ಆಲಮಟ್ಟಿ: ಕೃಷ್ಣಾ ನದಿಗೆ ರೈತರೇ ಸೇರಿ ಕೊಂಡು ಸೋಮವಾರ ಬಾಗಿನ ಅರ್ಪಿಸಿ, ಒಂದೆಡೆ ಸೇರಿ ನೀರು ಬಳಕೆ ಹಾಗೂ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳಿಗ್ಗೆಯಿಂದಲೇ ಆಲಮಟ್ಟಿ ಸುತ್ತಮುತ್ತಲಿನ ನೂರಾರು ರೈತರು ಸುರಿಯುತ್ತಿದ್ದ ಧಾರಾಕಾರ ಮಳೆಯನ್ನು ಲೆಕ್ಕಿಸದೇ, ಮೆರವಣಿಗೆ ನಡೆಸಿ ಬಾಗಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ರಾಮಲಿಂಗೇಶ್ವರ ದೇವಸ್ಥಾನದಿಂದ ಕೃಷ್ಣಾ ನದಿಯ ದಂಡೆಯವರೆಗೂ ಮೆರವಣಿಗೆ ಮೂಲಕ ರೈತರು, ರೈತ ಮಹಿಳೆಯರು ಸಾಗಿದರು. ಜೀವ ನದಿಯಾದ ಕೃಷ್ಣೆ ತಮ್ಮೆಲ್ಲರನ್ನು ಕಾಪಾಡಲಿ ಎಂದು ಬೇಡಿಕೊಂಡರು.
ಕೃಷ್ಣಾ ನದಿಯಲ್ಲಿ ರೈತರ ಪರವಾಗಿ ಬಿಲ್‌ಕೆರೂರಿನ ಸಿದ್ಧಲಿಂಗ ಸ್ವಾಮೀಜಿ ಪೂಜೆ ಸಲ್ಲಿಸಿದರು.
ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ದಂಪತಿ, ರೈತ ಮುಖಂಡ ಬಸವರಾಜ ಕುಂಬಾರ ದಂಪತಿ, ಜಿಪಂ ಸದಸ್ಯ ಶಿವಾ ನಂದ ಅವಟಿ ಸೇರಿದಂತೆ ಮೊದಲಾದ ಗಣ್ಯರು ಕೃಷ್ಣೆಗೆ ಬಾಗಿನ ಅರ್ಪಿಸಿದರು. ಅಲ್ಲಿದ್ದ 108 ಕುಂಬಗಳಿಗೆ ಗಂಗಾಪೂಜೆ ಸಲ್ಲಿಸಲಾಯಿತು.
ಕಾಶೀನಕುಂಟಿ, ಯಲಗೂರ, ನಿಡಗುಂದಿ, ಬೇನಾಳ, ವಡವಡಗಿ, ಯಲ್ಲಮ್ಮನ ಬೂದಿಹಾಳ, ಕಾಳಗಿ, ಹುಲ್ಲೂರು ಮೊದಲಾದ ಗ್ರಾಮಗಳ ನೂರಾರು ರೈತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.