ADVERTISEMENT

ಮರಳು ಮಾಫಿಯಾ ನಿಯಂತ್ರಣಕ್ಕೆ ತಾಕೀತು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 5:45 IST
Last Updated 16 ಫೆಬ್ರುವರಿ 2012, 5:45 IST

ವಿಜಾಪುರ: `ಪರಿಸರಕ್ಕೆ ಹಾನಿ ಮಾಡಿ, ಸರ್ಕಾರದ ಆದಾಯ ಕೊಳ್ಳೆ ಹೊಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಮಾಫಿಯಾ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು~ ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾ ಮಟ್ಟದ ಮರಳು ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿ, ಭೀಮಾ ನದಿಯಲ್ಲಿ ಮಹಾರಾಷ್ಟ್ರದವರು ಯಾಂತ್ರಿಕ ದೋಣಿಗಳನ್ನು ಬಳಸಿ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ. ಅವರು ಕರ್ನಾಟಕ ಗಡಿಯಲ್ಲಿ ಮರಳು ತೆಗೆಯದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಸೂಚಿಸಿದರು.

`ನದಿಯಲ್ಲಿ ಫಿಲ್ಟರ್ ಮರಳು ಗಣಿಗಾರಿಕೆ ನಡೆಸದಂತೆ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿದೆ. ಆದರೂ ಮಹಾರಾಷ್ಟ್ರ ರಾಜ್ಯದವರೂ ಭೀಮಾ ನದಿಯಲ್ಲಿ ಯಾಂತ್ರಿಕ ದೋಣಿ ಬಳಸಿ ಮರಳು ಗಣಿಗಾರಿಕೆ ಮಾಡುತ್ತಿದ್ದಾರೆ. ಮಹಾರಾಷ್ಟ್ರ  ಸರ್ಕಾರದ ಮರಳು ನೀತಿಯ ಆದೇಶ ಪ್ರತಿ ಪಡೆದು ಅಧ್ಯಯನ ನಡೆಸಬೇಕು~ ಎಂದು ಗಣಿ ಮತ್ತು ಭೂ ಗರ್ಭ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

`ಜಿಲ್ಲೆಯ ಮರಳು ಕಳ್ಳಸಾಗಾಣಿಕೆ ಮಾಡುವವರ ಮೇಲೆ ತೀವ್ರ ನಿಗಾ ವಹಿಸಿಬೇಕು. ಝಳಕಿ ಚೆಕ್ ಪೋಸ್ಟ್ ಸೇರಿದಂತೆ ವಿವಿಧೆಡೆ ಬಿಗಿ ಬಂದೋಬಸ್ತ್ ಮಾಡಬೇಕು. ಪರವಾನಿಗೆ ಇಲ್ಲದೇ ಮರಳು ಸಾಗಿಸುವವರ ವಿರುದ್ಧ ಮೂಕದ್ದಮೆ ದಾಖಲಿಸಬೇಕು~ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ತಿಳಿಸಿದರು.

ಸಿಂದಗಿ ಮತ್ತು ಇಂಡಿ ತಾಲ್ಲೂಕುಗಳಲ್ಲಿ ಹರಾಜು ಆದ  ಮರಳು ಬ್ಲಾಕ್‌ಗಳಿಗೆ ಸಂಪರ್ಕ ರಸ್ತೆಗಳಿಲ್ಲದೇ ಗುತ್ತಿಗೆದಾರರು ಸಮಸ್ಯೆ ಎದುರಿಸು ತ್ತಿದ್ದಾರೆ. ಉದ್ಯೋಗ ಖಾತರಿ ಯೋಜನೆಯಡಿ ಸಂಪರ್ಕ ರಸ್ತೆ ನಿರ್ಮಿಸಬೇಕು ಎಂದರು.

ಇ-ಟೆಂಡರ್: ಸ್ಥಳೀಯ ಮರಳು ಮಾಫಿಯಾ ನಿಯಂತ್ರಿಸಿ ಬಿಡ್‌ನಲ್ಲಿ ಹೊರ ಜಿಲ್ಲೆಯವರು  ಭಾಗ ವಹಿಸಲು ಅನುಕೂಲವಾಗುವಂತೆ ಇ-ಟೆಂಡರ್ ಕರೆಯಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

14 ಚೆಕ್ ಪೋಸ್ಟ್: ಮರಳು ಅಕ್ರಮ ತಡೆಯಲು ಇಂಡಿ ತಾಲ್ಲೂಕಿನ ಉಮರಜ, ಉಮರಾಣಿ, ಧೂಳಖೇಡ, ಚಣೇಗಾಂವ, ಹಿಂಗಣಿ, ಗುಬ್ಬೇವಾಡ, ಮಣ್ಣೂರ, ಶಿರಾಡೋಣ, ಝಳಕಿ, ಇಂಡಿ ರೈಲು ನಿಲ್ದಾಣ, ಇಂಡಿ, ಸಾಲೋಟಗಿ, ನಾದ ಕೆ.ಡಿ. ಹಾಗೂ ಸಿಂದಗಿ ತಾಲ್ಲೂಕಿನ ಆಲಮೇಲ, ದೇವಣಗಾಂವ, ಬಗಲೂರ, ಕುಮಟಗಿ, ಮಲಘಾಣ ಗ್ರಾಮಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗುವುದು.  27 ಕಡೆ ಮರಳು ದಾಸ್ತಾನಿಗೆ ಸ್ಟಾಕ್ ಯಾರ್ಡ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ರೂ.9ಲಕ್ಷ ದಂಡ: ಭೀಮಾ ಮತ್ತು ಕೃಷ್ಣಾ ನದಿ ಪಾತ್ರದಲ್ಲಿ ಅನಧಿಕೃತವಾಗಿ ಮರಳು ಗಣಿಗಾರಿಕೆ ಪತ್ತೆ ಹಚ್ಚಿ 2011-12ನೇ ಸಾಲಿನಲ್ಲಿ ಈವರೆಗೆ ರೂ.9.60 ಲಕ್ಷ ದಂಡ ವಸೂಲಿ ಮಾಡಲಾಗಿದೆ. 5 ಮೂಕದ್ದಮೆ ದಾಖಲಿಸಲಾಗಿದೆ. 6 ಬೋಟ್‌ಗಳನ್ನು ಸುಟ್ಟುಹಾಕಲಾಗಿದ್ದು, 9 ಬೋಟ್‌ಗಳನ್ನು ಗ್ಯಾಸ್ ಕಟರ್‌ನಿಂದ ಕತ್ತರಿಸಿ ನೀರಿನಲ್ಲಿ ಮುಳುಗಿಸಿ ನಾಶ ಪಡಿಸಲಾಗಿದೆ.

ಕೃಷ್ಣಾ ನದಿಯ ಬಬಲಾದ ಗ್ರಾಮದಲ್ಲಿ ನದಿಯಲ್ಲಿ ಮರಳು ಗಣಿಗಾರಿಕೆ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿ ಬೋಟ್ ನಾಶಪಡಿಸಲಾಗಿದೆ ಎಂದು ಗಣಿ ಮತ್ತು ಭೂ ಗರ್ಭ ಇಲಾಖೆಯ ಅಧಿಕಾರಿ ನಂಜುಂಡಸ್ವಾಮಿ ವಿವರಿಸಿದರು.

ಈ ವರೆಗೆ 44 ಮರಳು ಬ್ಲಾಕ್‌ಗಳನ್ನು ಹರಾಜು ಮಾಡಲಾಗಿದೆ. ಲೋಕೋಪಯೋಗಿ ಇಲಾಖೆ ವತಿಯಿಂದಲೇ ಮರಳು ಗಣಿಗಾರಿಕೆ ನಡೆಸಿ, ಪ್ರತಿ ಕ್ಯೂಬಿಕ್ ಮೀಟರ್‌ಗೆ ರೂ.400 ದರ ನಿಗದಿ ಪಡಿಸಿ, ಇಂಡಿಯಲ್ಲಿ 220, ಸಿಂದಗಿಯಲ್ಲಿ 365  ಪರವಾನಗಿಗಳನ್ನು ವಿತರಿಸಿದೆ. ಒಟ್ಟು ರೂ.13.05 ಲಕ್ಷ  ರಾಜಧನ ವಸೂಲಿ ಮಾಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾ ಹಕ ಎಂಜಿನಿಯರ್ ರಾಜಶೇಖರ ಯಡಹಳ್ಳಿ ಹೇಳಿದರು. ಪ್ರಭಾರ ಎಸ್ಪಿ ಎಫ್.ಎ. ಟ್ರಾಸ್ಗರ್, ತಹಶೀಲ್ದಾರರಾದ ರಾಜಶ್ರಿ ಜೈನಾಪುರ (ವಿಜಾಪುರ), ಮೇತ್ರಿ (ಇಂಡಿ), ವಣಕ್ಯಾಳ (ಸಿಂದಗಿ) ಇತರ ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.