ADVERTISEMENT

ಮೈದುಂಬುತ್ತಿರುವ ಕೃಷ್ಣೆ: ರೈತರಲ್ಲಿ ಹರ್ಷ

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 10:57 IST
Last Updated 11 ಜುಲೈ 2013, 10:57 IST
ಕೊಲ್ಹಾರ ಸಮೀಪದ ಸೇತುವೆ ಬಳಿ ಹರಿಯುತ್ತಿರುವ ಕೃಷ್ಣಾ ನದಿಯು ಈಗ ಮೈದುಂಬಿ ಹರಿಯುತ್ತಿದೆ.
ಕೊಲ್ಹಾರ ಸಮೀಪದ ಸೇತುವೆ ಬಳಿ ಹರಿಯುತ್ತಿರುವ ಕೃಷ್ಣಾ ನದಿಯು ಈಗ ಮೈದುಂಬಿ ಹರಿಯುತ್ತಿದೆ.   

ಕೊಲ್ಹಾರ: ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಒಡಲು ಈಗ ಮೈದುಂಬುತ್ತಾ ಬರುತ್ತಿದೆ.

ಕಳೆದ ಮೂರ‌್ನಾಲ್ಕು ತಿಂಗಳಿಂದ ನೀರಿಲ್ಲದೆ ಒಣಗಿದ್ದ ನದಿಯ ಇಕ್ಕೆಲಗಳಲ್ಲಿ ಹಸಿರು ಮೂಡಿ, ಜೀವರಾಶಿಗಳಲ್ಲಿ ಈಗ ಹೊಸ ಉತ್ಸಾಹ ಮೂಡಿದೆ.

ಬುಧವಾರ ಆಲಮಟ್ಟಿ ಜಲಾಶಯದಲ್ಲಿ 515.7 ಮೀ.  ನೀರು ಸಂಗ್ರಹಗೊಂಡಿದ್ದು, ದೂರದ ಗಲಗಲಿಯವರೆಗೂ ಎಲ್ಲಿ ನೋಡಿದರಲ್ಲಿ ಕೃಷ್ಣಾ ನದಿ ನೀರು ಸಾಗರದಂತೆ ವಿಶಾಲವಾಗಿ ಕಾಣುತ್ತಿದೆ.

ನೆರೆಯ ಮಹಾರಾಷ್ಟ್ರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ ಕಳೆದ ಹತ್ತು ದಿನಗಳಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಆದರೆ ಈ ಭಾಗದ ಅವಳಿ ಜಿಲ್ಲೆಗಳಾದ ವಿಜಾಪುರ ಮತ್ತು ಬಾಗಲಕೋಟೆಯಲ್ಲಿ ಮಳೆ ಇಲ್ಲದೆ ರೈತರು ಚಿಂತಾಕ್ರಾಂತರಾಗಿದ್ದರೂ, ಕೃಷ್ಣೆಗೆ ನೀರು ಹರಿದು ಬರುತ್ತಿರುವುದರಿಂದ ಹರ್ಷಗೊಂಡಿದ್ದಾರೆ.

ನದಿಯಲ್ಲಿ ಈಗ ನೀರು ಹೆಚ್ಚಿಗೆ ಸಂಗ್ರಹವಾಗುತ್ತಿರುವುದರಿಂದ ಮೀನುಗಾರಿಕೆಗೂ ಹೆಚ್ಚು ಅನುಕೂಲವಾಗಲಿದೆ. ಕೃಷ್ಣೆಯ ಒಡಲು ತುಂಬುತ್ತಾ ಹೋದಂತೆ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ. ನದಿಯಿಂದ ಹತ್ತಾರು ಕಿ.ಮೀ. ವರೆಗೂ ಪೈಪ್‌ಗಳಿಂದ ನೀರು ಒಯ್ಯುವ ರೈತರು ಮೆಕ್ಕೆಜೋಳ, ಕಬ್ಬು, ತರಕಾರಿ ಬೆಳೆಯಲು ಸಾಧ್ಯವಾಗುತ್ತದೆ. ಕೂಲಿ ಕಾರ್ಮಿಕರಿಗೆ ಕೆಲಸ ಸಿಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.