ADVERTISEMENT

ಮದ್ಯದಂಗಡಿಗೆ ಬೀಗ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 7:40 IST
Last Updated 5 ಮಾರ್ಚ್ 2012, 7:40 IST

ವಿಜಾಪುರ:  ನಗರದ ಸೊಲ್ಲಾಪುರ ರಸ್ತೆಯ ಬಂಜಾರಾ ಕ್ರಾಸ್ ಸಮೀಪದ ಬಡಾವಣೆಯಲ್ಲಿನ ಜನರಿಗೆ ತೀವ್ರ ತೊಂದರೆ ಮಾಡುತ್ತಿರುವ ಎಂ.ಎಸ್.ಐ.ಎಲ್ ಕಂಪೆನಿಗೆ ಸೇರಿದ ಮದ್ಯದ ಅಂಗಡಿಗೆ ಬೀಗ ಜಡಿದ ಕರವೇ ಮುಖಂಡರು ಟಾಯರ್‌ಗೆ ಬೆಂಕಿ ಹಚ್ಚಿ  ಭಾನುವಾರದಂದು ಪ್ರತಿಭಟಿಸಿದರು.

ಬಡಾವಣೆಯ ಮಹಿಳೆಯರಿಗೆ, ಶಾಲಾ ಮಕ್ಕಳಿಗೆ ಮದ್ಯದ ಅಂಗಡಿಯಿಂದ ತೀವ್ರ ತೊಂದರೆಯಾಗಿದೆ. ಅಂಗಡಿಯನ್ನು  ಕೂಡಲೆ ಸ್ಥಳಾಂತರಿಸಬೇಕು. ಇಲ್ಲಿನ ಬಡಾವಣೆಯ ಜನರಿಗೆ ನಿತ್ಯ ಕುಡುಕರಿಂದ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಶೇಷರಾವ್ ಮಾನೆ, ಮಹಿಳಾ ಘಟಕದ ಜಿಲ್ಲಾ ಘಟಕದ ಅಧ್ಯಕ್ಷೆ ಅನುರಾಧಾ ಕಲಾಲ ಮಾತನಾಡಿ, ಬಡಾವಣೆಯ ಜನರು, ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗೆ ಮದ್ಯ ಮಾರಾಟ ಕೇಂದ್ರದಿಂದ ತೊಂದರೆಯಾಗಿದೆ.

ಮದ್ಯದ ಅಂಗಡಿಯನ್ನು ಕೂಡಲೇ ತೆರವುಗೊಳಿಸಿ, ಮಹಿಳೆಯರಿಗೆ ರಕ್ಷಣೆ ನೀಡಬೇಕು. ಮಕ್ಕಳ ಮೇಲೆ ಮಾನಸಿಕವಾಗಿ ದುಷ್ಪರಿಣಾಮ ಬೀರದಂತೆ ತಡೆಯಬೇಕು ಎಂದು ಒತ್ತಾಯಿಸಿದರು.

ಸರ್ಕಾರದಿಂದ ಮದ್ಯ ಮಾರಾಟದ ಪರವಾನಿಗೆ ಪಡೆದ ಅಂಗಡಿಯನ್ನು ಅನಧಿಕೃತ ಸ್ಥಳದಲ್ಲಿ ತೆರೆಯಲಾಗಿದೆ. ಬಡಾವಣೆಯ ಜನರಿಗೆ ಇದರಿಂದ ಆಗುತ್ತಿರುವ ತೊಂದರೆಯ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿತ್ತು.
 
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಈ ಅಂಗಡಿಯನ್ನು ತೆರವುಗೊಳಿಸಲು ಒಂದು ತಿಂಗಳ ಹಿಂದೆ ಅಬಕಾರಿ ಇಲಾಖೆಗೆ ಸೂಚನೆ ನೀಡಿದ್ದರು. ಆದರೆ ಅಬಕಾರಿ ಇಲಾಖೆಯ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಇದನ್ನು ತೆರವುಗೊಳಿಸಿರಲಿಲ್ಲ. ಇದರಿಂದಾಗಿ ಅಂಗಡಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಬಕಾರಿ ಅಧಿಕಾರಿಗಳು ಮದ್ಯದ ಅಂಗಡಿಯನ್ನು ಶೀಘ್ರ ತೆರವುಗೊಳಿಸುವ ಭರವಸೆ ನೀಡಿದರು. ಕರವೇ ಮುಖಂಡರಾದ ಸಂಜೀವ ಕರ್ಪೂರಮಠ, ರೇಷ್ಮಾ ಪಡೇಕನೂರ, ಎಸ್.ಎಂ. ಮಡಿವಾಳರ, ಸುರೇಶ ಬಿಜಾಪುರ, ಎಮ್.ಸಿ. ಮುಲ್ಲಾ, ಅನಿತಾ ಜಾಲವಾದಿ, ಮೌನೇಶ ಬಡಿಗೇರ, ದಸ್‌ಗೀರ ಸಾಲೂಟಗಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.