಶ್ವತ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಸ್ಥಗಿತಗೊಂಡಿದೆ. ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಆದರೆ ನದಿ ತೀರದ ಗ್ರಾಮಗಳಲ್ಲಿ ಜನರು ಕುಡಿಯುವ ನೀರಿಗಾಗಿ ನಾಲ್ಕಾರು ಕಿಲೋ ಮೀಟರ್ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಳವೆ ಬಾವಿಗಳು, ತೆರೆದ ಬಾವಿಗಳು ಬತ್ತಿ ಬರಿದಾಗಿವೆ. ಅಡವಿ ವಸತಿ ಪ್ರದೇಶದಲ್ಲಿ ವಾಸಮಾಡುವ ಜನರ ಬವಣೆಯಂತೂ ಹೇಳ ತೀರದಾಗಿದೆ.

ಕೂಡಲೇ ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಿ, ನದಿ ಪಾತ್ರದ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ನದಿ ತಟದ ಗ್ರಾಮಸ್ಥರ ಆಗ್ರಹವಾಗಿದೆ.

**
ಭೀಮಾ ನದಿ ಬತ್ತಿರುವುದರಿಂದ ದನ ಕರುಗಳು ಹಾಗೂ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗಿದೆ. ಕಬ್ಬು, ಬಾಳೆ ಸೇರಿದಂತೆ ವಾಣಿಜ್ಯ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಕೂಡಲೇ ಸರ್ಕಾರ ನದಿಗೆ ಉಜನಿ ಜಲಾಶಯದಿಂದ ನೀರು ಬಿಡಿಸಲು ಕ್ರಮ ಕೈಗೊಳ್ಳಬೇಕು
ಶ್ರೀಶೈಲ ಅಂಜುಟಗಿ, ನೀವರಗಿ ಗ್ರಾಮದ ರೈತ

**
ಭೀಮಾ ನದಿಗೆ ನೀರಿ ಹರಿಸಲು ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತನಾಡಿ, ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯೊಂದಿಗೆ ಮಾತನಾಡಲಾಗಿದೆ
ರಮೇಶ ಜಿಗಜಿಣಗಿ, ಕೇಂದ್ರ ಸಚಿವ 

ಎ.ಎಸ್.ಕರ್ಜಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.