ADVERTISEMENT

ಮುಂಗಾರು ಮಳೆ ಚುರುಕು: ಬಿತ್ತನೆಯಲ್ಲಿ ತೊಡಗಿದ ರೈತ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 6:00 IST
Last Updated 15 ಜೂನ್ 2013, 6:00 IST

ಆಲಮಟ್ಟಿ: ಕಳೆದ ಕೆಲ ವರ್ಷಗಳಿಂದ ಸಕಾಲಕ್ಕೆ ಮಳೆ ಬಾರದೇ ರೈತಾಪಿ ವರ್ಗ ಚಿಂತಾಕ್ರಾಂತವಾಗಿತ್ತು, ಆದರೇ ಈ ಬಾರಿ ವರುಣ ದೇವ ನಮ್ಮ ತಮ್ಮ ಮುನಿಸನ್ನು ಬದಿಗೆ ಸರಿಸಿ ರೈತರಲ್ಲಿ ಕೃಪೆ ತೋರಿದ್ದಾನೆ, ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದ ರೈತರಲ್ಲಿ ಸಂತಸದ ವಾತಾವರಣ ಮೂಡಿದೆ.

ಭೂಮಿ ಹಸಿಯಾಗಿದೆ. ಕಳೆದ ಎರಡು ದಿನಗಳಿಂದ ಮಳೆ ಕಡಿಮೆಯಾಗಿದ್ದರಿಂದ ಆಲಮಟ್ಟಿ, ನಿಡಗುಂದಿ, ವಂದಾಲ, ಗೊಳಸಂಗಿ ಸೇರಿದಂತೆ ಬಹುತೇಕ ಪ್ರದೇಶದಲ್ಲಿ ಮುಂಗಾರು ಬೆಳೆ ಬಿತ್ತನೆಯಲ್ಲಿ ರೈತ ತೊಡಗಿದ್ದಾನೆ.

ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಈ ಬಾರಿ ಚುರುಕಾಗಿ ಆರಂಭಗೊಂಡಿದ್ದು ಊಳುವುದು, ಬೀಜ ಬಿತ್ತನೆ ಮಾಡುವುದು, ಹರಗುವುದು, ನೆಲ ಸಪಾಟ ಮಾಡುವುದು ಸೇರಿದಂತೆ ಮೊದಲಾದ ಕಾರ್ಯಗಳಲ್ಲಿ ರೈತ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ.

`ಸರಕಾರದವ್ರ ಕೊಡುವ ಬೀಜ ನಂಬಕೊಂಡ ಕುತ್ರ ಮಳೆ ಹೋಕ್ಕಾವ್ರಿ, ಅದ್ಕ ರೊಕ್ಕಾ ಜಾಸ್ತಿ ಕೊಟ್ಟ ಬೀಜ ತಂದ ತೊಗರಿ ಬಿತ್ತಾಕತ್ತಿನ್ರೀ...'ಎಂದು ವಂದಾಲದ ರೈತ  ಹನುಮಂತ ಗುಂಡಾಪುರ ಹೇಳಿದಾಗ ಸರಕಾರ ನೀಡುವ ರಿಯಾಯತಿ ದರ ಬೀಜದ ವಿತರಣೆಯ ಲೋಷದೋಷ ಅರ್ಥವಾಗುತ್ತದೆ.

`ಈಗ ಹೆಸರ ಹಾಕೀನ್ರೀ..ಎರಡ ತಿಂಗಳದಾಗ ಕಡ್ಯಾಕ ಆಗ್ತೈತ್ರಿ. ಮುಂದ ಉತ್ತರಿ ಮಳಿಗಿ ಹಿಂಗಾರ ಬೆಳಿ ಬಿಳಿ ಜೋಳ ಬಿತ್ತಿನ್ರೀ...' ಎಂದು ಬಿತ್ತನೆ ಯಲ್ಲಿ ತೊಡಗಿದ್ದ ರೈತ ಮಲ್ಲಪ್ಪ ಕುಂಬಾರ ಹೇಳುತ್ತಾರೆ.
ಈ ಭಾಗದಲ್ಲಿ ಮುಂಗಾರು ಬೆಳೆ ಅಲ್ಪಾವಧಿ ಬೆಳೆಯಾಗಿ ಪರಿಗಣಿ ಸುತ್ತಾರೆ, ಸಪ್ಟೆಂಬರ್ ಒಳಗೆ ಎಲ್ಲ ಬೆಳೆಗಳನ್ನು ಪಡೆಯುವ ರೀತಿಯಲ್ಲಿ ಬಿತ್ತನೆ ಮಾಡಲಾಗುತ್ತದೆ.

ಸಪ್ಟೆಂಬರ್ ಇಲ್ಲವೆ ಅಕ್ಟೋಬರ್‌ನಲ್ಲಿ ಹಿಂಗಾರು ಬೆಳೆಯಾಗಿ ಹೆಚ್ಚಾಗಿ ಸೂರ್ಯಕಾಂತಿ, ಬಿಳಿ ಜೋಳ, ಗೋಧಿ, ಕುಶುಬಿ ಸೇರಿದಂತೆ ನಾನಾ ಬೆಳೆಗಳನ್ನು ಬಿತ್ತನೆ ಮಾಡುತ್ತಾರೆ.  ಆದರೇ ತೊಗರಿ ಮಾತ್ರ ಈಗ ಬಿತ್ತನೆ ಮಾಡಿದ್ದು ಕೈಗೆ ಬರುವುದು ಡಿಸೆಂಬರ್ ಇಲ್ಲವೇ ಜನವರಿಯಲ್ಲಿ.

`ಚಲೋ ಮಳಿ ಆಗೈತ್ರಿ..ಒಂದ ವಾರ ಬಿಟ್ಟ ಮತ್ತ ಮಳಿ ಆದ್ರ ಬೀಜ ಮೊಳಕಿ ಒಡಿತೈತ್ರಿ' ಎನ್ನುತ್ತಾರೆ ಗೂಗಿಹಾಳ.

ಬೀಜ, ಗೊಬ್ಬರ  ಒತ್ತಾಯ: ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ಸಿಗುವ ಬೀಜ ಹಾಗೂ ಗೊಬ್ಬರ ಸಕಾಲಕ್ಕೆ ಸಿಗುವಂತಾಗಬೇಕು ಮತ್ತು ರೈತರಿಗೆ ಅವಶ್ಯಕವಾಗುವಂತೆ ಬೀಜ ಪೂರೈಕೆಯಾಗಬೇಕು ಎಂದು ಹಲವಾರು ರೈತರು ಆಗ್ರಹಿಸುತ್ತಾರೆ.

ಸೋಮವಾರದಿಂದ ವಿತರಣೆ: ಕೃಷಿ ಇಲಾಖೆಯಿಂದ ಇದೇ 17ರಿಂದ  ನಿಡಗುಂದಿ ಪಟ್ಟಣದಲ್ಲಿ ಸಬ್ಸಿಡಿ ದರದಲ್ಲಿ ಕೇವಲ ಬೀಜವನ್ನು ಮಾತ್ರ ವಿತರಿಸಲಾಗುವುದು ಎಂದು ಜಿಪಂ ಸದಸ್ಯ ಶಿವಾನಂದ ಅವಟಿ ತಿಳಿಸಿದರು.

ಸಬ್ಸಿಡಿ ದರದಲ್ಲಿ ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿ, ತೊಗರಿ,ಹೆಸರು ಸೇರಿದಂತೆ ಇನ್ನೀತರ ಬೀಜಗಳನ್ನು ನಿಡಗುಂದಿ ಪಟ್ಟಣದ ಶ್ರೀ ರುದ್ರೇಶ್ವರ ಮಠದ ಹತ್ತಿರ ಸಂಚಾರಿ ಬೀಜ ವಿತರಣಾ ಕೇಂದ್ರದಲ್ಲಿ ವಿತರಿಸಲಾ ಗುವುದು, ನಿಡಗುಂದಿ ಸುತ್ತಮುತ್ತಲಿನ ಗ್ರಾಮದ ಎಲ್ಲಾ ರೈತರು (ಸಣ್ಣ ಮತ್ತು ದೊಡ್ಡ) ಬೀಜವನ್ನು ಸಬ್ಸಿಡಿ ದರದಲ್ಲಿ ಪಡೆಯಬಹುದು ಎಂದು ಅವಟಿ ತಿಳಿಸಿದರು.
ಚಂದ್ರಶೇಖರ ಕೋಳೇಕರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.