ADVERTISEMENT

ಮುಳವಾಡ ಏತ ನೀರಾವರಿ ಕಾಮಗಾರಿ ಆರಂಭಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 5:35 IST
Last Updated 16 ಫೆಬ್ರುವರಿ 2012, 5:35 IST

ಕೊಲ್ಹಾರ: ವಿಜಾಪುರ ಜಿಲ್ಲೆಯ ಮೇಲೆ ನಿಜವಾದ ಕಾಳಜಿಯಿದ್ದರೆ ಸರಕಾರ ಕೂಡಲೇ ಕೃಷ್ಣಾ ನದಿಯ ನೀರಾವರಿಯ ಬಾಕಿ ಕಾಮಗಾರಿ ಯೋಜನೆಗಳನ್ನು ಶೀಘ್ರವಾಗಿ  ಆರಂಭಿಸಬೇಕು ಎಂದು ಮಾಜಿ ಶಾಸಕ ಶಿವಾನಂದ ಪಾಟೀಲ ಆಗ್ರಹಿಸಿದರು.

ಇಲ್ಲಿಗೆ ಸಮೀಪದ ಮುಳವಾಡ ಗ್ರಾಮದಲ್ಲಿ ರೈತ ಹಿತ ರಕ್ಷಣಾ ಹೋರಾಟ ಸಮಿತಿಯವರು ಹಮ್ಮಿಕೊಂ ಡಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಬೆಂಬಲ ಸೂಚಿಸಿ ಅವರು ಮಾತನಾಡಿದರು.

ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸರಕಾರ ಮೊಸಳೆ ಕಣ್ಣೀರು ಹಾಕುತ್ತಿದೆ. ಮುಳವಾಡ ಏತ ನೀರಾವರಿಯ ಬಾಕಿ ಯೋಜನೆಗಳಿಗೆ ಅನುದಾನವನ್ನು ಸರಕಾರ ಏಕೆ ನೀಡುತ್ತಿಲ್ಲ ಎಂಬುದನ್ನು ಸರಕಾರ ರೈತರಿಗೆ ಹೇಳಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಸಂಪೂರ್ಣ ನೀರಾವರಿಗೆ ಸರಕಾರ ಈಗ ಮಂಡಿಸಲಿರುವ ಬರುವ ಬಜೆಟ್‌ನಲ್ಲಿ ಹೆಚ್ಚಿನ ಅನುದಾನವನ್ನು ಘೋಷಿಸಬೇಕು. ಎ ಸ್ಕೀಂ ಕಾಲುವೆಗಳಿಗೆ ಇನ್ನಷ್ಟು ಹೆಚ್ಚುವರಿ ಕಾಲುವೆಗಳನ್ನು  ಜೋಡಿಸಬೇಕಲ್ಲದೆ, ಬಾಕಿ ಬಿ ಸ್ಕೀಂ ಯೋಜನೆಯನ್ನು ಶೀಘ್ರ ಆರಂಭಕ್ಕೆ ಕ್ರಮ ಕೈಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು. ಕಾಮಗಾರಿಗಳಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಬಾರದು ಎಂದು ಹೇಳಿದರು.

ಸದಾಶಿವ ಶ್ರಿಗಳು, ಗುರುಲಿಂಗಯ್ಯ ಸ್ವಾಮೀಜಿ ನೇತೃತ್ವವನ್ನು ವಹಿಸಿದ್ದು, ಡಾ.ಎಚ್.ಎಸ್. ಹೂಗಾರ, ಸೋಮನಗೌಡ ಪಾಟೀಲ, ಬಾಪುಗೌಡ ಮನಗೂಳಿ, ಅಶೋಕ ಶಿರೂರ, ತಾವರಸಿಂಗ ರಾಠೋಡ, ಎಸ್.ಆರ್. ಚೌದ್ರಿ, ಬಿ.ಎಸ್. ಕಳಸಗೊಂಡ, ಶಿವಾನಂದ ಚನಾಳ, ಎಂ.ಬಿ. ಕೆಂಗನಾಳ, ರೂಪಾ ಕರಾಡೆ, ಜ್ಯೋತಿ ಆಸಂಗಿ, ಸವಿತಾ ಗಾಯಕವಾಡ, ಸಾವಿತ್ರಿ ವಿಜಾಪುರ, ನಾಜಿನ ವಾಲೀಕಾರ, ದಯಾನಂದಯ್ಯ ಹಿರೇಮಠ, ಬಸಗೊಂಡಪ್ಪ ಪಾರಗೊಂಡ, ಬಸಪ್ಪ ಆಸಂಗಿ, ಮಲ್ಲನಗೌಡ ಪಾಟೀಲ, ಎ.ಪಿ. ಮುಲ್ಲಾ, ಶೇಖಪ್ಪ ಜತ್ತಿ, ಶ್ರಿಕಾಂತ ಮೇತ್ರಿ, ಶ್ರಿಶೈಲ ಮಾಸ್ತರ ಹಾಗೂ ಇತರರು ಪಾಲ್ಗೊಂಡಿದ್ದರು.

ಸತ್ಯಾಗ್ರಹಕ್ಕೆ ಬೆಂಬಲ
ರೈತರ ಸತ್ಯಾಗ್ರಹಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬಸವನ ಬಾಗೇವಾಡಿ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ನಂದಿ ಬೆಂಬಲ ಸೂಚಿಸಿದ್ದಾರೆ.

ಬುಧವಾರದ ಧರಣಿಯಲ್ಲಿ ಸಂಘದ ಪದಾಧಿಕಾರಿಗಳಾದ ಶ್ರಿಕಾಂತ ಮೇತ್ರಿ, ಶೇಖು ಕಕಮರಿ, ರಮೇಶ ಈಟಿ, ಚಿದಾನಂದ ಈಟಿ, ಯಮನಪ್ಪ ಹೊಸಮನಿ, ಗುರುಲಿಂಗ ಧನ್ಯಾಳ, ಸುನಿಲ ಪೂಜಾರಿ ಜೊತೆ ಭಜನೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.