ADVERTISEMENT

ಮಕ್ಕಳಿಗೆ ಸಂಸ್ಕೃತಿಯ ಧಾರೆ ಎರೆಯಿರಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 6:05 IST
Last Updated 2 ಸೆಪ್ಟೆಂಬರ್ 2013, 6:05 IST

ಕಂಸನು, ದೇವಕಿಯ 8ನೇ ಮಗು ದುರ್ಗಾದೇವಿಯನ್ನು ಸಂಹಾರ ಮಾಡಲು ಹೊರಟಾಗ, ಆ ಮಗು ನಿನ್ನ ಸಂಹಾರಕ ಬೇರೆ ಕಡೆ ಬೆಳೆಯುತ್ತಿದ್ದಾನೆ ಎನ್ನುವ ವಿಷಯ ತಿಳಿಸಿದಾಗ, ಗೋಕುಲದಲ್ಲಿಯ ಎಲ್ಲ ಚಿಕ್ಕ ಮಕ್ಕಳನ್ನು ಕೊಲ್ಲಲು ಕಂಸ ಪೂತನೀಯರನ್ನು ಕಳುಹಿಸಿದನು.

ಊರಿನ ಜನರಿಗೆ ತೊಂದರೆಯಾದರೂ ಪರವಾಗಿ ಇಲ್ಲ ತನಗೆ ಮಾತ್ರ ಏನು ಆಗಬಾರದು ಎಂಬ ದುಷ್ಟನೀತಿಯನ್ನು ಕಂಸನು ಹೊಂದಿದ್ದನು. ತನ್ನ ಸ್ವಾರ್ಥಕೋಸ್ಕರ ಕಂಸ ಸಾವಿರಾರು ಮಕ್ಕಳನ್ನು ಸಂಹರಿಸಲು ಆದೇಶಿಸಿದನು.

ಆಗ ಮಹಾ ಮಾಯಾವಿಯಾದ ಪೂತನಿ ಅತ್ಯಂತ ಸುಂದರಿ ಸ್ತ್ರೀರೂಪವನ್ನು ಧರಿಸಿ, ತನ್ನ ಆಕರ್ಷಕ ರೂಪದಿಂದ ಗೋಪಿಕೆಯಂತೆ ನಟಿಸುತ್ತಾ ಯಶೋಧೆಯಿಂದ ಪುಟ್ಟ ಕೃಷ್ಣನನ್ನು ಪಡೆದು ವಿಷದ ಮೊಲೆ ಉಣಿಸಲು ಬಂದಳು.

ಆದರೆ ಕೃಷ್ಣನ ಮುಂದೆ ಆಕೆಯದೇನೂ ನಡೆಯಲಿಲ್ಲ. ಅವಳ ವಿಷ ಅವನನ್ನು ಏನೂ ಮಾಡಲಿಲ್ಲ. ಕೃಷ್ಣ ಚಿಕ್ಕ ಮಗುವಾಗಿರುವಾಗಲೇ ತನ್ನ ಪರಾಕ್ರಮವನ್ನು, ದುಷ್ಟ ನಿಗ್ರಹ ಕಾರ್ಯವನ್ನು ಮಾಡಿ ತೋರಿಸಿದ. ಸಾವಿರಾರು ಚಿಕ್ಕಮಕ್ಕಳನ್ನು ಕೊಂದ ಪೂತನಿಯನ್ನು ಸಂಹರಿಸಿ, ಕೃಷ್ಣ ಅದ್ಭುತ ಕಾರ್ಯವನ್ನು ಮಾಡಿದ. 

ಮಾಯೆಯಾದ ಪೂತನಿಯು ತನ್ನ ಆಕರ್ಷಕ ರೂಪದಿಂದ ಯಶೋಧೆಯನ್ನು ಮುಗ್ದಳನ್ನಾಗಿ ಮಾಡಿದಂತೆ, ದುಶ್ಚಟಗಳು ನಮಗೆ ತನ್ನ ಕಡೆ ಆಕರ್ಷಣೆ ಉಂಟು ಮಾಡುವ ಮೂಲಕ ನಮ್ಮ ದಾರಿಯನ್ನು ತಪ್ಪಿಸುತ್ತವೆ. ಆಧ್ಯಾತ್ಮವಾಗಿ ಭಗವಂತನ ವಿರುದ್ಧ ಏನು ಕಾರ್ಯಮಾಡಲು ಸಾಧ್ಯವಿಲ್ಲ. ಸಹೃದಯದಿಂದ ಭಗವಂತನನ್ನು ಓಡಿಸಲು ಮಾಡುವ ಪ್ರಯತ್ನ ವಿಫಲವಾದ ಹೋರಾಟ, ದೈತ್ಯರಾದ ಪೂತನಿ ಶಕಟಾಸುರ ಮುಂತಾದವರು ತಾವೇ ಅವನಿಂದ ಸಂಹಾರವಾದರು.

ಬಾಲ ಕೃಷ್ಣನನ್ನು ಪೂತನಿಗೆ ಕೊಟ್ಟಂತೆ  ನಮ್ಮ ಸಮಾಜದ ಸ್ಥಿತಿಯಾಗುತ್ತಿದೆ.  ನಮ್ಮ ಬಾಲಕೃಷ್ಣ ಅದೆಲ್ಲವನ್ನು ಜೀರ್ಣಿಸಿಕೊಂಡ. ಆದರೆ ಕೃಷ್ಣನಂತಿರುವ ಬಾಲಕರಿಗೆ ಅದು ಜೀರ್ಣಿಸಿಕೊಳ್ಳುವ ಶಕ್ತಿಯಿಲ್ಲ. ಕಾರಣ ಅಂತ ಪೂತನೀಯ ವಿಷ ದೊರೆಯದಂತೆ ನಾವು ಕಾಪಾಡಿಕೊಳ್ಳಬೇಕು.

ಕಾಮಧೇನು ಅಮೃತ ಕೊಡುವಂತೆ ನಮ್ಮ ಮಕ್ಕಳಿಗೆ ಸಂಸ್ಕೃತಿ ಎಂಬ ಅಮೃತದ ಧಾರೆ ಎರೆಯಬೇಕು. ಪೂತನಿಯಿಂದ ಕಲೆಯಬೇಕಾದ ಪಾಠ ಬಾಲ ಕೃಷ್ಣ ತಿಳಿಸಿರುವನು. ಮಕ್ಕಳಿಗೆ ಬಾಲ್ಯದಿಂದಲೇ ನಮ್ಮ ಸಂಸ್ಕೃತಿ, ಇತಿಹಾಸ, ಭಾಷೆಯ ಬಗ್ಗೆ ಒಳ್ಳೆಯ, ಉತ್ತಮವಾದ ಅಮೃತಪ್ರಾಯ ಶಿಕ್ಷಣವನ್ನು ತಾಯಂದಿರು ಮಕ್ಕಳಿಗೆ  ಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.